ADVERTISEMENT

ರಾಘಣ್ಣನ ಮಗಳು!

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2019, 11:10 IST
Last Updated 1 ಮಾರ್ಚ್ 2019, 11:10 IST
ಶೀತಲ್‌
ಶೀತಲ್‌   

ನಿಖಿಲ್‌ ಮಂಜೂ ನಿರ್ದೇಶನದ, ರಾಘವೇಂದ್ರ ರಾಜ್‌ಕುಮಾರ್‌ ನಟನೆಯ ‘ಅಮ್ಮನ ಮನೆ’ ಬಿಡುಗಡೆಗೆ ಸಜ್ಜಾಗಿದೆ. ಸುಧೀರ್ಘ ವಿರಾಮದ ನಂತರ ರಾಘಣ್ಣ ಮತ್ತೆ ನಾಯಕನಾಗಿ ನಟಿಸಿರುವುದು ಈ ಚಿತ್ರದ ವಿಶೇಷ. ಹೆಸರೇ ಹೇಳುವ ಹಾಗೆಯೇ ಒಬ್ಬ ಗಂಡಿನ ಬದುಕಿನಲ್ಲಿ ಬರುವ ಮೂರು ಹೆಣ್ಣುಮಕ್ಕಳನ್ನು ಇಟ್ಟುಕೊಂಡು ನಿರ್ದೇಶಕರು ಕತೆಯನ್ನು ಕಟ್ಟಿದ್ದಾರೆ. ತಾಯಿ, ಹೆಂಡತಿ ಮತ್ತು ಮಗಳು ಈ ಮೂವರ ಸಂಬಂಧ ಹೆಣಿಗೆಯಲ್ಲಿ ಈ ಸಿನಿಮಾದ ಆತ್ಮವಿದೆ ಎನ್ನುವುದು ನಿರ್ದೇಶಕರ ಅಂಬೋಣ.

‘ಅಮ್ಮನ ಮನೆ’ಯಲ್ಲಿ ರಾಘಣ್ಣನ ಮಗಳಾಗಿ ನಟಿಸಿರುವ ಹುಡುಗಿ ಶೀತಲ್‌. ಬಿ.ಕಾಂ ಅಂತಿಮ ವರ್ಷದಲ್ಲಿ ಓದುತ್ತಿರುವ ಇವರು ಭರತನಾಟ್ಯ ಕಲಾವಿದೆ. ಕರ್ನಾಟಕ ಸಂಗೀತದ ವಿದ್ಯಾರ್ಥಿಯೂ ಹೌದು. ನಾಟ್ಯ ಮತ್ತು ಸಂಗೀತದ ಧ್ಯಾನದಲ್ಲಿ ಮುಳುಗಿದ್ದ ಹುಡುಗಿಯನ್ನು ಸಿನಿಮಾರಂಗಕ್ಕೆ ಕರೆತಂದು ಹೊಸ ಪೀಳಿಗೆಯ ಹುಡುಗಿಯ ವೇಷ ತೊಡಿಸಿದ್ದಾರೆ ನಿಖಿಲ್‌.

‘ನನಗೆ ನಟಿಸಬೇಕು ಎಂಬ ಆಸೆ ಇತ್ತು. ಆದರೆ ಅವಕಾಶ ಸಿಗುತ್ತದೆ ಎಂದು ಅಂದುಕೊಂಡಿರಲಿಲ್ಲ. ನನ್ನ ನಿರೀಕ್ಷೆಯೂ ಮೀರಿ, ಮೊದಲ ಸಿನಿಮಾದಲ್ಲಿಯೇ ರಾಘವೇಂದ್ರ ರಾಜ್‌ಕುಮಾರ್‌ ಅವರಂಥ ಹಿರಿಯ ನಟನ ಜತೆ ತೆರೆಯನ್ನು ಹಂಚಿಕೊಳ್ಳುತ್ತಿರುವುದು ಬಯಸದೇ ಬಂದ ಭಾಗ್ಯ. ಈ ಅವಕಾಶದಿಂದ ಅಚ್ಚರಿ ಮತ್ತು ಖುಷಿ ಎರಡೂ ಆಗಿದೆ’ ಎನ್ನುತ್ತಾರೆ ಶೀತಲ್‌.

ADVERTISEMENT

ಮೊದಲ ದಿನ ಶೂಟಿಂಗ್‌ ಹೋಗುವಾಗಲೇ ಅಪ್ಪ, ಅಮ್ಮ ‘ಯಾವಾಗ ಬೇಕಾದರೂ ಚಿತ್ರದಿಂದ ನಿನ್ನನ್ನು ಕೈಬಿಡಬಹುದು. ಅದಕ್ಕೆ ಅವಕಾಶ ಮಾಡಿಕೊಡಬೇಡ. ಎಷ್ಟು ಸಾಧ್ಯವೋ ಅಷ್ಟು ಚೆನ್ನಾಗಿ ನಟಿಸು’ ಎಂದೇ ಹೇಳಿಕಳಿಸಿದ್ದರಂತೆ. ಮೂರು ನಾಲ್ಕು ದಿನ ಶೂಟಿಂಗ್‌ನಲ್ಲಿ ಭಾಗವಹಿಸಿದ ಮೇಲೆಯೇ ಅವರಿಗೆ ನಂಬಿಕೆ ಬಂದಿದ್ದು.

‘ಸಂಬಂಧಗಳ ಮಹತ್ವ ಹೇಳುವ ಸಿನಿಮಾ ಇದು. ಈ ಸಿನಿಮಾದ ಮೂಲಕ ನನ್ನ ನಟನಾಜೀವನ ಆರಂಭವಾಗುತ್ತಿರುವುದಕ್ಕೆ ಹೆಮ್ಮೆಯಿದೆ’ ಎಂದು ಹೇಳಿಕೊಳ್ಳುವ ಶೀತಲ್‌ಗೆ ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ಮುಂದೆಯೂ ಚಿತ್ರರಂಗದಲ್ಲಿ ಮುಂದುವರಿಯುವ ಇರಾದೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.