ವಿಜಯ ರಾಘವೇಂದ್ರ
ನಿರಂತರವಾಗಿ ಸಿನಿಮಾಗಳಲ್ಲಿ ತೊಡಗಿಸಿಳ್ಳುವುದಕ್ಕೆ ಪತ್ನಿಯೇ ಸ್ಫೂರ್ತಿ, ಚೈತನ್ಯ ಎನ್ನುತ್ತಾರೆ ನಟ ವಿಜಯ ರಾಘವೇಂದ್ರ. ಇತ್ತೀಚೆಗೆ ಅವರು ಹೆಚ್ಚು ಪೊಲೀಸ್ ಪಾತ್ರಗಳಲ್ಲೇ ಕಾಣಿಸಿಕೊಳ್ಳುತ್ತಿದ್ದು, ಅವರು ನಟಿಸಿರುವ ‘ಎಫ್‌ಐಆರ್ 6 ಟು 6’ ಇಂದು (ಫೆ.28) ತೆರೆಕಾಣುತ್ತಿದೆ. ಈ ಸಂದರ್ಭದಲ್ಲಿ ಅವರೊಂದಿಗೆ ಮಾತುಕತೆ...
ವಿಭಿನ್ನ ಪಾತ್ರಗಳಲ್ಲಿ ನಿರಂತರವಾಗಿ ಸಿನಿಮಾ ಮಾಡುತ್ತಿದ್ದೀರಿ?
ಈ ಹೊತ್ತಿನಲ್ಲಿ ನಾನು ನಿರ್ಮಾಪಕರಿಗೆ, ನಿರ್ದೇಶಕರಿಗೆ ಹಾಗೂ ಪ್ರೇಕ್ಷಕರಿಗೆ ಧನ್ಯವಾದಗಳನ್ನು ತಿಳಿಸಬಹುದಷ್ಟೇ. ಸಿನಿಮಾ ಬಿಡುಗಡೆಯಾಗಿ ಅದು ಗೆದ್ದರೂ, ಗೆಲ್ಲದಿದ್ದರೂ ಹೊಸ ಹೊಸ ಅವಕಾಶ ನೀಡುತ್ತಿರುತ್ತಾರೆ. ಮತ್ತೊಂದು ಹೊಸ ಸಿನಿಮಾ ಬಂದಾಗ ಪ್ರೇಕ್ಷಕರು ಅಷ್ಟೇ ಪ್ರೋತ್ಸಾಹಿಸುತ್ತಾರೆ. ‘ಮಾಲ್ಗುಡಿ ಡೇಸ್’, ‘ರಾಘು’, ‘ಕದ್ದಚಿತ್ರ’, ‘ಕೇಸ್ ಆಫ್ ಕೊಂಡಾಣ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ವಿಭಿನ್ನವಾದ ಪಾತ್ರಗಳನ್ನು ನಿಭಾಯಿಸಿದೆ. ‘ಭಿನ್ನವಾದ ಪಾತ್ರದ ಪ್ರಯೋಗಕ್ಕೆ ವಿಜಯ ರಾಘವೇಂದ್ರ ಸೂಕ್ತ’ ಎಂದು ನಿರ್ದೇಶಕರು ಅಂದುಕೊಂಡಾಗ ಅಲ್ಲೇ ನಮ್ಮ ಗೆಲುವಿದೆ.
ಪತ್ನಿ ಸ್ಪಂದನಾ ಅವರನ್ನು ಕಳೆದುಕೊಂಡ ಬಳಿಕ...
