ADVERTISEMENT

ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ: ಪ್ರತಿಕ್ರಿಯೆ ನೀಡಿದ ಎ.ಆರ್. ರೆಹಮಾನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಸೆಪ್ಟೆಂಬರ್ 2023, 11:25 IST
Last Updated 11 ಸೆಪ್ಟೆಂಬರ್ 2023, 11:25 IST
   

ಚೆನ್ನೈ: ನಗರದಲ್ಲಿ ನಿನ್ನೆ (ಸೆ.10ರಂದು) ನಡೆದ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಅವ್ಯವಸ್ಥೆ ಉಂಟಾಗಿದ್ದು ಜಮಾಯಿಸಿದ್ದ ಜನರ ನಡುವೆ ನೂಕುನುಗ್ಗಲು, ಕಾಲ್ತುಳಿತ ಸಂಭವಿಸಿದೆ ಎಂದು ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಭಿಮಾನಿಗಳು ದೂರಿದ್ದಾರೆ. 

ಟಿಕೇಟ್‌ ಖರೀದಿ ಮಾಡಿಯೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗಲಾಗದೆ ವಾಪಸ್‌ ಹೋಗಿದ್ದೇವೆ. ಮಹಿಳೆಯರು, ಮಕ್ಕಳು ಗಾಯಗೊಂಡಿದ್ದಾರೆ, ಸಂಘಟಕರು ಆವರಣದ ಸಾಮರ್ಥ್ಯವನ್ನೂ ಮೀರಿ ಟಿಕೇಟ್ ಮಾರಾಟ ಮಾಡಿದ್ದಾರೆ ಎಂದು ಕಾರ್ಯಕ್ರಮಕ್ಕೆ ಬಂದಿದ್ದ ಜನ ಅಸಮಧಾನ ಹೊರಹಾಕಿದ್ದಾರೆ. 

ಈ ಬಗ್ಗೆ ಎಕ್ಸ್‌ನಲ್ಲಿ ಸಂಗೀತ ಮಾಂತ್ರಿಕ ಎ.ಆರ್. ರೆಹಮಾನ್ ಪ್ರತಿಕ್ರಿಯಿಸಿದ್ದು, ‘ಪ್ರೀತಿಯ ಚೆನ್ನೈ ಮಕ್ಕಳೆ, ಯಾರಿಗೆಲ್ಲ ಟಿಕೆಟ್‌ ಖರೀದಿಸಿಯೂ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಲಿಲ್ಲವೋ ಅವರು ಟಿಕೆಟ್‌ನ ಫೋಟೊ ತೆಗೆದು arr4chennai@btos.in ಇಲ್ಲಿ ಹಂಚಿಕೊಳ್ಳಿ, ಆದಷ್ಟು ಬೇಗ ನಮ್ಮ ತಂಡ ಪ್ರತಿಕ್ರಿಯಿಸಲಿದೆ’ ಎಂದು ಪೋಸ್ಟ್‌ ಹಂಚಿಕೊಂಡಿದ್ದಾರೆ. 

ADVERTISEMENT

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಹಂಚಿಕೊಂಡ ಅವರು, ‘ಈ ಬಾರಿ ತ್ಯಾಗದ ಮೇಕೆಯಾಗಿದ್ದೇನೆ’ ಮುಂದಿನ ದಿನಗಳಲ್ಲಾದರೂ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸಲು ಚೆನ್ನೈಗೆ ವಿಶ್ವದರ್ಜೆಯ ಸೌಕರ್ಯಗಳು ಸಿಗಲಿ ಎಂದು ಆಶಿಸುತ್ತೇನೆ ಎಂದು ಬರೆದಿದ್ದಾರೆ.

ಸದ್ಯ ಆಯೋಜಕರ ವಿರುದ್ಧ ತಮಿಳುನಾಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಟ್ರಾಫಿಕ್‌ ಸೇರಿದಂತೆ ಇತರ ವ್ಯವಸ್ಥೆಗಳನ್ನು ಮಾಡಿದ್ದರ ಬಗ್ಗೆ ಮತ್ತು ಅತಿಹೆಚ್ಚು ಟಿಕೆಟ್‌ ಮಾರಾಟ ಮಾಡಿರುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಚೆನ್ನೈ ನಗರ ಪೊಲೀಸ್ ಆಯುಕ್ತ ಅಮಲ್‌ ರಾಜ್‌ ತಿಳಿಸಿದ್ದಾರೆ.

20 ಸಾವಿರ ಜನರು ಬರುವ ನಿರೀಕ್ಷೆಯಿದ್ದ ಕಾರ್ಯಕ್ರಮಕ್ಕೆ 50 ಸಾವಿರ ಜನ ಆಗಮಿಸಿದ್ದರು ಎಂದು ಆಯುಕ್ತ ತಿಳಿಸಿದ್ದಾರೆ. 

ಪಾಸ್‌ ಇದ್ದರೂ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಹೋಗದಂತೆ ತಡೆದಿದ್ದಾರೆ ಎಂದು ರೆಹಮಾನ್ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳನ್ನು ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.