ADVERTISEMENT

ಮತ್ತೆ ‘ಅವತಾರ’ವೆತ್ತಿದ ಚುಟು–ಚುಟು ಜೋಡಿ, ಡಿ.10ಕ್ಕೆ 'ಅವತಾರ ಪುರುಷ' ಬಿಡುಗಡೆ

ಅಭಿಲಾಷ್ ಪಿ.ಎಸ್‌.
Published 25 ನವೆಂಬರ್ 2021, 12:52 IST
Last Updated 25 ನವೆಂಬರ್ 2021, 12:52 IST
ಆಶಿಕಾ ರಂಗನಾಥ್‌ ಹಾಗೂ ಶರಣ್‌
ಆಶಿಕಾ ರಂಗನಾಥ್‌ ಹಾಗೂ ಶರಣ್‌   

ನಟ ಶರಣ್‌ ಅವರ ನಟನೆಯೆಂದರೆ ಭರ್ಜರಿ ನಗುವಿನೌತಣ ಖಚಿತ. ಅದಕ್ಕೆ ಸಿಂಪಲ್‌ ಸುನಿ ಅವರ ಕಥೆ, ಡೈಲಾಗ್ಸ್‌ ಜೊತೆಗೊಂದಿಷ್ಟು ಅರ್ಜುನ್‌ ಜನ್ಯ ಅವರ ಕಾಲ್ಕುಣಿಸುವ ಸಂಗೀತವಿದ್ದರೆ ಪ್ರೇಕ್ಷಕರಿಗೆ ಮನರಂಜನೆಯ ಭರ್ಜರಿ ಭೋಜನ. ಡಿ.10ಕ್ಕೆ ತೆರೆಕಾಣಲಿರುವ ಚುಟು–ಚುಟು ಜೋಡಿಯ ‘ಅವತಾರ ಪುರುಷ’ದಲ್ಲಿ ನಾಲ್ಕೈದು ಶೇಡ್‌ಗಳಲ್ಲಿ ಕಾಣಿಸಿಕೊಂಡಿರುವ ಶರಣ್‌, ಹತ್ತಕ್ಕೂ ಅಧಿಕ ಅವತಾರಗಳನ್ನೆತ್ತಿದ್ದಾರೆ. ಶರಣ್‌ ತಮ್ಮ ಸಿನಿ ಜೀವನದಲ್ಲಿ ಮೊದಲ ಬಾರಿಗೆ ಎರಡು ಭಾಗಗಳಾಗಿ ಬರುತ್ತಿರುವ ಸಿನಿಮಾವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದು, ‘ಸಿನಿಮಾ ಪುರವಣಿ’ ಜೊತೆಗೆ ಮಾತಿಗಿಳಿದಾಗ ಹೀಗೆಂದರು...

‘ತೆರೆಯ ಮೇಲೆ ಎರಡು ವರ್ಷಗಳ ದೀರ್ಘ ಗೈರಿನ ಬಳಿಕ ‘ಅವತಾರ ಪುರುಷ’ನಾಗಿ ಬರುತ್ತಿದ್ದೇನೆ. ಈ ಗೈರಿಗೆ ಕಾರಣ ಎಲ್ಲರಿಗೂ ಗೊತ್ತು. ಕೋವಿಡ್‌ ಮಾರಿ ಇಡೀ ಪ್ರಪಂಚವನ್ನು ಸುಮ್ಮನಿರುವಂತೆ ಮಾಡಿತ್ತು. ಚೆಂದವಾಗಿ ನಡೆಯುತ್ತಿದ್ದ ಪ್ರಪಂಚ ಏಕಾಏಕಿ ನಿಂತು, ಒಂದು ರೀತಿಯ ಪ್ರಶ್ನೆಗಳ ಬೆಟ್ಟವನ್ನೇ ನಮ್ಮ ಮುಂದೆ ಇರಿಸಿತ್ತು. ಚಿತ್ರರಂಗಕ್ಕೆ ಇದರಿಂದ ಬಿದ್ದ ಹೊಡೆತ ದೊಡ್ಡದು. ಹೀಗಾಗಿ ನನ್ನ ವೃತ್ತಿಬದುಕಿನಲ್ಲಿ ಮೊದಲ ಬಾರಿ ಇಷ್ಟು ದೀರ್ಘ ಸಮಯದ ಬಳಿಕ ತೆರೆ ಮೇಲೆ ಕಾಣಿಸಿಕೊಳ್ಳುವಂತಾಗಿದೆ. ನಾನು ಬಹಳ ಕಾತುರದಿಂದ ಈ ಕ್ಷಣಕ್ಕೆ ಕಾಯುತ್ತಿದ್ದೇನೆ. ಇದು ನನ್ನ ಇಲ್ಲಿಯವರೆಗಿನ ಅತಿ ದೊಡ್ಡ ಬಜೆಟ್‌ನ ಸಿನಿಮಾ’ ಎನ್ನುತ್ತಾರೆ ಶರಣ್‌.

