ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇಂದು 63ಕ್ಕೆ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕ್ಯಾನ್ಸರ್‌ನಿಂದ ಗುಣಮುಖವಾಗಿರುವ ಅವರು ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
ಬಾಲನಟನಾಗಿ 1974ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶಿವರಾಜ್ ಕುಮಾರ್ ಅವರು, 1986ರಲ್ಲಿ ಆನಂದ್ ಚಿತ್ರದ ಮೂಲಕ ನಾಯಕ ನಟನಾಗಿ ಮೊದಲ ಬಾರಿಗೆ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಂಡರು. ಈ ಮೂರು ದಶಕದಲ್ಲಿ 125ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದಾರೆ.
ಕನ್ನಡದಲ್ಲಷ್ಟೇ ಅಲ್ಲ ಪರಭಾಷೆಯಲ್ಲೂ ಶಿವಣ್ಣ ಬೇಡಿಕೆ ನಟ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದಲ್ಲಿ ಶಿವಣ್ಣನ ಅಭಿನಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಅಲ್ಲಿಂದ ಪರಭಾಷೆಯಲ್ಲೂ ಶಿವಣ್ಣನ ಬೇಡಿಕೆ ಹೆಚ್ಚಿದ್ದು, ಹಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ.
ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರು ಐದಾರು ತಿಂಗಳು ವಿರಾಮ ಪಡೆದುಕೊಂಡಿದ್ದರು. ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿರುವ ಅವರು ಮತ್ತೆ ನಟನೆಗೆ ಇಳಿದಿದ್ದಾರೆ.
ಶಿವರಾಜ್ ಕುಮಾರ್ ಅವರ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿದ್ದು, ಕೆಲ ಸಿನಿಮಾಗಳು ಬಿಡುಗಡೆಗೆ ಸಿದ್ದವಾಗಿವೆ.
‘666: ಆಪರೇಷನ್ ಡ್ರೀಮ್ ಥಿಯೇಟರ್ʼ
ಹೇಮಂತ್ ರಾವ್ ನಿರ್ದೇಶನದ ‘666: ಆಪರೇಷನ್ ಡ್ರೀಮ್ ಥಿಯೇಟರ್ʼದಲ್ಲಿ ಡಾಲಿ ಧನಂಜಯ್ ಮತ್ತು ಶಿವರಾಜ್ ಕುಮಾರ್ ನಟಿಸುತ್ತಿದ್ದಾರೆ. ಶಿವರಾಜ್‌ಕುಮಾರ್ ಅವರ ಫಸ್ಟ್‌ಲುಕ್ ಅನ್ನು ಚಿತ್ರತಂಡ ಇತ್ತೀಚೆಗೆ ಬಿಡುಗಡೆಗೊಳಿಸಿದ್ದು, ಕೈಯ್ಯಲ್ಲೊಂದು ಪಿಸ್ತೂಲ್ ಹಿಡಿದು ಜೇಮ್ಸ್ ಬಾಂಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
‘ಟಗರು 2’
‘ಟಗರು’ ಚಿತ್ರದ ಯಶಸ್ಸಿನ ನಂತರ ‘ಟಗರು–2’ ಸಿನಿಮಾಕ್ಕೆ ದುನಿಯಾ ಸೂರಿ ಆ್ಯಕ್ಷನ್ ಕಟ್ ಹೇಳುವುದಕ್ಕೆ ಅಣಿಯಾಗಿದ್ದಾರೆ. ಟಗರು ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದ ಶಿವಣ್ಣ ‘ಟಗರು–2’ ಚಿತ್ರದಲ್ಲೂ ಅದೇ ಖದರ್‌ನಲ್ಲಿ ಕಾಣಿಸಿಕೊಳ್ಳದ್ದಾರೆ. ಈ ಸಿನಿಮಾವನ್ನು ಕೆ.ಪಿ. ಶ್ರೀಕಾಂತ್ ನಿರ್ಮಾಣ ಮಾಡಲಿದ್ದಾರೆ.
‘45’
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ‘45’ ಸಿನಿಮಾದಲ್ಲೂ ಶಿವಣ್ಣ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಚಿತ್ರವನ್ನು ಎಂ. ರಮೇಶ್ ರೆಡ್ಡಿ ಅವರು ತಮ್ಮ ‘ಸೂರಜ್ ಪ್ರೊಡಕ್ಷನ್’ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.ಈ ಸಿನಿಮಾ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳದಲ್ಲಿ ತೆರೆಕಾಣಲಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಅವರೇ ಕಥೆ-ಚಿತ್ರಕಥೆ ಬರೆದು ಸಂಗೀತ ಸಂಯೋಜಿಸಿದ್ದಾರೆ.
‘A for ಆನಂದ್’
ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಶಿವರಾಜ್‌ಕುಮಾರ್ ಅವರು ಇದೀಗ ಶಿಕ್ಷಕನ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಶ್ರೀನಿ ನಿರ್ದೇಶನದ ‘A for ಆನಂದ್’ ಚಿತ್ರದಲ್ಲಿ ಶಿವಣ್ಣ ಪೆನ್ನು, ಬಳಪ ಹಿಡಿದಿದ್ದಾರೆ. ‘ವೇದ’, ‘ಭೈರತಿ ರಣಗಲ್’ ಬಳಿಕ ಗೀತಾ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿರಲಿದೆ. ‘ಮಫ್ತಿ’ ಸಿನಿಮಾದಲ್ಲಿ ಡಾನ್ ಆಗಿ, ‘ಟಗರು’ ಸಿನಿಮಾದಲ್ಲಿ ಪೊಲೀಸ್ ಆಗಿ, ‘ಭೈರತಿ ರಣಗಲ್’ ಸಿನಿಮಾದಲ್ಲಿ ‘ಲಾಯರ್’ ಆಗಿ ಹೀಗೆ ಭಿನ್ನ ಪಾತ್ರಗಳಿಗೆ ಬಣ್ಣಹಚ್ಚುತ್ತಿರುವ ಶಿವರಾಜ್‌ಕುಮಾರ್ ಮೇಸ್ಟ್ರಾಗಿ ಬಣ್ಣಹಚ್ಚಲಿದ್ದಾರೆ
‘ಪೆದ್ದಿ’
ತೆಲುಗು ನಟ ರಾಮ್ ಚರಣ್ ನಟನೆಯ ಪೆದ್ದಿ ಚಿತ್ರದಲ್ಲಿ ಶಿವಣ್ಣ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ್ದಾರೆ.
‘ಜೈಲರ್ 2’
ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸಿದ್ದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಸಿನಿಮಾದ ಎರಡನೇ ಭಾಗ ‘ಜೈಲರ್–2’ ಘೋಷಣೆಯಾಗಿದೆ. ಈ ಚಿತ್ರದಲ್ಲೂ ಶಿವಣ್ಣ ಅಭಿನಯಿಸುತ್ತಿದ್ದಾರೆ. ‘ಜೈಲರ್’ ನಿರ್ದೇಶಿಸಿದ್ದ ನೆಲ್ಸನ್ ದಿಲೀಪ್ ಕುಮಾರ್ ಅವರೇ ‘ಜೈಲರ್ 2’ ನಿರ್ದೇಶಿಸುತ್ತಿದ್ದು ಕುತೂಹಲ ಮೂಡಿಸಿದೆ. ಈ ವರ್ಷಾಂತ್ಯಕ್ಕೆ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.