ADVERTISEMENT

‘ಪಬ್ಬಾರ್‌’ ಕಣಿವೆಯಲ್ಲಿ ಧೀರೆನ್‌

​ಪ್ರಜಾವಾಣಿ ವಾರ್ತೆ
Published 8 ಮೇ 2025, 0:30 IST
Last Updated 8 ಮೇ 2025, 0:30 IST
<div class="paragraphs"><p>ಧೀರೆನ್</p></div>

ಧೀರೆನ್

   

ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್‌ ತಮ್ಮ ಗೀತಾ ಪಿಕ್ಚರ್ಸ್‌ನಡಿ ಸಾಲು ಸಾಲು ಸಿನಿಮಾಗಳ ನಿರ್ಮಾಣಕ್ಕೆ ಸಜ್ಜಾಗಿದ್ದಾರೆ. ಕಳೆದೊಂದು ವಾರದಲ್ಲಿ ಅವರ ಎರಡು ಸಿನಿಮಾಗಳ ಮುಹೂರ್ತ ನಡೆದಿದೆ.

ಶಿವರಾಜ್‌ಕುಮಾರ್‌ ನಟನೆಯ, ಶ್ರೀನಿ ನಿರ್ದೇಶನದ ‘ಎ ಫಾರ್‌ ಆನಂದ್‌’ ಸಿನಿಮಾದ ಮುಹೂರ್ತದ ಬೆನ್ನಲ್ಲೇ ‘ಶಾಖಾಹಾರಿ’ ಖ್ಯಾತಿಯ ಸಂದೀಪ್‌ ಸುಂಕದ್‌ ನಿರ್ದೇಶನದ, ಧೀರೆನ್‌ ನಟನೆಯ ‘ಪಬ್ಬಾರ್‌’ ಸಿನಿಮಾದ ಮುಹೂರ್ತ ಬುಧವಾರ (ಮೇ 7) ನಡೆಯಿತು. ಇದು ಗೀತಾ ಪಿಕ್ಚರ್ಸ್‌ನ ನಾಲ್ಕನೇ ಸಿನಿಮಾವಾಗಿದೆ. 

ADVERTISEMENT

ಕಳೆದ ಡಿ.6ರಂದು ಈ ಸಿನಿಮಾ ಘೋಷಣೆಯಾಗಿತ್ತು. ಪೂರ್ಣಿಮಾ ರಾಜ್‌ಕುಮಾರ್‌ ಪುತ್ರನಾದ ಧೀರೆನ್‌ ‘ಶಿವ 143’ ಬಳಿಕ ಕೈಗೆತ್ತಿಕೊಂಡಿರುವ ಪ್ರಾಜೆಕ್ಟ್‌ ಇದಾಗಿದೆ. ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮದಲ್ಲಿ ನಟ ಶಿವರಾಜ್‌ಕುಮಾರ್‌, ನೆನಪಿರಲಿ ಪ್ರೇಮ್‌, ಶ್ರೀನಗರ ಕಿಟ್ಟಿ ಮುಂತಾದ ಚಿತ್ರರಂಗದ ಗಣ್ಯರು ಭಾಗವಹಿಸಿದ್ದರು. 

‘ರಿಸ್ಕ್‌ ಅನ್ನು ರಸ್ಕ್‌ ರೀತಿ ತಿನ್ನಬೇಕು’

ಮುಹೂರ್ತದ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್‌ಕುಮಾರ್‌, ‘ಒಳ್ಳೆಯ ಸಿನಿಮಾ ಮಾಡುವತ್ತ ಸದಾ ನಮ್ಮ ಪ್ರಯತ್ನವಿರಬೇಕು. ಈ ದೃಷ್ಟಿಯಿಂದಲೇ ಈ ಸಿನಿಮಾ ಕೈಗೆತ್ತಿಕೊಂಡೆವು. ಎಲ್ಲರೂ ಹೊಸ ಆಲೋಚನೆ, ಸಿನಿಮಾ ನಿರ್ಮಾಣ ರಿಸ್ಕ್‌ (ಅಪಾಯ) ಎನ್ನುತ್ತಿದ್ದಾರೆ. ಈ ರಿಸ್ಕ್‌ ಅನ್ನು ರಸ್ಕ್‌ ಥರ ತಿನ್ನಬೇಕು ಅಷ್ಟೇ. ಬೇರೆ ಭಾಷೆಗಳ ಜೊತೆ ಸ್ಪರ್ಧೆ ಮಾಡಬೇಕು ಎಂದರೆ ಹೊಸ ರೀತಿಯ ಸಿನಿಮಾಗಳು ಬರಬೇಕು. ಪ್ರಯತ್ನ ಪಡದೇ ಇದ್ದರೆ ಇದು ಸಾಧ್ಯವಿಲ್ಲ. ನಾನು ಚಿತ್ರರಂಗಕ್ಕೆ ಬಂದು 39 ವರ್ಷಗಳು ಉರುಳಿದವು. ಇನ್ನೆಷ್ಟು ವರ್ಷ ಸಿನಿಮಾ ಮಾಡುತ್ತೇನೋ ತಿಳಿದಿಲ್ಲ. ಹೊಸ ಪೀಳಿಗೆ ಬರಬೇಕು’ ಎಂದರು. 

