ADVERTISEMENT

ಬಾಲಿವುಡ್‌ ನಟಿ, ರೂಪದರ್ಶಿ ಶೆಫಾಲಿ ಜರಿವಾಲಾ ಹೃದಯಾಘಾತದಿಂದ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 28 ಜೂನ್ 2025, 4:09 IST
Last Updated 28 ಜೂನ್ 2025, 4:09 IST
<div class="paragraphs"><p>ಶೆಫಾಲಿ ಜರಿವಾಲಾ</p></div>

ಶೆಫಾಲಿ ಜರಿವಾಲಾ

   

ಮುಂಬೈ: ನಟಿ, ರೂಪದರ್ಶಿ ಶೆಫಾಲಿ ಜರಿವಾಲಾ (42) ಶುಕ್ರವಾರ ರಾತ್ರಿ ಮುಂಬೈನಲ್ಲಿ ಮೃತಪಟ್ಟಿದ್ದಾರೆ.

ಮೂಲಗಳ ಪ್ರಕಾರ, ಶುಕ್ರವಾರ ರಾತ್ರಿ 11.15ರ ಸುಮಾರಿಗೆ ಶೆಫಾಲಿ ಅವರಿಗೆ ಹೃದಯಸ್ತಂಭನವಾಗಿದ್ದು, ಅವರ ಪತಿ ಪರಾಗ್‌ ತ್ಯಾಗಿ ಅಂಧೇರಿಯ ಬೆಲ್ಲೆವ್ಯೂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ಅವರು ಆಸ್ಪತ್ರೆಗೆ ತಲುಪುವ ವೇಳೆಗಾಗಲೇ ಅಸುನೀಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಘೋಷಿಸಿದ್ದಾರೆ. 

ADVERTISEMENT

ಅಂಧೇರಿಯ ನಿವಾಸದಲ್ಲಿ ಅವರ ಶವ ಪತ್ತೆಯಾಗಿದೆ. ಈ ಮಾಹಿತಿ ಪೊಲೀಸರಿಗೆ ರಾತ್ರಿ 1ಗಂಟೆಗೆ ತಲುಪಿತು. ಕೂಪರ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಶೆಫಾಲಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಆಲ್‌ ಇಂಡಿಯನ್‌ ಸಿನಿ ವರ್ಕರ್ಸ್‌ ಅಸೋಸಿಯೇಷನ್‌ ಖಚಿತಪಡಿಸಿದೆ. ‘ಶೆಫಾಲಿ ಈಗ ನಮ್ಮೊಂದಿಗಿಲ್ಲ. ಕೇವಲ 42ನೇ ವಯಸ್ಸಿನಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ’ ಎಂದು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿದೆ.

ಶೆಫಾಲಿ ಸಂಗೀತಗಾರ ಹರ್ಮಿತ್‌ ಸಿಂಗ್‌ ಅವರನ್ನು 2004ರಲ್ಲಿ ಮದುವೆಯಾಗಿದ್ದರು. ಆದರೆ, 2009ರಲ್ಲಿ ಅವರು ಪ್ರತ್ಯೇಕಗೊಂಡರು. ನಂತರ, 2015ರಲ್ಲಿ ನಟ ಪರಾಗ್‌ ತ್ಯಾಗಿ ಅವರನ್ನು ವಿವಾಹವಾಗಿದ್ದರು.

ಖ್ಯಾತಿ ತಂದ ‘ಕಾಂಟಾ ಲಗಾ’ ಆಲ್ಬಂ 

2002ರಲ್ಲಿ ಹೊರತಂದ ‘ಕಾಂಟಾ ಲಗಾ’ ವಿಡಿಯೊ ಆಲ್ಬಂ ಶೆಫಾಲಿ ಅವರಿಗೆ ಹೆಸರು ತಂದುಕೊಟ್ಟಿತ್ತು. ಅಲ್ಲದೆ ಟಿ.ವಿ. ಶೋಗಳಾದ ‘ಬೂಗೀ ವೂಗೀ’ ಬಿಗ್‌ ಬಾಸ್‌ 13 ನಾಚ್‌ ಬಲಿಯೇ 5 ಹಾಗೂ 7 ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. 2011ರಲ್ಲಿ ಬಿಡುಗಡೆಯಾದ ಕನ್ನಡದ ‘ಹುಡುಗರು’ ಚಲನಚಿತ್ರದ ‘ತೊಂದ್ರೆ ಇಲ್ಲ ಪಂಕಜ’ ಹಾಡಿಗೆ ಶೆಫಾಲಿ ನೃತ್ಯ ಮಾಡಿ ಜನಪ್ರಿಯರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.