ADVERTISEMENT

ತಮ್ಮ ಮಾನವೀಯ ಕಾರ್ಯಗಳಿಗಾಗಿ ವಿಶ್ವಸಂಸ್ಥೆಯ ಗೌರವಕ್ಕೆ ಪಾತ್ರರಾದ ನಟ ಸೋನು ಸೂದ್

ಏಜೆನ್ಸೀಸ್
Published 30 ಸೆಪ್ಟೆಂಬರ್ 2020, 7:48 IST
Last Updated 30 ಸೆಪ್ಟೆಂಬರ್ 2020, 7:48 IST
ನಟ ಸೋನು ಸೂದ್
ನಟ ಸೋನು ಸೂದ್   

ನವದೆಹಲಿ: ಲಾಕ್‌ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಹಲವರಿಗೆ ನೆರವಾಗಿ ನಿಜ ಜೀವನದ ನಾಯಕ ಎನಿಸಿಕೊಂಡಿದ್ದ ನಟ ಸೋನು ಸೂದ್ ಅವರ ಮಾನವೀಯ ಪ್ರಯತ್ನಗಳಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದಿಂದ ಎಸ್‌ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ.

ಈ ಅಂತರರಾಷ್ಟ್ರೀಯ ಗೌರವದೊಂದಿಗೆ, ಅಮೆರಿಕದ ವಿವಿಧ ಸಂಸ್ಥೆಗಳಿಂದ ಈ ಗೌರವವನ್ನು ಪಡೆದಿರುವ ಜಾಗತಿಕ ವ್ಯಕ್ತಿಗಳಾದ ಏಂಜಲೀನಾ ಜೋಲೀ, ಡೇವಿಡ್ ಬೆಕ್‌ಹ್ಯಾಮ್, ಲಿಯೊನಾರ್ಡೊ ಡಿಕಾಪ್ರಿಯೊ, ಎಮ್ಮಾ ವ್ಯಾಟ್ಸನ್ ಮತ್ತು ಲಿಯಾಮ್ ನೀಸನ್ ಅವರ ಪಟ್ಟಿಗೆ ಸೋನು ಸೂದ್ ಸೇರ್ಪಡೆಗೊಂಡಿದ್ದಾರೆ.

ವರ್ಚುಯಲ್ ಆಗಿ ಸೋಮವಾರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ನಟ,
'ಇದು ಅಪರೂಪದ ಗೌರವ. ಯುಎನ್ ನನ್ನನ್ನು ಗುರುತಿಸಿರುವುದು ಬಹಳ ವಿಶೇಷವಾಗಿದೆ. ಯಾವುದೇ ನಿರೀಕ್ಷೆಗಳಿಲ್ಲದೆ ನನ್ನ ದೇಶವಾಸಿಗಳಿಗೆ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಆದಾಗ್ಯೂ, ನನ್ನನ್ನು ಗುರುತಿಸಿ ಮತ್ತು ಪ್ರಶಸ್ತಿ ನೀಡಿರುವುದು ಸಂತೋಷ ನೀಡಿದೆ. 2030ರ ವೇಳೆಗೆ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಯತ್ನದಲ್ಲಿ ಯುಎನ್‌ಡಿಪಿಯನ್ನು ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಈ ಗುರಿಗಳ ಅನುಷ್ಠಾನದಿಂದ ಭೂಮಿ ಮತ್ತು ಮತ್ತು ಮಾನವಕುಲಕ್ಕೆ ಹೆಚ್ಚಿನ ಪ್ರಯೋಜನವಾಗುತ್ತದೆ' ಎಂದಿದ್ದಾರೆ.

ADVERTISEMENT

ಇದೇ ವೇಳೆ ಅವರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಅಭಿನಂದನಾ ಸಂದೇಶಗಳನ್ನು ಕಳುಹಿಸುತ್ತಿದ್ದಾರೆ ಮತ್ತು ಅವರ ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತ್ತಿದ್ದಾರೆ.

ಸದ್ಯ ಈ ನಟ ಹೈದರಾಬಾದ್‌ನಲ್ಲಿ ಬೆಲ್ಲಂಕೊಂಡ ಶ್ರೀನಿವಾಸ್, ಪ್ರಕಾಶ್ ರಾಜ್ ಮತ್ತು ನಲು ನಟೇಶ್ ಅವರೊಂದಿಗೆ ಅಲ್ಲುಡು ಅದರ್ಸ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಮೊದಲ ದಿನದಂದು ಸೆಟ್‌ಗೆ ಪ್ರವೇಶಿಸಿದಾಗ, ಅವರ ಸಹನಟರು ಮತ್ತು ಸಿಬ್ಬಂದಿ ಮಾನವೀಯತೆಯ ಬಗೆಗಿನ ಅವರ ಒಳ್ಳೆಯ ಕಾರ್ಯಗಳಿಗೆ ತಪ್ಪಾಳೆ ತಟ್ಟುವ ಮೂಲಕ ಸ್ವಾಗತಿಸಿದರು. ಪ್ರಕಾಶ್ ರಾಜ್ ಕೂಡ ಸೋನು ಸೂದ್‌ ಅವರ ಕಾರ್ಯಗಳಿಗೆ ಧನ್ಯವಾದ ಅರ್ಪಿಸಿ, ಸನ್ಮಾನಿಸಿದ್ದರು.

ಸೋನು ಸೂದ್ ಅವರಿಗೆ ಪ್ರಶಸ್ತಿ ಲಭ್ಯವಾಗಿರುವ ಬೆನ್ನಲ್ಲೇ ನಟಿ ಪ್ರಿಯಾಂಕ ಚೋಪ್ರಾ ಕೂಡ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಅಭಿನಂದನೆಗಳು ಸೋನು ಸೂದ್. ಇದಕ್ಕೆ ನೀವು ಅರ್ಹರು! ನೀವು ದೇವರ ಕೆಲಸವನ್ನು ಮುಂದುವರಿಸಿದ್ದೀರಿ ಮತ್ತು ಅದನ್ನುನೋಡಲು ತುಂಬಾ ಸ್ಪೂರ್ತಿದಾಯಕವಾಗಿದೆ. ನೀವು ಮಾಡುವಎಲ್ಲ ಕಾರ್ಯಗಳಿಗೂ ಧನ್ಯವಾದಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.