ADVERTISEMENT

ಸೋನಾಕ್ಷಿ ವಿರುದ್ಧ ಜಾಮೀನು ರಹಿತ ವಾರೆಂಟ್‌; ಸುಳ್ಳು ಸುದ್ದಿ ಎಂದ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಮಾರ್ಚ್ 2022, 9:22 IST
Last Updated 8 ಮಾರ್ಚ್ 2022, 9:22 IST
ನಟಿ ಸೋನಾಕ್ಷಿ ಸಿನ್ಹಾ
ನಟಿ ಸೋನಾಕ್ಷಿ ಸಿನ್ಹಾ   

ಮುಂಬೈ: ವಂಚನೆ ಪ್ರಕರಣದಲ್ಲಿ ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಯಾಗಿರುವ ಬಗ್ಗೆ ವರದಿಗಳು ಪ್ರಕಟಗೊಂಡಿವೆ. ಆದರೆ, ಅಂಥ ಯಾವುದೇ ವಾರೆಂಟ್‌ ಜಾರಿಯಾಗಿರುವುದು ಕೇವಲ ಕಾಲ್ಪನಿಕ ಸಂಗತಿ ಎಂದು ಸೋನಾಕ್ಷಿ ಹೇಳಿದ್ದಾರೆ.

ದೆಹಲಿಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ಸೋನಾಕ್ಷಿ ₹37 ಲಕ್ಷ ಮುಂಗಡ ಹಣ ಪಡೆದಿದ್ದರು. ಆ ಕಾರ್ಯಕ್ರಮಕ್ಕೆ ಅವರು ಹಾಜರಾಗಿರಲಿಲ್ಲ ಹಾಗೂ ಮುಂಗಡ ಹಣವನ್ನು ಕಾರ್ಯಕ್ರಮದ ಆಯೋಜಕರಿಗೆ ಮರು ಪಾವತಿಸಲು ಅವರ ಮ್ಯಾನೇಜರ್‌ ನಿರಾಕರಿಸಿದ್ದರು ಎಂದು ಆರೋಪಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ವಂಚನೆ ಪ್ರಕರಣ ದಾಖಲಾಗಿರುವುದಾಗಿ ವರದಿಯಾಗಿತ್ತು.

ಅದರ ಬಗ್ಗೆ ಸ್ಪಷ್ಟನೆ ನೀಡಿರುವ ಸೋನಾಕ್ಷಿ ಸಿನ್ಹಾ, 'ನನ್ನ ವಿರುದ್ಧ ಜಾಮೀನು ರಹಿತ ವಾರೆಂಟ್‌ ಜಾರಿಯಾಗಿರುವುದಾಗಿ ಮಾಧ್ಯಮಗಳಲ್ಲಿ ಸುದ್ದಿ ಹರಿದಾಡುತ್ತಿದೆ. ಆ ಬಗ್ಗೆ ಅಧಿಕೃತ ಮೂಲಗಳಿಂದ ಪರಿಶೀಲಿಸದೆಯೇ ವರದಿಯಾಗುತ್ತಿದೆ. ದುಷ್ಟ ವ್ಯಕ್ತಿಯೊಬ್ಬ ನನಗೆ ಕಿರುಕುಳ ನೀಡಲು ಹೀಗೆಲ್ಲ ಮಾಡಿದ್ದಾರೆ, ಇದೊಂದು ಅಪ್ಪಟ ಕಾಲ್ಪನಿಕ ಕಥೆಯಾಗಿದೆ. ಈ ಸುಳ್ಳು ಸುದ್ದಿಯನ್ನು ಪ್ರಕಟಿಸಬಾರದೆಂದು ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು ಹಾಗೂ ಸುದ್ದಿ ವರದಿಗಾರರಲ್ಲಿ ಕೋರುತ್ತೇನೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಈ ಸಂಬಂಧ ಕಾನೂನು ತಜ್ಞರ ತಂಡವು ಮುಂದಿನ ಕ್ರಮಕೈಗೊಳ್ಳಲಿದೆ ಎಂದಿರುವುದಾಗಿ ವರದಿಯಾಗಿದೆ.

'ನಾನು ಹಲವು ವರ್ಷಗಳಿಂದ ಗಳಿಸಿಕೊಂಡಿರುವ ಒಳ್ಳೆಯ ಹೆಸರನ್ನು ಹಾಳು ಮಾಡಲು ಈ ವ್ಯಕ್ತಿ ಪ್ರಯತ್ನಿಸುತ್ತಿದ್ದಾನೆ. ಪ್ರಚಾರ ಪಡೆದುಕೊಳ್ಳಲು ಹಾಗೂ ನನ್ನಿಂದ ಹಣ ಕಸಿಯಲು ಸುಳ್ಳು ವಿಚಾರಗಳನ್ನು ಮಾಧ್ಯಮಗಳಿಗೆ ಹರಿಯ ಬಿಡುತ್ತಿದ್ದಾನೆ. ಈ ವಿಚಾರವು ಮುರಾದಾಬಾದ್‌ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ ಹಾಗೂ ಅಲಹಾಬಾದ್‌ ಹೈ ಕೋರ್ಟ್‌ ತಡೆಯಾಜ್ಞೆ ನೀಡಿದೆ. ನ್ಯಾಯಾಂಗ ನಿಂದನೆಯ ಕುರಿತು ನಮ್ಮ ಕಾನೂನು ತಜ್ಞರ ತಂಡವು ಸೂಕ್ತ ಕ್ರಮಕೈಗೊಳ್ಳಲಿದೆ. ನಾನು ಮನೆಯಲ್ಲಿದ್ದೇನೆ ಹಾಗೂ ನನ್ನ ವಿರುದ್ಧ ಯಾವುದೇ ವಾರೆಂಟ್‌ ಜಾರಿಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.