ADVERTISEMENT

ಎಸ್‌ಪಿಬಿ ಕುರಿತ ವದಂತಿಗಳಿಗೆ ಕಿವಿಗೊಡಬೇಡಿ: ಪುತ್ರ ಚರಣ್‌ ಮನವಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2020, 8:31 IST
Last Updated 15 ಆಗಸ್ಟ್ 2020, 8:31 IST
ಎಸ್‌.ಪಿ. ಬಾಲಸುಬ್ರಹ್ಮಣ್ಯಂ
ಎಸ್‌.ಪಿ. ಬಾಲಸುಬ್ರಹ್ಮಣ್ಯಂ   

‘ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಚೆನ್ನೈನ ಎಂಜಿಎಂ ಹೆಲ್ತ್‌ಕೇರ್‌ನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ಮುಂದುವರಿಸಲಾಗಿದೆ. ಅವರ ಆರೋಗ್ಯ ಸ್ಥಿರವಾಗಿದ್ದು, ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು’ ಎಂದು ಎಸ್‌ಪಿಬಿ ಅವರ ಪುತ್ರ ಎಸ್‌.ಪಿ. ಚರಣ್‌ ಮನವಿ ಮಾಡಿದ್ದಾರೆ.

ಕಳೆದ ಆಗಸ್ಟ್‌ 5ರಂದು ಬಾಲಸುಬ್ರಹ್ಮಣ್ಯಂ ಅವರಿಗೆ ಕೋವಿಡ್‌–19 ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಪರಿಣತ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಆದರೆ, ಆಗಸ್ಟ್‌ 13ರಂದು ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡಿದ್ದ ಪರಿಣಾಮ ತೀವ್ರ ನಿಗಾ ಘಟಕಕ್ಕೆ ಅವರನ್ನು ಸ್ಥಳಾಂತರಿಸಲಾಗಿತ್ತು.

‘ಅಪ್ಪನಿಗೆ ಐಸಿಯುನಲ್ಲಿಯೇ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತಿರುವ ಎಲ್ಲರಿಗೂ ನಾನು ಮತ್ತು ನನ್ನ ಕುಟುಂಬ ಆಭಾರಿಯಾಗಿದೆ. ಅಪ್ಪನ ಆರೋಗ್ಯದ ಬಗ್ಗೆ ನೀವು ತೋರುತ್ತಿರುವ ಕಾಳಜಿಗೆ ಧನ್ಯವಾದಗಳು. ಅವರ ಆರೋಗ್ಯ ಸ್ಥಿತಿಯ ಬಗ್ಗೆ ನಾವೇ ನಿಯಮಿತವಾಗಿ ಮಾಹಿತಿ ನೀಡುತ್ತೇವೆ. ಹಾಗಾಗಿ, ಯಾರೊಬ್ಬರು ಸುಳ್ಳು ಸುದ್ದಿಗಳನ್ನು ನಂಬಬಾರದು’ ಎಂದು ಕೋರಿದ್ದಾರೆ.

ADVERTISEMENT

ಈ ನಡುವೆಯೇ ತಮಿಳುನಾಡಿನ ಆರೋಗ್ಯ ಸಚಿವ ಡಾ.ಸಿ ವಿಜಯ್‌ ಭಾಸ್ಕರ್‌ ಕೂಡ ಎಸ್‌ಪಿಬಿ ಅವರ ಆರೋಗ್ಯದ ಬಗ್ಗೆ ಚರಣ್‌ ಮತ್ತು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರೊಟ್ಟಿಗೆ ಮಾತುಕತೆ ನಡೆಸಿದ್ದಾರೆ. ‘ಸರ್ಕಾರ ಎಸ್‌ಪಿಬಿ ಅವರು ಆರೋಗ್ಯದಿಂದ ಮರಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಅವರು ಕೊರೊನಾ ವಿರುದ್ಧ ಜಯಿಸಿ ಬರುವುದನ್ನು ಎದುರು ನೋಡುತ್ತಿದೆ’ ಎಂದು ಟ್ವೀಟ್ ಮಾಡಿದ್ದಾರೆ.

ಎಸ್‌ಪಿಬಿ ಅವರು 16 ಭಾಷೆಗಳಲ್ಲಿ 40 ಸಾವಿರ ಹಾಡುಗಳಿಗೆ ಧ್ವನಿಯಾಗಿದ್ದಾರೆ. 1966ರ ಡಿಸೆಂಬರ್ 15ರಂದು ತೆಲುಗಿನ ‘ಶ್ರೀ ಶ್ರೀ ಶ್ರೀ ಮರ್ಯಾದ ರಾಮಣ್ಣ’ ಚಿತ್ರಕ್ಕೆ ಹಾಡುವ ಮೂಲಕ ಅವರ ಗಾಯನ ಬದುಕು ಆರಂಭಗೊಂಡಿತು‌. ಮರುವರ್ಷ ಅವರು ಕನ್ನಡದ ‘ನಕ್ಕರೇ ಅದೇ ಸ್ವರ್ಗ’ ಚಿತ್ರದ ‘ಕನಸಿದೊ ನನಸಿದೊ...’ ಎಂಬ ಹಾಡು ಹಾಡಿದರು. ಡ್ಯುಯೆಟ್ ಸಾಂಗ್‌ ಇದು. ಅವರ ವೃತ್ತಿಬದುಕಿನಲ್ಲಿ ಎರಡನೇ ಹಾಡು ಹಾಡಿದ್ದು ಕನ್ನಡ ಸಿನಿಮಾಕ್ಕೆ ಎಂಬುದು ವಿಶೇಷ.

ಕನ್ನಡದಲ್ಲಿ ಇಲ್ಲಿಯವರೆಗೂ ಅವರು 4 ಸಾವಿರಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. ಪಿಆರ್‌ಕೆ ಪ್ರೊಡಕ್ಷನ್ಸ್‌ನಡಿ ನಿರ್ಮಾಣವಾದ ‘ಮಾಯಾಬಜಾರ್’ ಚಿತ್ರದ ‘ನಿಮಗೂ ಗೊತ್ತು ನಮಗೂ ಗೊತ್ತು ಕಾಲ ಎಂದೋ ಎಕ್ಕೋಟ್ಟೋಯ್ತು...’ ಸಾಂಗ್ ಅವರು ಕನ್ನಡದಲ್ಲಿ ಹಾಡಿದ ಕೊನೆಯ ಸಾಂಗ್. ಈ ಹಾಡಿಗೆ ನಟ ಪುನೀತ್‌ ರಾಜ್‌ಕುಮಾರ್‌ ಹೆಜ್ಜೆ ಹಾಕಿರುವುದು ಮತ್ತೊಂದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.