
ಜೀವನದಲ್ಲಿ ಹೆಸರು, ಹಣ ಗಳಿಸಬೇಕೆಂಬ ಹಪಹಪಿತನ ಹೊಂದಿರುವಾತ ಯುಟ್ಯೂಬರ್ ಸಿದ್ದು. ಪ್ರಾರಂಭದಲ್ಲಿ ಕೆಲವು ವಿಡಿಯೊಗಳನ್ನು ಮಾಡಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಅದರಿಂದ ಆಚೆ ಬಂದು ಪ್ರಸಿದ್ಧನಾಗಬೇಕು ಎಂದು ಪಣತೊಡುತ್ತಾನೆ. ಆಗ ಆತ ಭಯ ಹುಟ್ಟಿಸುವ ದೆವ್ವದ ವಿಡಿಯೊಗಳನ್ನು ನೋಡುತ್ತಾನೆ. ನಂತರ ಸ್ಥಳೀಯವಾಗಿ ಜನಜನಿತವಾದ ದೆವ್ವದ ಮನೆಯನ್ನು ಹುಡುಕಿಕೊಂಡು ಹೋಗುತ್ತಾನೆ. ಅಲ್ಲಿ ನಡೆಯುವ ಒಂದಷ್ಟು ಘಟನೆಗಳೇ ಚಿತ್ರಕಥೆ.
ವ್ಲಾಗರ್‌ಗಳು ಜನಪ್ರಿಯವಾಗಬೇಕೆಂದು ಏನೆಲ್ಲ ಸಾಹಸ ಮಾಡುತ್ತಾರೆ, ಯಾವ ರೀತಿಯ ರಿಸ್ಕ್‌ಗಳಿಗೆ ಕೈಹಾಕುತ್ತಾರೆ ಎನ್ನುವುದನ್ನು ನಿರ್ದೇಶಕ ಈ ಚಿತ್ರದಲ್ಲಿ ತೋರಿಸುತ್ತ ಹೋಗುತ್ತಾರೆ. ಚಿತ್ರದ ನಾಯಕ ಸಿದ್ದು, ಯೋಗಗುರು ರಘು ಆತ್ಮೀಯರು. ಅವರಿಬ್ಬರ ಹಾಸ್ಯ ಸನ್ನಿವೇಶಗಳೊಂದಿಗೆ ಸಿನಿಮಾ ಪ್ರಾರಂಭವಾಗುತ್ತದೆ. ಇದೊಂದು ಕಾಮಿಡಿ ಸಿನಿಮಾ ಅಂದುಕೊಳ್ಳುವ ಹೊತ್ತಿಗೆ ನಂದಿನಿ ಆಗಮನವಾಗುತ್ತದೆ. ಅಲ್ಲಿಂದ ಹಾಸ್ಯದ ಜತೆಗೆ ಪ್ರೇಮಪಯಣವೂ ತೆರೆದುಕೊಳ್ಳುತ್ತದೆ. ಸಿದ್ದುವಿನ ವೈಯಕ್ತಿಕ ಬದುಕು, ಏಳು ಬೀಳು, ಪ್ರೇಮ ಪಯಣವೇ ಮೊದಲಾರ್ಧದ ಸರಕು.
ಅಲ್ಲಲ್ಲಿ ಕಥೆಗೆ ಸಣ್ಣ, ಸಣ್ಣ ತಿರುವುಗಳಿವೆ. ಬದುಕನ್ನು ಬಹಳ ಸರಳವಾಗಿ ತೆಗೆದುಕೊಂಡ ಸಿದ್ದು, ಒಂದು ಸನ್ನಿವೇಶದಲ್ಲಿ ಬಹಳ ಗಂಭೀರವಾಗುತ್ತಾನೆ. ಬದುಕಿನಲ್ಲಿ ಏನಾದರೂ ಮಾಡಿ ಯಶಸ್ಸು ಸಾಧಿಸಬೇಕೆಂಬ ಹಟಕ್ಕೆ ಬೀಳುತ್ತಾನೆ. ತನ್ನನ್ನು ಅಪಹಾಸ್ಯ ಮಾಡಿದವರಿಗೆ ಉತ್ತರ ಕೊಡಲು ಮುಂದಾಗುತ್ತಾನೆ.
