ADVERTISEMENT

ಚಿತ್ರರಂಗದಲ್ಲಿ 37 ವರ್ಷ ಪೂರೈಸಿದ ಶಿವರಾಜ್‌ಕುಮಾರ್‌

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2023, 6:55 IST
Last Updated 21 ಫೆಬ್ರುವರಿ 2023, 6:55 IST
   

‘ಆನಂದ್‌’ ಚಿತ್ರದಿಂದ ಪ್ರಾರಂಭಿಸಿ ತಮ್ಮದೇ ಬ್ಯಾನರ್‌ ಗೀತಾ ಪಿಕ್ಚರ್ಸ್‌ನ ‘ವೇದಾ’ ಸಿನಿಮಾದವರೆಗೆ 125 ಚಿತ್ರಗಳಲ್ಲಿ ನಟಿಸಿರುವ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಕನ್ನಡ ಚಿತ್ರರಂಗದಲ್ಲಿ 37 ವರ್ಷಗಳನ್ನು ಪೂರೈಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಶಿವಣ್ಣ ಧನ್ಯವಾದ ಪತ್ರವನ್ನು ಹಂಚಿಕೊಂಡಿದ್ದಾರೆ. ‘ಕನ್ನಡ ಚಿತ್ರರಂಗಕ್ಕೆ ನಾನು ಪಾದಾರ್ಪಣೆ ಮಾಡಿ ಇಂದಿಗೆ 37 ವರ್ಷಗಳು. ಆನಂದ್ ಚಿತ್ರದ ಮೊದಲ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಆನಂದ್ ಇಂದ ವೇದವರೆಗೂ ನೀವು ಕೊಟ್ಟ ಪ್ರೀತಿ ಬೆಲೆಕಟ್ಟಲಾಗದ್ದು. ನನ್ನನ್ನು ನೀವು ಕೇವಲ ಒಬ್ಬ ನಟನಾಗಿ, ಸ್ಟಾರ್ ಆಗಿ ಮಾತ್ರವಲ್ಲದೆ ನಿಮ್ಮ ಮನೆಮಗನಾಗಿ ಬೆಳೆಸಿದ್ದೀರಿ. ದೇವರ ಸ್ವರೂಪವಾಗಿರುವ ಅಭಿಮಾನಿಗಳಿಗೆ, ಮಾಧ್ಯಮ ಮಿತ್ರರಿಗೆ, ಹಿರಿಯರಿಗೆ, ಕಿರಿಯರಿಗೆ, ಸಹದ್ಯೋಗಿಗಳಿಗೆ ಹಾಗೂ ನನ್ನ ಇಡೀ ಕುಟುಂಬಕ್ಕೆ ಅನಂತ ವಂದನೆಗಳು’ ಎಂದು ಶಿವಣ್ಣ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಶಿವಣ್ಣ ಅವರ ಮೊದಲ ಚಿತ್ರ ‘ಆನಂದ್’ ಚಿತ್ರ 1986, ಫೆ.19ರಂದು ಸೆಟ್ಟೇರಿತ್ತು. ಸಿಂಗೀತಂ ಶ್ರೀನಿವಾಸ್‌ ರಾವ್‌ ನಿರ್ದೇಶನದ ಚಿತ್ರವನ್ನು ಮಗನಿಗಾಗಿ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಾಣ ಮಾಡಿದ್ದರು. ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸದ್ದು ಮಾಡಿದ್ದ ಚಿತ್ರ ಸೂಪರ್‌ ಹಿಟ್‌ ಆಗಿತ್ತು. ಶಿವಣ್ಣನಿಗೆ ಈ ಚಿತ್ರಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿ ಕೂಡ ಲಭಿಸಿತ್ತು.

ADVERTISEMENT

ಬಳಿಕ ‘ರಥಸಪ್ತಮಿ’,‘ಮನ ಮೆಚ್ಚಿದ ಹುಡುಗಿ’ ಚಿತ್ರಗಳು ಹಿಟ್‌ ಆಗಿ ಹ್ಯಾಟ್ರಿಕ್‌ ಹೀರೊ ಎನ್ನಿಸಿಕೊಂಡರು. ‘ಓಂ’, ‘ಜೋಗಿ’, ‘ಜನುಮದ ಜೋಡಿ’, ‘ಎಕೆ 47’, ‘ನಮ್ಮೂರ ಮಂದಾರ ಹೂವೇ’ ಚಿತ್ರಗಳು ಶಿವಣ್ಣ ಅವರನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋದ ಚಿತ್ರಗಳು. ‘ಟಗರು’, ‘ಶಿವಲಿಂಗ’ ಶಿವಣ್ಣ ವರ್ಚಸ್ಸನ್ನು ಇನ್ನಷ್ಟು ಮಾಸ್‌ ಆಗಿಸಿದ ಚಿತ್ರಗಳು.

ಇದೀಗ ತಮ್ಮದೇ ಗೀತಾ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ‘ಭೈರತಿ ರಣಗಲ್​’ ಘೋಷಿಸಿದ್ದಾರೆ. ನರ್ತನ್ ಜೊತೆ ಮಾಡುತ್ತಿರುವ ಈ ಚಿತ್ರದ ಫಸ್ಟ್‌ಲುಕ್‌ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ. ‘45’, ‘ನೀ ಸಿಗೋವರೆಗೂ’, ಶ್ರೀನಿ ನಿರ್ದೇಶನದ ‘ಘೋಸ್ಟ್​’ ಸಿನಿಮಾದಲ್ಲಿ ಶಿವರಾಜ್​ಕುಮಾರ್​ ನಟಿಸುತ್ತಿದ್ದಾರೆ. ರಜನಿಕಾಂತ್​ ನಟನೆಯ ‘ಜೈಲರ್’​, ಧನುಷ್​ ಅಭಿನಯದ ‘ಕ್ಯಾಪ್ಟನ್​ ಮಿಲ್ಲರ್​’ ಚಿತ್ರದಲ್ಲಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಶಿವಣ್ಣ ಕೈಯಲ್ಲಿ ಕನಿಷ್ಠ ಮೂರು ವರ್ಷಗಳಿಗಾಗುವಷ್ಟು ಸಿನಿಮಾಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.