ಚೆನ್ನೈ: ‘ವೆಟ್ಟುವಂ’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ಮಾಡುತ್ತಿರುವ ವೇಳೆ ಜನಪ್ರಿಯ ಸ್ಟಂಟ್ ಮಾಸ್ಟರ್ ಮೋಹನ್ ರಾಜ್ ಅಲಿಯಾಸ್ ಎಸ್.ಎಂ.ರಾಜು ಮೃತಪಟ್ಟಿದ್ದಾರೆ ಎಂದು ಅವರ ಆಪ್ತ ಮೂಲಗಳು ಸೋಮವಾರ ತಿಳಿಸಿವೆ.
ಭಾನುವಾರ(ಜುಲೈ 13) ತಮಿಳುನಾಡಿನ ನಾಗಪಟ್ಟಣಂನಲ್ಲಿ ಚಿತ್ರದ ಸಾಹಸ ದೃಶ್ಯದ ಚಿತ್ರೀಕರಣ ನಡೆದಿದೆ. ಅತ್ಯಂತ ಅಪಾಯಕಾರಿ ಸಾಹಸ ದೃಶ್ಯ ಇದಾಗಿದ್ದು, ಕಾರು ಎತ್ತರಕ್ಕೆ ಹಾರಿ ನೆಲಕ್ಕೆ ಬರುವಂತೆ ದೃಶ್ಯವನ್ನು ಸೆರೆ ಹಿಡಿಯಬೇಕಿತ್ತು. ಈ ಸ್ಟಂಟ್ ಮಾಡುವ ವೇಳೆ ಸಂಭವಿಸಿದ ಅವಘಡದಲ್ಲಿ ಮೋಹನ್ ರಾಜ್ ಮೃತಪಟ್ಟಿದ್ದಾರೆ.
ಅಪಘಾತದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಎತ್ತರಕ್ಕೆ ಹಾರಿದ ಕಾರು ನಿಯಂತ್ರಣ ತಪ್ಪಿ ನೆಲದ ಮೇಲೆ ಪಲ್ಟಿ ಹೊಡೆಯುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ.
ಅವಘಡದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮೋಹನ್ ರಾಜ್ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಅವರು ಅಸುನೀಗಿದ್ದಾರೆ ಎಂದು ಚಿತ್ರತಂಡ ತಿಳಿಸಿದೆ.
‘ಸಹೋದರ ಮೋಹನ್ ರಾಜ್ ಅವರ ಸಾವಿನ ಸುದ್ದಿ ಕೇಳಿ ಆಘಾತವಾಗಿದೆ. ವಾಳೈ ಚಿತ್ರದಲ್ಲಿ ಅವರ ಸಾಹಸ ದೃಶ್ಯಗಳನ್ನು ಕಂಡು ಎಲ್ಲರೂ ದಂಗಾಗಿದ್ದನ್ನು ಈಗ ನೆನಪಿಸಿಕೊಂಡರೆ ದುಃಖವಾಗುತ್ತದೆ. ನಿಮ್ಮನ್ನು ಮತ್ತು ನಿಮ್ಮ ಧೈರ್ಯವನ್ನು ಸದಾ ಸ್ಮರಿಸಿಕೊಳ್ಳುತ್ತೇವೆ’ ಎಂದು ನಿರ್ದೇಶಕ ಮಾರಿ ಸೆಲ್ವರಾಜ್ ಕಂಬನಿ ಮಿಡಿದಿದ್ದಾರೆ.
‘ವೆಟ್ಟುವಂ’ ಪಾ ರಂಜಿತ್ ನಿರ್ದೇಶನದ ಚಿತ್ರವಾಗಿದ್ದು, ನಾಯಕ ನಟನಾಗಿ ಆರ್ಯ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.