ಬೇರೆ ದೇಶಗಳಲ್ಲಿ ಯುಟ್ಯೂಬರ್‌ಗಳು ಗ್ರಾಫಿಕ್ಸ್ ಬಳಸಿ ವೀಕ್ಷಕರನ್ನು ಹೇಗೆ ದೆವ್ವವಿದೆ ಎಂದು ನಂಬಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಅದೇ ರೀತಿ ಸಿದ್ದು ಕೂಡ ಗ್ರಾಫಿಕ್ಸ್‌ನಿಂದ ದೆವ್ವದ ದರ್ಶನ ಮಾಡಿಸಲು ಪ್ರಾರಂಭಿಸುತ್ತಾನೆ. ಹಾಗಿದ್ದ ಸಿದ್ದು ಯಾಕೆ ನಿಜವಾದ ದೆವ್ವದ ಬಂಗಲೆಯನ್ನು ಬೆನ್ನತ್ತಿ ಹೋಗುತ್ತಾನೆ, ನಂತರ ಏನೆಲ್ಲ ಆಗುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು.
ಸಿದ್ದುವಾಗಿ ನಟಿಸಿರುವ ಸಿದ್ದು ಮೂಲಿಮನಿ ಮೂಲತಃ ಹಾಸ್ಯ ಕಲಾವಿದ. ಹೀಗಾಗಿ ಹಾಸ್ಯದ ದೃಶ್ಯಗಳು ಸಹಜವಾಗಿ ಅವರಿಗೆ ಒಗ್ಗಿವೆ. ಜತೆಗೆ ಉಳಿದ ಸನ್ನಿವೇಶಗಳಲ್ಲಿಯೂ ಅವರು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಘು ರಾಮನಕೊಪ್ಪ ಪ್ರಾರಂಭದಲ್ಲಿ ನಗಿಸುತ್ತಾರೆ. ನಂತರದಲ್ಲಿ ಅವರ ಪಾತ್ರ ಪೋಷಣೆ ತುಸು ಕಿರಿಕಿರಿ ಮೂಡಿಸುತ್ತದೆ. ವಿಶೇಷವಾಗಿ ಅವರು ಪದೇಪದೇ ಹೇಳುವ ‘ಮೋನೆ’ ಎಂಬ ಡೈಲಾಗ್. ನಂದಿನಿಯಾಗಿ ರವೀಕ್ಷ ನಟನೆ ನೆನಪಿನಲ್ಲಿ ಉಳಿಯುವುದಿಲ್ಲ. ಆಕಾಶ್ ಪರ್ವ ಸಂಗೀತದಲ್ಲಿ ಒಂದೆರಡು ಹಾಡುಗಳು ಹಿತವಾಗಿವೆ. ಹಿನ್ನೆಲೆ ಸಂಗೀತ ಸನ್ನಿವೇಶಗಳಿಗೆ ತಕ್ಕಂತೆ ಇದೆ. ದೆವ್ವದ ಮನೆಯ ಚಿತ್ರಣ, ಪರಿಸರ ಸೊಗಸಾಗಿದೆ. ಸ್ವಲ್ಪ ಬೇಗ ಮುಖ್ಯಕಥೆಗೆ ಬಂದು, ಚಿತ್ರಕಥೆಯನ್ನು ‘ಸೀಟ್ ಎಡ್ಜ್’ನಲ್ಲಿ ಕೂರಿಸುವಂತೆಯೇ ಮಾಡುವ ಅವಕಾಶ ನಿರ್ದೇಶಕರಿಗಿತ್ತು.
ನೋಡಬಹುದಾದ ಸಿನಿಮಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.