
ಮಹೇಶ್ ಬಾಬು
‘ಆರ್‌ಆರ್‌ಆರ್’ ಬಳಿಕ ನಿರ್ದೇಶಕ ಎಸ್.ಎಸ್.ರಾಜಮೌಳಿ ನಟ ಮಹೇಶ್ ಬಾಬು ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಹಲವು ತಿಂಗಳುಗಳ ಮೊದಲೇ ಹೊರಬಿದ್ದಿತ್ತು. ಇದೀಗ ಚಿತ್ರದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಅದ್ದೂರಿಯಾಗಿ ನಡೆಯಿತು.
ಚಿತ್ರಕ್ಕೆ ‘ವಾರಾಣಸಿ’ ಎಂಬ ಶೀರ್ಷಿಕೆ ಇಡಲಾಗಿದ್ದು, ಪ್ರಿಯಾಂಕಾ ಚೋಪ್ರಾ ಹಾಗೂ ಪೃಥ್ವಿರಾಜ್ ಸುಕುಮಾರನ್ ತಾರಾಬಳಗದಲ್ಲಿದ್ದಾರೆ. ಬೃಹತ್ ಎಲ್‌ಇಡಿ ಪರದೆಯ ಮೇಲೆ ಚಿತ್ರದ ಟೈಟಲ್ ಟೀಸರ್ ಪ್ರದರ್ಶನಗೊಂಡಾಗ ರಾಜಮೌಳಿಯವರ ಹೊಸ ಕನಸಿನ ಲೋಕದ ಅನಾವರಣವಾಯಿತು. ಕೃತಕ ಗೂಳಿಯ ಮೇಲೆ ಕುಳಿತು, ಮಹೇಶ್ ಬಾಬು ತ್ರಿಶೂಲ ಹಿಡಿದು ಬಂದಾಗ ಸಾವಿರಾರು ಅಭಿಮಾನಿಗಳು ಜೈಕಾರ ಕೂಗಿದರು.
ಇದೊಂದು ಪೌರಾಣಿಕ ಹಿನ್ನೆಲೆಯ ಫ್ಯಾಂಟಸಿ ಚಿತ್ರವಾಗಿದ್ದು, ಶ್ರೀ ದುರ್ಗಾ ಆರ್ಟ್ಸ್ ಮತ್ತು ಶೋಯಿಂಗ್ ಬಿಝಿನೆಸ್ ಸಂಸ್ಥೆಗಳಡಿ ಕೆ.ಎಲ್.ನಾರಾಯಣ ಮತ್ತು ಎಸ್.ಎಸ್. ಕಾರ್ತಿಕೇಯ ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ರಾಜಮೌಳಿ ತಂದೆ ವಿಜಯಪ್ರಸಾದ್ ಕಥೆ-ಚಿತ್ರಕಥೆ ಬರೆದಿದ್ದು, ಎಂ.ಎಂ. ಕೀರವಾಣಿ ಸಂಗೀತ ಸಂಯೋಜಿಸಲಿದ್ದಾರೆ. ಮಹೇಶ್ ಬಾಬು ‘ರುದ್ರ’ ಎಂಬ ಪಾತ್ರದಲ್ಲಿ ಅಭಿನಯಿಸಿದರೆ, ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಕ್ರಮವಾಗಿ ‘ಮೋಹಿನಿ’ ಮತ್ತು ‘ಕುಂಭ’ ಎಂಬ ಪಾತ್ರಗಳನ್ನು ನಿರ್ವಹಿಸಲಿದ್ದಾರೆ. ಚಿತ್ರವು 2027ರಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಪ್ರೀಮಿಯಂ ಫುಲ್ ಸ್ಕ್ರೀಮ್ ಐಮ್ಯಾಕ್ಸ್ ಫಾರ್ಮ್ಯಾಟ್‌ನಲ್ಲಿ ಇರಲಿದೆ.
‘ನನಗೆ ಬಾಲ್ಯದಿಂದಲೂ ರಾಮಾಯಣ ಮತ್ತು ಮಹಾಭಾರತವೆಂದರೆ ಇಷ್ಟ. ಇದು ನನ್ನ ಕನಸಿನ ಪ್ರಾಜೆಕ್ಟ್. ರಾಮಾಯಣದ ಒಂದು ಪ್ರಮುಖ ಪ್ರಸಂಗವನ್ನು ಆಧರಿಸಿ ಈ ಚಿತ್ರ ಮಾಡುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ. ರಾಮನಂತಹ ಪ್ರಶಾಂತವಾದ ಪಾತ್ರಕ್ಕೆ ಮಹೇಶ್ ಹಿಡಿಸುತ್ತಾರೆಯೇ ಎಂಬ ಪ್ರಶ್ನೆ ಇತ್ತು. ಮೊದಲ ದಿನ ಮಹೇಶ್ ಬಾಬು ಅವರನ್ನು ರಾಮನ ವೇಷದಲ್ಲಿ ನೋಡಿ ರೋಮಾಂಚನವಾಯಿತು. ಇದುವರೆಗೂ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಿದ್ದೇವೆ’ ಎಂದರು ರಾಜಮೌಳಿ.
ಪ್ರಿಯಾಂಕ, ಮಹೇಶ್ ಬಾಬು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.