ADVERTISEMENT

ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಫೆಬ್ರುವರಿ 2026, 13:45 IST
Last Updated 18 ಫೆಬ್ರುವರಿ 2026, 13:45 IST
   

ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಈ ಚಿತ್ರವನ್ನು ರಂಗಸ್ಥಳ ಸ್ಟುಡಿಯೊ ಬ್ಯಾನರ್ ಅಡಿ ಶೈನ್ ಶೆಟ್ಟಿ ಹಾಗೂ ದಿವಕರ್ ಶೆಟ್ಟಿ ನಿರ್ಮಾಣ ಮಾಡಿದ್ದಾರೆ.

ಕರಾವಳಿ ಕರ್ನಾಟಕದ ಸಂಸ್ಕೃತಿ, ಹಾಸ್ಯಭಾವ, ಸಮುದಾಯ ಜೀವನದ ನಾಡಿನ ಸ್ಪಂದನ ಹೊತ್ತ ಕಥೆಯಿದು. ಬಸ್ಸಿನೊಂದಿಗೆ ಬದುಕು ಸಾಗಿಸುವ ಒಬ್ಬ ಸಾಮಾನ್ಯ ಬಸ್ ಚಾಲಕನ ಜೀವನದ ಕಥೆಯಾಗಿದೆ. ಬಸ್ ಚಾಲಕನ ಕರ್ತವ್ಯದಿಂದ ಆರಂಭವಾಗುವ ಚಿತ್ರವು ಭಾವನಾತ್ಮಕ ರೂಪಾಂತರಗೊಳ್ಳುತ್ತದೆ. ಈ ಚಿತ್ರವು ಉಡುಪಿ–ಮಂಗಳೂರು ಕರಾವಳಿಯ ಕಥಾಹಂದರ ಹೊಂದಿದೆ. ಪುರುಷನೊಬ್ಬ ನಿತ್ಯದ ಜಂಜಾಟ, ಸೋಲು ಸವಾಲುಗಳ ನಡುವೆ ಜೀವನ ಸಾಗಿಸುವುದನ್ನು ಈ ಚಿತ್ರದಲ್ಲಿ ನೋಡಬಹುದು ಎಂದು ಚಿತ್ರತಂಡ ಮಾಹಿತಿ ನೀಡಿದೆ.

ಈ ಚಿತ್ರ ಕುರಿತು ಮಾತನಾಡಿರುವ ನಟ, ನಿರ್ಮಾಪಕ ಶೈನ್ ಶೆಟ್ಟಿ ಅವರು, ಕರಾವಳಿ ನೆಲ, ನೈಜ ಕಥೆಗಳನ್ನು ಹೇಳುವುದೇ ‘ರಂಗಸ್ಥಳ ಸ್ಟುಡಿಯೋಸ್ ಸಂಸ್ಥೆಯ ಉದ್ದೇಶವಾಗಿದೆ. ಈ ಚಿತ್ರದಿಂದ ನಮ್ಮ ಹುಟ್ಟೂರು, ಮಣ್ಣಿಗೆ ಗೌರವ ಸಲ್ಲಿಸುತ್ತೇವೆ. ಸಾಮಾನ್ಯ ಜನರ ಬದುಕಿಗೆ ಈ ಚಿತ್ರದ ಮೂಲಕ ನಮನ ಸಲ್ಲಿಸುತ್ತೇವೆ’ ಎಂದು ಹೇಳಿಕೊಂಡಿದ್ದಾರೆ.

ADVERTISEMENT

‘ಕಾಂತಾರ’,  ‘ಒಂದು ಮೊಟ್ಟೆಯ ಕಥೆ’ ಚಿತ್ರದ ಮೂಲಕ ಗಮನ ಸೆಳೆದಿದ್ದ ಕರಾವಳಿ ಮೂಲದ ಶೈನ್ ಶೆಟ್ಟಿ ಅವರು ‘ಶಂಕರಾಭರಣ’ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ಕಾಣಿಸುತ್ತಿದ್ದಾರೆ. 'ಮಿಥ್ಯ' ಚಿತ್ರದ ಮೂಲಕ ಹಲವು ಚಲನಚಿತ್ರೋತ್ಸವಗಳಲ್ಲಿ ಗುರುತಿಸಿಕೊಂಡಿರುವ ಸುಮಂತ್ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. 

ಈ ಚಿತ್ರಕ್ಕೆ ಚರಣ್ ರಾಜ್ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ಉದಿತ್ ಖುರಾನಾ ಅವರು  ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.