‘ನಾನು, ಆಶಿಕಾ ರಂಗನಾಥ್‌ ಹಾಗೂ ಅರ್ಜುನ್‌ ಜನ್ಯ ಒಂದಾದರೆ ಅದೊಂದು ಹಿಟ್ ಕಾಂಬಿನೇಷನ್‌. ಇದಕ್ಕೆ ಸಾಕ್ಷಿ ‘ಚುಟು ಚುಟು...’ ಹಾಗೂ ‘ಯವ್ವಾ ಯವ್ವಾ..’ ಹಾಡುಗಳು. ಈ ಕಾಂಬಿನೇಷನ್‌ಗೆ ಸಿಂಪಲ್‌ ಸುನಿಯ ಲೇಪನ. ಇಲ್ಲಿ ನನ್ನತನವೂ ಇದೆ. ಸುನಿ ಅವರ ಸ್ಟೈಲ್‌ ಕೂಡಾ ಇದೆ. ಇದು ಸಿನಿಮಾದಲ್ಲಿ ವರ್ಕ್‌ಔಟ್‌ ಆಗಿದೆ. ಈ ಮೂರೂ ಮಸಾಲೆ ಸೇರಿ ಪ್ರೇಕ್ಷಕರಿಗೆ ಹೊಸ ರುಚಿ ಸಿಗಲಿದೆ’ ಎಂದರು ಶರಣ್‌.

ADVERTISEMENT

‘ಕಥೆಗೆ ಅನುಗುಣವಾಗಿ ನಾನು ನಟಿಸಿದ್ದೇನೆ. ಶರಣ್‌ ಎನ್ನುವುದನ್ನು ಪಕ್ಕಕ್ಕೆ ಇಟ್ಟು, ಶರಣ್‌ ಒಬ್ಬ ಪಾತ್ರಧಾರಿಯಾಗಿ ಕೆಲವೊಮ್ಮೆ ಕಥೆ ಶರಣ್‌ನನ್ನು ಕೇಳುತ್ತದೆ. ಕೆಲವೊಮ್ಮೆ ಶರಣ್‌ನನ್ನು ಕಮ್ಮಿ ಕೇಳುತ್ತದೆ. ಕೆಲವೊಮ್ಮೆ ಕೇಳುವುದೇ ಇಲ್ಲ. ಹೀಗಾಗಿ ಒಂದಿಷ್ಟು ಅವತಾರಗಳನ್ನು ನಾನು ಸಿನಿಮಾದಲ್ಲಿ ತಾಳಿದ್ದೇನೆ. ‘ಓವರ್‌ಆ್ಯಂಕ್ಟಿಂಗ್‌ ಅನಿಲ’ ಎನ್ನುವ ಜ್ಯೂನಿಯರ್‌ ಆರ್ಟಿಸ್ಟ್‌ ಪಾತ್ರದಲ್ಲಿ ಹೈಪರ್‌ ಶರಣ್‌ನನ್ನು ಕಾಣಲು ಸಾಧ್ಯ. ಇವೆಲ್ಲವನ್ನೂ ಸಿನಿಮಾದ ಕಥೆ ಕೇಳಿದೆ.’

