ಹೇಮಂತ್ ರಾವ್ ನಿರ್ದೇಶನದ ‘666: ಆಪರೇಷನ್ ಡ್ರೀಮ್ ಥಿಯೇಟರ್ʼ ಚಿತ್ರದಿಂದ ನಿರಂತರವಾಗಿ ಹೊಸ ಅಪ್‌ಡೇಟ್‌ಗಳು ಬರುತ್ತಲೇ ಇವೆ. ಚಿತ್ರದಲ್ಲಿ ಶಿವರಾಜ್‌ಕುಮಾರ್ ಅವರ ಫಸ್ಟ್‌ಲುಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿದೆ. ಶಿವಣ್ಣ ಕೈಯ್ಯಲ್ಲೊಂದು ಪಿಸ್ತೂಲ್ ಹಿಡಿದು ಜೇಮ್ಸ್ ಬಾಂಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
ಹೇಮಂತ್ ರಾವ್ ‘ಸಪ್ತ ಸಾಗರ’ದ ಬಳಿಕ ಶಿವರಾಜ್‌ಕುಮಾರ್ ಜತೆ ತಮ್ಮ ಮುಂದಿನ ಸಿನಿಮಾ ಘೋಷಿಸಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಬಳಿಕ ಡಾಲಿ ಧನಂಜಯ ಅವರ ಜತೆ ‘666: ಆಪರೇಷನ್ ಡ್ರೀಮ್ ಥಿಯೇಟರ್ʼ ಸಿನಿಮಾ ಪ್ರಾರಂಭಿಸಿ, ಶಿವರಾಜ್‌ಕುಮಾರ್ ಕೂಡ ಚಿತ್ರದಲ್ಲಿ ಇರಲಿದ್ದಾರೆ ಎಂದರು. ಇದೀಗ ಶಿವರಾಜ್‌ಕುಮಾರ್ ಅವರ ಪಾತ್ರವನ್ನೂ ತಂಡ ರಿವೀಲ್ ಮಾಡಿದೆ.
ಡಾಲಿ ಧನಂಜಯ ಅವರ ಎರಡು ಲುಕ್‌ಗಳನ್ನು ಈ ಹಿಂದೆ ಪರಿಚಯಿಸಿತ್ತು. ‘ಶಿವಣ್ಣ ಕೂಡ ಪ್ರಮುಖ ಪಾತ್ರದಲ್ಲಿ ಇರುತ್ತಾರೆ. ಇಬ್ಬರದ್ದೂ ಸಮಾನ ಪ್ರಾಮುಖ್ಯತೆ ಹೊಂದಿರುವ ಪಾತ್ರಗಳು’ ಎಂದಿದೆ ಚಿತ್ರತಂಡ. ಚಿತ್ರದಲ್ಲಿ ಶಿವಣ್ಣ ಸ್ಪೈ ಪಾತ್ರ ಮಾಡುತ್ತಿದ್ದಾರೆ ಎಂಬ ಸುಳಿವನ್ನೂ ನೀಡಿದೆ. ರಾಜ್‌ಕುಮಾರ್ ಅವರ 999ರ ಬ್ಲಾಕ್‌ಬಸ್ಟರ್ ಸ್ಪೈ ಚಿತ್ರಗಳನ್ನು ನೆನಪಿಸುತ್ತಿದೆ ಶಿವಣ್ಣ ಅವರ ಫಸ್ಟ್‌ಲುಕ್.
ವೈಶಾಕ್ ಜೆ.ಗೌಡ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚರಣ್ ರಾಜ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಚಿತ್ರಗ್ರಹಣ ಹಾಗೂ ವಿಶ್ವಾಸ್ ಕಶ್ಯಪ್ ನಿರ್ಮಾಣ ವಿನ್ಯಾಸವಿದೆ. ಜುಲೈನಲ್ಲಿ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆಯಿದೆ. ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.