ಆಕೆಯನ್ನು ಕಳೆದುಕೊಳ್ಳುವುದಕ್ಕಿಂತ ಮುಂಚೆಯೂ ನಿರಂತರವಾಗಿ ಸಿನಿಮಾಗಳನ್ನು ಮಾಡುತ್ತಿದ್ದೆ. ಈಗಲೂ ಮಾಡುತ್ತಿದ್ದೇನೆ. ನಾನು ಹೀಗೆಯೇ ಸಿನಿಮಾಗಳನ್ನು ಮಾಡುತ್ತಿರಬೇಕು ಎನ್ನುವ ಅಭಿಲಾಷೆಯೂ ಅವಳದ್ದಾಗಿತ್ತು. ಸಿನಿಮಾ, ಕಿರುತೆರೆಯಲ್ಲಿ ಇಷ್ಟಪಟ್ಟು ಮಾಡುವ ಕೆಲಸಗಳನ್ನು ಮಾಡುತ್ತಲೇ ಇರಬೇಕು ಎನ್ನುವ ಮನಃಸ್ಥಿತಿ ನನ್ನದು. ಇದಕ್ಕೂ ಸ್ಪಂದನಾಳೇ ಸ್ಫೂರ್ತಿ. ನೋವನ್ನು ಮರೆಯುವುದಕ್ಕೆ ಸಿನಿಮಾಗಳನ್ನು ಮಾಡುತ್ತಿದ್ದೇನೆ ಎನ್ನುವ ಕಾಳಜಿಯ ಮಾತುಗಳೂ ನಿಜ. ಆದರೆ ಸಿನಿಮಾ ಎನ್ನುವುದು ನೋವನ್ನು ಮರೆಯುವುದಕ್ಕೆ ಮಾಡುವ ಕೆಲಸವಲ್ಲ. ಅದು ಮರೆಯುವಂಥ ನೋವೂ ಅಲ್ಲ. ಅದನ್ನು ಜೊತೆಯಲ್ಲೇ ಇಟ್ಟುಕೊಂಡು ಚೈತನ್ಯವಾಗಿ ಕಾಣುತ್ತಿದ್ದೇನೆ.
ಎಫ್‌ಐಆರ್ 6 ಟು 6 ಸಿನಿಮಾ ‘ಮ್ಯಾಕ್ಸ್’ ಸಿನಿಮಾ ಜಾನರ್‌ನಂತಿದೆ ಅಲ್ಲವೇ?
ಹೌದು. ಇದೂ ಒಂದು ರಾತ್ರಿಯಲ್ಲಿ ನಡೆಯುವ ಕಥೆ. ಅಷ್ಟೇ ವೇಗವನ್ನು ಕಥೆ ಹೊಂದಿದೆ. ಕಥೆಯಲ್ಲಿ ಒಂದು ಮುಖ್ಯವಾದ ಪಾತ್ರ ಪೊಲೀಸ್ ಅಧಿಕಾರಿಯದ್ದು. ‘ಗರುಡ’ ಎನ್ನುವುದು ನನ್ನ ಪಾತ್ರದ ಹೆಸರು. ಈತ ಕೋಪಿಷ್ಠ. ಆ ಅಧಿಕಾರಿ ಹಾಗೂ ಖಳನಾಯಕನ ನಡುವೆ ನಡೆಯುವ ಘರ್ಷಣೆ, ಈ ಮುಖ್ಯ ಕಥೆಗೆ ಪೂರಕವಾಗಿದೆ. ಮುಖ್ಯ ಕಥೆಗೆ ಹಲವಾದ ಸನ್ನಿವೇಷಗಳು ಪ್ರಭಾವ ಬೀರುತ್ತವೆ. ಇತ್ತೀಚೆಗೆ ಪೊಲೀಸ್ ಪಾತ್ರದಲ್ಲಿ ನನ್ನನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಇದರ ಎಲ್ಲಾ ಶ್ರೇಯ ‘ಸೀತಾರಾಮ್ ಬಿನೋಯ್’ ತಂಡಕ್ಕೆ ಸಲ್ಲಬೇಕು. ಇಂತಹ ಪಾತ್ರ ಸಿಕ್ಕಾಗ ಜವಾಬ್ದಾರಿಯುತವಾಗಿ ನಿಭಾಯಿಸಬೇಕು. ನನಗೆ ಇಂತಹ ಪಾತ್ರಗಳಿಗೆ ಸ್ಫೂರ್ತಿ ನನ್ನ ಮಾವ (ಸ್ಪಂದನಾ ತಂದೆ ಬಿ.ಕೆ. ಶಿವರಾಂ). ಹೀಗಾಗಿ ನನಗೆ ಪೊಲೀಸ್ ಪಾತ್ರ ಒಗ್ಗಿದೆ.
ವಾರಕ್ಕೆ ಎಂಟು–ಹತ್ತು ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಇದಕ್ಕೆ ಕಡಿವಾಣ ಹೇಗೆ?
