ಸತೀಶ್ ನೀನಾಸಂ ನಟಿಸುತ್ತಿರುವ ‘ದ ರೈಸ್ ಆಫ್ ಅಶೋಕ’ ಚಿತ್ರದ ಫಸ್ಟ್‌ಲುಕ್ ಬಿಡುಗಡೆಗೊಂಡಿದೆ. ‘ಎಲ್ಲ ಯುದ್ಧಗಳು ಯುದ್ಧಭೂಮಿಯಲ್ಲಿ ನಡೆಯುವುದಿಲ್ಲ’ ಎಂಬ ಅಡಿಬರಹವಿದೆ. ಎರಡೂ ಕೈಗಳಲ್ಲಿ ಕತ್ತಿ ಹಿಡಿದಿರುವ ಸತೀಶ್ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತಸಿಕ್ತ ಅಧ್ಯಾಯಗಳ ಕಥೆ ಹೇಳುತ್ತಿರುವ ಪೋಸ್ಟರ್ ಇದೊಂದು ಮಾಸ್ ಚಿತ್ರ ಎಂಬ ಸುಳಿವು ನೀಡುತ್ತಿದೆ.
ನಿರ್ದೇಶಕ ವಿನೋದ್ ದೊಂಡಾಲೆ ಪ್ರಾರಂಭಿಸಿದ್ದ ಚಿತ್ರವನ್ನು, ಅವರ ಆತ್ಮಹತ್ಯೆ ಬಳಿಕ ಮನು ಶೆಡ್ಗಾರ್ ಮುಂದುವರಿಸುತ್ತಿದ್ದಾರೆ. ‘ವ್ಯಾಪಾರಿ ಮತ್ತು ಕೆಲಸಗಾರರ ನಡುವಿನ ಕಥೆ. ರೆಟ್ರೊ ಶೈಲಿಯ ಕಥೆಯಾಗಿದ್ದು ಇದು ರೌಡಿಸಂ ಕಥೆಯಲ್ಲ. ಕ್ರಾಂತಿಕಾರಿ ಅಶೋಕನ ಕಥೆ. ವ್ಯಾಪಾರಿಗಳು ಕೂಲಿ ಕೆಲಸಗಾರರ ಮೇಲೆ ದಬ್ಬಾಳಿಕೆ ಮಾಡುವುದು ಬಹಳ ಕಾಲದಿಂದ ನಡೆದುಕೊಂಡು ಬಂದಿದೆ. ಅದರ ವಿರುದ್ಧ, ಜೀತವನ್ನು ಪ್ರತಿಭಟಿಸಿ ಬಂಡೇಳುವ ನಾಯಕನ ಕಥೆ’ ಎನ್ನುತ್ತಾರೆ ಸತೀಶ್.
‘ಸತೀಶ್ ಸದ್ಯ ಬೇರೆ ಚಿತ್ರದಲ್ಲಿ ಮಗ್ನರಾಗಿರುವುದರಿಂದ ಫೆ.15ರಿಂದ ಚಿತ್ರೀಕರಣ ಮುಂದುವರಿಸುತ್ತೇವೆ. ಶೀಘ್ರದಲ್ಲಿ ಚಿತ್ರವನ್ನು ತೆರೆಗೆ ತರುವ ಆಲೋಚನೆಯಿದೆ. ಮೂರು ಭಾಷೆಗಳಲ್ಲಿ ಚಿತ್ರ ನಿರ್ಮಾಣವಾಗುತ್ತಿದ್ದು ವಿನೋದ್ ಅವರ ಕನಸಿನ ಚಿತ್ರವಾಗಿತ್ತು’ ಎನ್ನುತ್ತಾರೆ ನಿರ್ದೇಶಕರು.
ವೃದ್ಧಿ ಕ್ರಿಯೇಷನ್ಸ್ ಜೊತೆಗೆ ಸತೀಶ್ ನೀನಾಸಂ ಕೂಡ ನಿರ್ಮಾಣದಲ್ಲಿ ಕೈಜೋಡಿಸಿದ್ದಾರೆ. ಬಿ.ಸುರೇಶ್, ಗೋಪಾಲ ದೇಶಪಾಂಡೆ ಮೊದಲಾದವರು ತಾರಾಗಣದಲ್ಲಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ, ಲವಿತ್ ಛಾಯಾಚಿತ್ರಗ್ರಹಣ ಚಿತ್ರಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.