ADVERTISEMENT

ಭಜರಂಗಿ–2 ಚಿತ್ರ ಬಿಡುಗಡೆ ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2021, 7:53 IST
Last Updated 30 ಆಗಸ್ಟ್ 2021, 7:53 IST
ಭಜರಂಗಿ–2 ಚಿತ್ರದ ಪೋಸ್ಟರ್‌ 
ಭಜರಂಗಿ–2 ಚಿತ್ರದ ಪೋಸ್ಟರ್‌    

ರಾಜ್ಯ ಸರ್ಕಾರವು ಚಿತ್ರಮಂದಿರಗಳಲ್ಲಿ ಶೇ 100 ಪ್ರೇಕ್ಷಕರ ಭರ್ತಿಗೆ ಅವಕಾಶ ನೀಡದೇ ಇರುವ ಕಾರಣ ಹಾಗೂ ವಾರಾಂತ್ಯದ ಲಾಕ್‌ಡೌನ್‌ ಮತ್ತು ರಾತ್ರಿ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ನಟ ಶಿವರಾಜ್‌ಕುಮಾರ್‌ ನಟನೆಯ ಬಹುನಿರೀಕ್ಷೆಯ ಬಿಗ್‌ಬಜೆಟ್‌ ಚಿತ್ರ ‘ಭಜರಂಗಿ–2’ ಬಿಡುಗಡೆ ಮುಂದೂಡಲಾಗಿದೆ.

ಸೆ.1ಕ್ಕೆ ಚಿತ್ರದ ಟ್ರೇಲರ್‌ ಹಾಗೂ ಗಣೇಶ ಚತುರ್ಥಿಗೆ(ಸೆ.10) ಚಿತ್ರ ಬಿಡುಗಡೆಗೆ ಚಿತ್ರತಂಡವು ನಿರ್ಧರಿಸಿತ್ತು. ಇದೀಗ ಚಿತ್ರದ ಟ್ರೇಲರ್‌ ಬಿಡುಗಡೆಯನ್ನೂ ಮುಂದೂಡಲಾಗಿದೆ. ‘ಕೋವಿಡ್‌ ಪ್ರಕರಣಗಳು ಜಾಸ್ತಿ ಆಗುತ್ತಿದೆ. ರಾತ್ರಿ ಕರ್ಫ್ಯೂ ಹಾಗೂ ವಾರಾಂತ್ಯದ ಲಾಕ್‌ಡೌನ್‌ ಇರುವ ಕಾರಣ ಚಿತ್ರ ಬಿಡುಗಡೆಯನ್ನು ಮುಂದಕ್ಕೆ ಹಾಕುತ್ತಿದ್ದೇವೆ. ಆದಷ್ಟು ಬೇಗೆ ಬಿಡುಗಡೆ ದಿನಾಂಕ ಘೋಷಿಸುತ್ತೇವೆ. ಬಹಳ ತಡ ಮಾಡುವುದಿಲ್ಲ. ಶೀಘ್ರದಲ್ಲೇ ಚಿತ್ರ ಬಿಡುಗಡೆ ಮಾಡಲು ನೋಡುತ್ತೇವೆ. ಜನ ಹೌಸ್‌ಫುಲ್‌ನಲ್ಲಿ ಸಿನಿಮಾ ನೋಡಿದರಷ್ಟೇ ಚಿತ್ರದ ಪವರ್‌ ಅನುಭವಿಸಬಹುದು. ಅಭಿಮಾನಿಗಳು ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ.ಆದಷ್ಟು ಬೇಗ ಟ್ರೇಲರ್‌ ರಿಲೀಸ್‌ ಮಾಡುತ್ತೇವೆ. ಟ್ರೇಲರ್‌ನಲ್ಲೇ ಬಿಡುಗಡೆ ದಿನಾಂಕ ಹೇಳುತ್ತೇವೆ’ ಎಂದು ಶಿವರಾಜ್‌ಕುಮಾರ್‌ ಹೇಳಿದ್ದಾರೆ.

ಆಗಸ್ಟ್‌ ಮೊದಲ ಅಥವಾ ಎರಡನೇ ವಾರದಲ್ಲಿ ರಾಜ್ಯ ಸರ್ಕಾರ ಚಿತ್ರಮಂದಿರಗಳು, ಮಲ್ಟಿಪ್ಲೆಕ್ಸ್‌ಗಳಲ್ಲಿ ಶೇ 100 ಪ್ರೇಕ್ಷಕರಿಗೆ ಅವಕಾಶ ನೀಡಬಹುದು ಎನ್ನುವ ಭರವಸೆ ಹೊಂದಿದ್ದ ಬಿಗ್‌ಬಜೆಟ್‌ ಚಿತ್ರತಂಡಗಳು, ಜುಲೈ ಅಂತ್ಯದಲ್ಲಿಬಿಡುಗಡೆ ದಿನಾಂಕವನ್ನು ಘೋಷಿಸಿದ್ದವು. ಸರ್ಕಾರ ಈ ಕುರಿತು ಇಲ್ಲಿಯವರೆಗೂ ಯಾವುದೇ ಆದೇಶ ಹೊರಡಿಸದೇ ಇರುವುದರಿಂದ ಆ.20ರಂದು ಬಿಡುಗಡೆಯಾಗಬೇಕಿದ್ದ ನಟ ದುನಿಯಾ ವಿಜಯ್‌ ನಟನೆಯ ‘ಸಲಗ’ ಚಿತ್ರವನ್ನೂ ಮುಂದೂಡಲಾಗಿತ್ತು. ಇದೀಗ ಎ.ಹರ್ಷ ನಿರ್ದೇಶನದ ‘ಭಜರಂಗಿ–2’ ಚಿತ್ರವನ್ನೂ ಮುಂದೂಡಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.