ADVERTISEMENT

ಶರಣ್‌–ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಜೂ.14ಕ್ಕೆ ಅಮೆಜಾನ್‌ ಪ್ರೈಂನಲ್ಲಿ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 11:18 IST
Last Updated 9 ಜೂನ್ 2022, 11:18 IST
ಶರಣ್‌ ಹಾಗೂ ಆಶಿಕಾ ರಂಗನಾಥ್‌
ಶರಣ್‌ ಹಾಗೂ ಆಶಿಕಾ ರಂಗನಾಥ್‌   

ಕಳೆದ ಮೇ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ನಿರ್ದೇಶಕ ಸಿಂಪಲ್‌ ಸುನಿ ಆ್ಯಕ್ಷನ್‌ ಕಟ್‌ ಹೇಳಿರುವ, ಶರಣ್‌–ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಸಿನಿಮಾ, ಜೂನ್‌ 14ರಿಂದ ಒಟಿಟಿ ವೇದಿಕೆ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.

ನಿರ್ದೇಶಕ ಸಿಂಪಲ್‌ ಸುನಿ ಅವರ ಹೊಸ ಪ್ರಯೋಗದಂತೆ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಪ್ರೇಕ್ಷಕರೆದುರಿಗೆ ಬಂದಿತ್ತು. ಪೌರಾಣಿಕ ಕಥೆಯ ಎಳೆಯನ್ನು ಹಿಡಿದು ಮಾಟ, ಮಂತ್ರ, ವಾಮಾಚಾರ ವಿಷಯವನ್ನು ಸುನಿ ಹೇಳಿದ್ದರು. ಶರಣ್‌–ಆಶಿಕಾ ಜೋಡಿ ತೆರೆಯ ಮೇಲೆ ಮೋಡಿ ಮಾಡಿತ್ತು.

ಜ್ಯೂನಿಯರ್‌ ಆರ್ಟಿಸ್ಟ್‌ ‘ಅನಿಲ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶರಣ್‌ ನಾನಾವತಾರಗಳನ್ನು ಎತ್ತಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿದ್ದರು. ಸಾಯಿಕುಮಾರ್‌, ಶ್ರೀನಗರ ಕಿಟ್ಟಿ,ಸುಧಾರಾಣಿ, ಅಶುತೋಷ್‌ ರಾಣಾ, ಬಾಲಾಜಿ ಮನೋಹರ್, ಬಿ.ಸುರೇಶ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಛಾಯಾಗ್ರಾಹಕ ವಿಲಿಯಂ ಡೇವಿಡ್‌ ಹಾಗೂ ಅರ್ಜುನ್‌ ಜನ್ಯ ಅವರ ಕೈಚಳಕ ಮೊದಲ ಭಾಗಕ್ಕೆ ಪೂರಕವಾಗಿತ್ತು. ಪುಷ್ಕರ ಮಲ್ಲಿಕಾರ್ಜುನಯ್ಯ ಅವರು ನಿರ್ಮಾಣ ಮಾಡಿರುವ ಈ ಚಿತ್ರವು ಎರಡು ಭಾಗಗಳಲ್ಲಿ ತೆರೆಕಾಣುತ್ತಿದ್ದು, ಎರಡನೇ ಭಾಗ ಯಾವಾಗ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನುವುದನ್ನು ಚಿತ್ರತಂಡ ಇನ್ನಷ್ಟೇ ಘೋಷಿಸಬೇಕಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.