‘ನಾವೇ ಭಿನ್ನವಾದ ಸಿನಿಮಾ ಮಾಡಲು ಆಸೆ ಪಡುತ್ತೇವೆ. ಸಂದೀಪ್‌ ಅವರು ಈ ಕಥೆ ಹೇಳಿದಾಗ ಖುಷಿಯಾಯಿತು. ಎಲ್ಲಾ ರೀತಿಯ ಭಾವನೆಗಳು ಈ ಸಿನಿಮಾದಲ್ಲಿವೆ. ಇದೊಂದು ಒಳ್ಳೆಯ ಸಿನಿಮಾ ಆಗಲಿದೆ ಎನ್ನುವ ನಂಬಿಕೆ ಹುಟ್ಟಿದ ಕಾರಣ ನಾವೇ ಈ ಸಿನಿಮಾ ಮಾಡಲು ನಿರ್ಧರಿಸಿದೆವು. ಅಮ್ಮನ ಜನ್ಮದಿನದಂದು ನಾವು ಈ ಸಿನಿಮಾ ಘೋಷಿಸಿದ್ದೆವು. ಮೇ 15ರಿಂದ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ. ಶಿಮ್ಲಾದಲ್ಲಿ ಶೂಟಿಂಗ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದುಕೊಂಡಿದ್ದೇವೆ’ ಎಂದರು.  

ಅಮೃತ ಪ್ರೇಮ್‌ 

ಧೀರೆನ್‌ ಇಲ್ಲಿ ಪೊಲೀಸ್‌ ಅಧಿಕಾರಿ 

‘ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಇದೊಂದು ಗಟ್ಟಿ ಕಥೆ. ದೊಡ್ಡ ಪ್ರೊಡಕ್ಷನ್‌ ಹೌಸ್‌ ದೊರಕಿರುವುದು ಕನಸು ನನಸಾದಂತೆ. ಚಿತ್ರವು ಸೈನ್ಯಾಧಿಕಾರಿಗೆ ಸಂಬಂಧಿಸಿದ್ದಲ್ಲ. ಚಿತ್ರದ ನಾಯಕ ಒಬ್ಬ ಪೊಲೀಸ್‌ ಅಧಿಕಾರಿ. ಇದೊಂದು ಅಡ್ವೆಂಚರಸ್‌ ಕ್ರೈಂ ಥ್ರಿಲ್ಲರ್‌. ಇದು ಪೂರ್ಣ ಕಾಲ್ಪನಿಕ ಚಿತ್ರವಿದು. ಚಿತ್ರದಲ್ಲಿ ನಾಯಕನ ಎರಡು ಪಯಣಗಳು ಇವೆ. ಒಂದು ಪ್ರಕರಣಕ್ಕೆ ಸಂಬಂಧಿಸಿದ್ದು, ಇನ್ನೊಂದು ಆತನ ವೈಯಕ್ತಿಕ ಪಯಣ. ‘ಪಬ್ಬಾರ್‌’ ಎನ್ನುವ ಜಾಗವೂ ಚಿತ್ರದ ಮುಖ್ಯ ಪಾತ್ರಗಳಲ್ಲಿ ಒಂದು’ ಎಂದು ಚಿತ್ರದ ಬಗ್ಗೆ ವಿವರಣೆ ನೀಡಿದರು ಸಂದೀಪ್‌ ಸುಂಕದ್‌.  

ಅಮೃತಾ ಪ್ರೇಮ್‌ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಆಯುರ್ವೇದ ಟೀಚರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರಕ್ಕೆ ವಿಶ್ವಜಿತ್‌ ರಾವ್‌ ಛಾಯಾಚಿತ್ರಗ್ರಹಣ, ಮಯೂರ್‌ ಅಂಬೆಕಲ್ಲು ಸಂಗೀತ ಚಿತ್ರಕ್ಕಿದೆ.  

ಸಂದೀಪ್‌ ಸುಂಕದ್‌ 
ಧೀರೆನ್‌ ಮೂಲಕವೇ ಈ ಸಿನಿಮಾ ಕಥೆ ನಮಗೆ ಬಂದಿತ್ತು. ಸಿನಿಮಾಗಾಗಿ ಧೀರೆನ್‌ ಐದಾರು ತಿಂಗಳಿಂದ ಬಹಳ ಕಷ್ಟಪಟ್ಟಿದ್ದಾನೆ. ಚಿತ್ರಕ್ಕಾಗಿ 10 ಕೆ.ಜಿ. ತೂಕ ಇಳಿಸಿಕೊಂಡಿದ್ದಾನೆ. ಮೈಸೂರು ಬೆಂಗಳೂರು ಹಿಮಾಚಲ ಪ್ರದೇಶ ಮತ್ತು ಕೊಡಗು ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ನಡೆಯಲಿದೆ.
ಗೀತಾ ಶಿವರಾಜ್‌ಕುಮಾರ್‌ ನಿರ್ಮಾಪಕಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.