‘ಇದು ನನ್ನ ಸಿನಿ ಜೀವನದಲ್ಲಿ ಭಾಗಗಳಾಗಿ ಬರುತ್ತಿರುವ ಮೊದಲ ಸಿನಿಮಾ. ವಿಕ್ಟರಿ ಮತ್ತು ರ್‍ಯಾಂಬೋದಲ್ಲಿ ಎರಡು ಭಾಗಗಳಲ್ಲಿ ಬೇರೆ ಬೇರೆ ಕಥೆ ಇತ್ತು. ಈ ಸಿನಿಮಾದ ಎರಡನೇ ಭಾಗದಲ್ಲಿ ಮೊದಲ ಭಾಗದ ಕಥೆಯೇ ಮುಂದುವರಿಯಲಿದೆ.ಆಪ್ತಮಿತ್ರ ಜಾನರ್‌ನಲ್ಲೇ ಈ ಸಿನಿಮಾವಿದ್ದು ವಾಮಾಚಾರ, ಮಾಟ ಮಂತ್ರದ ಸುತ್ತ ಕಥೆ ಹೆಣೆಯಲಾಗಿದೆ. ಸಾಯಿಕುಮಾರ್‌, ಸುಧಾರಾಣಿ, ಭವ್ಯ, ಶ್ರೀನಗರ ಕಿಟ್ಟಿ ಹೀಗೆ ಕಲಾವಿದರ ದಂಡೇ ಇದರಲ್ಲಿದೆ’ ಎಂದ ಶರಣ್‌ ‘ನನ್ನ ದಶಾವತಾರ ನೋಡಲು ಡಿಸೆಂಬರ್‌ ಹತ್ತಕ್ಕೆ ಚಿತ್ರಮಂದಿರಕ್ಕೆ ಬನ್ನಿ’ ಎಂದರು.

ಚಿತ್ರದಲ್ಲಿ ಶರಣ್‌ ಅವರಿಗೇ ನಟನೆಯ ಪಾಠ ಕಲಿಸಿಕೊಡುವ ನಾಯಕಿಯ ಪಾತ್ರದಲ್ಲಿ ಆಶಿಕಾ ರಂಗನಾಥ್‌ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಚುಟು–ಚುಟುವಂತೆ ಉತ್ತರ ಕರ್ನಾಟಕ ಶೈಲಿಯ ಪೆಪ್ಪಿ ನಂಬರ್‌ ಒಂದಿದೆ ಎಂದಿದ್ದಾರೆ ಆಶಿಕಾ.

ವೆಬ್‌ಸೀರೀಸ್‌ ಸಿನಿಮಾವಾದಾಗ!
ಈ ಕಥೆಯನ್ನು ವೆಬ್‌ಸೀರೀಸ್‌ ಮಾಡಲೆಂದು ಬರೆದಿದ್ದರು ನಿರ್ದೇಶಕ ಸುನಿ. ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ಇದನ್ನು ಸಿನಿಮಾ ಮಾಡಲು ನಿರ್ಧರಿಸಿ, ಎರಡು ಭಾಗಗಳಾಗಿ ಚಿತ್ರೀಕರಿಸಲಾಗಿದೆ. 161 ದಿನ ಎರಡೂ ಭಾಗದ ಚಿತ್ರೀಕರಣ ನಡೆದಿದ್ದು, ಎರಡನೇ ಭಾಗದಲ್ಲಿ ಇನ್ನೆರಡು ಹಾಡುಗಳ ಚಿತ್ರೀಕರಣವಷ್ಟೇ ಬಾಕಿ ಇದೆ. ಮೊದಲ ಭಾಗ ಬಿಡುಗಡೆಯಾಗಿ 101ನೇ ದಿನಕ್ಕೆ ಎರಡನೇ ಭಾಗವನ್ನು ರಿಲೀಸ್‌ ಮಾಡಲು ಚಿತ್ರತಂಡ ನಿರ್ಧರಿಸಿದ್ದು, ಎರಡೂ ಭಾಗಕ್ಕೆ ಸುಮಾರು ₹20 ಕೋಟಿ ವೆಚ್ಚವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.