ಇದರಿಂದ ಪ್ರೇಕ್ಷಕರು ಗೊಂದಲಕ್ಕೀಡಾಗುತ್ತಿರುವುದು ನಿಜ. ಈ ವಿಚಾರದ ಬಗ್ಗೆ ನನ್ನ ದೃಷ್ಟಿಕೋನದಲ್ಲಿ ಮಾತನಾಡುವುದು ಎಷ್ಟು ಸರಿ, ಎಷ್ಟು ತಪ್ಪು ಎನ್ನುವ ವಿಚಾರ ಬರುತ್ತದೆ. ನಾನು ಮೊದಲು ಒಬ್ಬ ಪ್ರೇಕ್ಷಕನಾಗಿ ಯೋಚನೆ ಮಾಡುತ್ತೇನೆ. ಪ್ರೇಕ್ಷಕನ ದೃಷ್ಟಿಯಿಂದ ನೋಡಿದಾಗ, ‘ಈ ಸಣ್ಣ ಅವಧಿಯಲ್ಲಿ ಯಾವ ಸಿನಿಮಾ ನೋಡುವುದು, ಬಿಡುವುದು ಹಾಗೂ ಗುಣಮಟ್ಟವನ್ನು ಹೇಗೆ ನಿರ್ಧಾರ ಮಾಡುವುದು’ ಎನ್ನುವ ಗೊಂದಲ ಸೃಷ್ಟಿಯಾಗುತ್ತದೆ. ಚಿತ್ರರಂಗದ ದೃಷ್ಟಿಯಿಂದ ನೋಡಿದಾಗ ‘ಕನ್ನಡ ಚಿತ್ರರಂಗ ಬಹಳ ಕ್ರಿಯಾಶೀಲವಾಗಿದೆ’ ಎಂದೆನಿಸುತ್ತದೆ. ನಾವು ಈ ಸಂದರ್ಭದಲ್ಲಿ ಗುಣಮಟ್ಟದ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಿದೆ. ಚಿತ್ರರಂಗವೂ ಕೊಂಚ ಯೋಚಿಸಿ ಹೆಜ್ಜೆ ಇಡಬೇಕು. ಜನ ಯಾವ ಸಿನಿಮಾಗಳನ್ನು ಇಷ್ಟಪಡುತ್ತಿದ್ದಾರೆ, ಎಷ್ಟು ಸ್ಪರ್ಧೆಯಿದೆ?, ಕಥೆ ಗುಣಮಟ್ಟ, ತಯಾರಿಕೆ ಗುಣಮಟ್ಟ ಹೇಗಿದೆ? ಮುಂತಾದುವುಗಳನ್ನೂ ಯೋಚನೆ ಮಾಡಬೇಕಿದೆ. ಬಹುಪಾಲು ಜನ ಇದನ್ನು ಮಾಡುತ್ತಿಲ್ಲ.
ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳು...
ಕಿಶೋರ್ ಮೂಡುಬಿದಿರೆ ಅವರು ನಿರ್ದೇಶಿಸಿದ ‘ರಿಪ್ಪನ್ ಸ್ವಾಮಿ’ ತೆರೆಗೆ ಬರಲು ಸಜ್ಜಾಗಿದೆ. ಕಳೆದ ವರ್ಷವೇ ಇದರ ಶೂಟಿಂಗ್ ಪೂರ್ಣಗೊಂಡಿದ್ದು ಏಪ್ರಿಲ್‌ನಲ್ಲಿ ಇದು ತೆರೆಗೆ ಬರಲಿದೆ. ಪಿ.ಸಿ.ಶೇಖರ್ ಅವರ ಒಂದು ಚಿತ್ರ, ವಸಂತ ಕುಮಾರ್ ಅವರು ನಿರ್ದೇಶಿಸುತ್ತಿರುವ ‘ರುದ್ರಾಭಿಷೇಕಂ’ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ‘ಪೆದ್ರೊ’, ‘ವಾಘಚಿಪಾಣಿ’ ನಿರ್ದೇಶಿಸಿದ ನಟೇಶ್ ಹೆಗಡೆ ಮತ್ತು ಗಣೇಶ್ ಹೆಗಡೆ ನಿರ್ದೇಶನದ ಒಂದು ಚಿತ್ರ ಮಾಡಿದ್ದೇನೆ. ಇದರ ಶೂಟಿಂಗ್ ಪೂರ್ಣಗೊಂಡಿದೆ. ‘ಸೀತಾರಾಮ್ ಬಿನೋಯ್’ ಸಿನಿಮಾದ ಸೀಕ್ವೆಲ್ ಬರಲಿದೆ. ಇದರ ಶೂಟಿಂಗ್ ಇನ್ನೂ ಆರಂಭವಾಗಿಲ್ಲ. ಜೊತೆಗೆ ಒಂದು ಸ್ಕ್ರಿಪ್ಟ್ ಒಪ್ಪಿಕೊಂಡಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.