ADVERTISEMENT

ನಾನು ನಿರ್ದೇಶಿಸುವುದು ರಿಮೇಕ್‌ ಅಲ್ಲ; ಸ್ವಮೇಕ್‌ ಎಂದ ನಟ ಸುದೀಪ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2019, 9:40 IST
Last Updated 18 ನವೆಂಬರ್ 2019, 9:40 IST
ಸುದೀಪ್
ಸುದೀಪ್   

‘ನಾನು ಮತ್ತೆ ಸಿನಿಮಾ ನಿರ್ದೇಶಿಸುವುದು ಸತ್ಯ. ