ADVERTISEMENT

ಹೊಸ ವೇಷದಲ್ಲಿ ಸ್ಪೈಡರ್‌ಮ್ಯಾನ್‌

​ಪ್ರಜಾವಾಣಿ ವಾರ್ತೆ
Published 30 ಜೂನ್ 2019, 12:04 IST
Last Updated 30 ಜೂನ್ 2019, 12:04 IST
ಸ್ಪೈಡರ್‌ಮ್ಯಾನ್‌ ಫಾರ್‌ ಫ್ರಂ ಹೋಮ್‌ ಚಿತ್ರದ ದೃಶ್ಯ
ಸ್ಪೈಡರ್‌ಮ್ಯಾನ್‌ ಫಾರ್‌ ಫ್ರಂ ಹೋಮ್‌ ಚಿತ್ರದ ದೃಶ್ಯ   

ಸ್ಪೈಡರ್‌ಮ್ಯಾನ್‌ ಹೊಸ ಸರಣಿಯ ‘ಸ್ಪೈಡರ್‌ಮ್ಯಾನ್‌ ಫಾರ್‌ ಫ್ರಂ ಹೋಮ್‌’ ಜುಲೈ 5ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ. ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಈಗಾಗಲೇ 6 ಕೋಟಿಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ. ಈ ಚಿತ್ರದಲ್ಲಿಯೂ ಸ್ಪೈಡರ್‌ಮ್ಯಾನ್‌ ಈ ಹಿಂದಿನ ಸರಣಿ ಚಿತ್ರಗಳಂತೆ ಹೊಸ ಸಾಹಸಗಳ ಮೂಲಕ ವೀಕ್ಷಕರನ್ನು ಮನರಂಜಿಸಲಿದ್ದಾನೆ.

‘ಸ್ಪೈಡರ್‌ ಮ್ಯಾನ್‌ ಹೋಮ್‌ ಕಮಿಂಗ್‌’ನ ಮುಂದುವರಿದ ಸರಣಿ ಚಿತ್ರ ಇದು. ಈ ಚಿತ್ರವು 2017ರಲ್ಲಿ ಬಿಡುಗಡೆಯಾಗಿತ್ತು. ಈಗ ‘ಫಾರ್‌ ಫ್ರಂ ಹೋಮ್‌’ ಚಿತ್ರದಲ್ಲಿಸ್ಪೈಡರ್‌ಮ್ಯಾನ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾನೆ. ಹೊಸ ಸರಣಿಯಲ್ಲಿ ಅವನು ಧರಿಸುವ ಮಾಸ್ಕ್‌ನಲ್ಲಿ ಕಂದು ಬಣ್ಣ ಪ್ರಧಾನವಾಗಿರುತ್ತದೆ. ಸ್ಟೆಲ್ತ್‌ ಸೂಟ್‌ ಎನ್ನಲಾಗುವ ಹೊಸ ಉಡುಗೆಯಲ್ಲಿ ಪೀಟರ್‌ ಪಾರ್ಕರ್‌ಗೆ ಹೊಸ ಕನ್ನಡಕವೂ ಅವನ ಆಕರ್ಷಣೆಯನ್ನು ಹೆಚ್ಚಿಸಲಿದೆ. ಎದೆಭಾಗಕ್ಕೆ ಕವಚದಂತಹ ಕಪ್ಪು ವಿನ್ಯಾಸವೂ ಗಮನ ಸೆಳೆಯುವಂತಿದೆ. ಈ ಚಿತ್ರದ ಕೆಲ ದೃಶ್ಯಗಳು ಲೀಕ್‌ ಆಗಿವೆ ಎಂದು ಚಿತ್ರತಂಡ ಕಳೆದ ವಾರ ಹೇಳಿಕೊಂಡಿತ್ತು.

ಈ ಚಿತ್ರವು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಹಿಂದಿ, ಇಂಗ್ಲಿಷ್‌, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಶತ್ರು ಪಡೆ ಹಾಗೂ ಖಳನಾಯಕ ಮಿಸ್ಟಿರಿಯೊನನ್ನು ಭೇಟಿ ಮಾಡಲು ಪೀಟರ್‌ ಪಾರ್ಕರ್‌ ಯುರೋಪ್‌ಗೆ ತೆರಳುತ್ತಾನೆ. ಮಿಸ್ಟಿರಿಯೊ ಪಾತ್ರವನ್ನು ಜೇಕ್‌ ಗಿಲ್ಲೆನ್‌ಹಾಲ್‌ ನಿರ್ವಹಿಸಿದ್ದಾರೆ. ಟ್ರೇಲರ್‌ನ ಸಾಹಸಮಯ ದೃಶ್ಯಗಳು ಈ ಚಿತ್ರದ ಬಗೆಗಿನ ಕುತೂಹಲವನ್ನು ಹೆಚ್ಚಿಸಿವೆ.

ADVERTISEMENT

ಈ ಚಿತ್ರವನ್ನು ಜಾನ್‌ ವಾಟ್ಸ್‌ ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಪೀಟರ್‌ ಪಾರ್ಕರ್‌ ಆಗಿ ಟಾಮ್‌ ಹಾಲೆಂಡ್‌ ರಂಜಿಸಿದರೆ, ಝೆಂಡಯಾ, ಜೇಕ್‌ ಗಿಲ್ಲೆನ್‌ಹಾಲ್‌, ಮೈಕಲ್‌ ಕೀಟನ್‌ ಮೊದಲಾದವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಮಾರ್ವೆಲ್‌ ಸಿನಿಮ್ಯಾಟಿಕ್‌ ಯುನಿವರ್ಸ್‌ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.