ADVERTISEMENT

ಮೋದಿ, ರಾಹುಲ್ ಯಾರಿಷ್ಟ ಎಂಬ ಪ್ರಶ್ನೆಗೆ ನಟ ಸೋನು ಹೇಳಿದ್ದೇನು?

​ಪ್ರಜಾವಾಣಿ ವಾರ್ತೆ
Published 18 ಜೂನ್ 2020, 7:52 IST
Last Updated 18 ಜೂನ್ 2020, 7:52 IST
ಸೋನು ಸೂದ್‌
ಸೋನು ಸೂದ್‌   

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಈ ಇಬ್ಬರಲ್ಲಿ ನಿಮಗೆ ಯಾರು ಇಷ್ಟ?

- ರಾಷ್ಟ್ರೀಯ ಸುದ್ದಿವಾಹಿನಿಯೊಂದರ ಸಂದರ್ಶನದ ವೇಳೆ ಕಾರ್ಯಕ್ರಮ ನಿರೂಪಕಿ ಬಾಲಿವುಡ್‌ ನಟ ಸೋನು ಸೂದ್ ಎದುರು ಇಂಥದೊಂದು ಪ್ರಶ್ನೆಯನ್ನು‌ ಇಟ್ಟರು. ಇಂಥ ಪ್ರಶ್ನೆಯನ್ನ ನಿರೀಕ್ಷಿಸದ ಸೋನು, ಒಂದು ಕ್ಷಣ ತಬ್ಬಿಬ್ಬಾದಂತೆ ಕಂಡರು.

ಈ ಪ್ರಶ್ನೆ, ಸೋನು ಅವರಿಗೆ ಅಚ್ಚರಿ ಮೂಡಿಸಿದರೆ, ಸಂದರ್ಶನಕಾರರಲ್ಲಿ, ಸೋನು ಅವರು ಎಂಥ ಉತ್ತರ ನೀಡಬಹುದೆಂಬ ಕುತೂಹಲವೂ ಇತ್ತು. ಆದರೆ, ಸೋನು ಒಂದಿನಿತೂ ಗಲಿಬಿಲಿಗೊಳ್ಳದೇ ಈ ಪ್ರಶ್ನೆಗೆ ‘ಮೋದಿ, ರಾಹುಲ್‌... ಈ ಇಬ್ಬರು ನಾಯಕರೂ ನನಗಿಷ್ಟ’ ಎಂದು ಉತ್ತರಿಸಿದರು.

ADVERTISEMENT

ಇದರಿಂದ ನಿರಾಶರಾದ ಸಂದರ್ಶಕರು, ‘ಇಲ್ಲ, ಇಬ್ಬರಲ್ಲಿ ಯಾರಾದರೂ ಒಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಿ’ ಎಂದು ಪಟ್ಟು ಹಿಡಿದರು. ಆಗಪ್ರಶ್ನೆಯ ಹಿಂದಿದ್ದ ಸೂಕ್ಷ್ಮತೆ ಅರಿತ ಸೋನು, ಅತ್ಯಂತ ಎಚ್ಚರ ಮತ್ತು ಜಾಣ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿದರು.

‘ನಾನು ಮೋದಿ ಅಭಿಮಾನಿ. ನನ್ನ ಕೆಲಸಗಳನ್ನು ಮೆಚ್ಚಿ ಮೊದಲು ಬೆನ್ನು ತಟ್ಟಿದ್ದು ಕಾಂಗ್ರೆಸ್‌ನ ಪ್ರಿಯಾಂಕಾ ಗಾಂಧಿ. ಎನ್‌ಸಿಪಿಯ ದೇಶಮುಖ್‌ ನನ್ನ ಕೆಲಸವನ್ನು ಶ್ಲಾಘಿಸಿದ್ದಾರೆ.ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ಕಳಿಸುವ ಕೆಲಸದಲ್ಲಿ ಅಧಿಕಾರದಲ್ಲಿರುವ ಬೇರೆ, ಬೇರೆ ರಾಜಕೀಯ ಪಕ್ಷದವರೂ ನೆರವು ನೀಡಿದ್ದಾರೆ’ ಎಂದು ಹೇಳುತ್ತಾ, ಎಲ್ಲರ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿ ದರು.ಕೊನೆಗೆ, ಮೋದಿ, ರಾಹುಲ್‌ ಅವರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಪ್ರಶ್ನೆಯಿಂದ ಆರಂಭವಾದರಾಜಕೀಯ ಚರ್ಚೆಯನ್ನು ಸೋನು ಜಾಣ್ಮೆಯಿಂದ, ವಲಸೆ ಕಾರ್ಮಿಕರ ಸಮಸ್ಯೆಯತ್ತ ಹೊರಳಿಸಿದರು.

‘ನಿಜಕ್ಕೂ ಈ ರಾಜಕಾರಣ ನನಗೆ ಅರ್ಥವಾಗದ ಭಾಷೆ. ರಾಜಕೀಯದಲ್ಲಿ ನನಗೆ ಯಾವ ಆಸಕ್ತಿಯೂ ಇಲ್ಲ. ಯಾವ ಪಕ್ಷಗಳಲ್ಲೂ ನನಗೆ ಸ್ನೇಹಿತರಾಗಲಿ, ದುಶ್ಮನ್‌ಗಳಾಗಲಿ ಇಲ್ಲ. ನನಗೆ ಯಾವ ರಾಜಕೀಯ ಪಕ್ಷದ ಮೇಲೂ ಒಲವು ಇಲ್ಲ, ತಿರಸ್ಕಾರವೂ ಇಲ್ಲ...‘ ಎಂದರು.

‘ಬಾಲಿವುಡ್‌ನಲ್ಲಿ ನೆಲೆ ಕಂಡುಕೊಳ್ಳಲು ಆರಂಭದ ದಿನಗಳಲ್ಲಿ ಮುಂಬೈನಲ್ಲಿ ನಾನು ಅನುಭವಿಸಿದ ಕಷ್ಟ, ನೋವು ಮರೆತಿಲ್ಲ. ಕೂಲಿ, ಕಾರ್ಮಿಕರ ಕಷ್ಟ ಏನೆಂದು ನಾನು ಬಲ್ಲೆ. ಅವರನ್ನು ಊರಿಗೆ ಕಳಿಸಿದರಲ್ಲಿ ಯಾವ ರಾಜಕೀಯ ಉದ್ದೇಶ, ಸ್ವಾರ್ಥ ಇಲ್ಲ. ರಾಜಕೀಯ ನನ್ನ ಕ್ಷೇತ್ರವಲ್ಲ. ನಟನೆ ನನ್ನ ವೃತ್ತಿ. ಕಷ್ಟದಲ್ಲಿರುವ ಮತ್ತೊಬ್ಬರಿಗೆ ನೆರವಾಗುವುದು ನನ್ನ ಕರ್ತವ್ಯ’ ಎಂದು ಹೇಳುವ ಮೂಲಕ ಸೋನು ಮತ್ತೊಮ್ಮೆ ಎಲ್ಲರ ಮನ ಗೆದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.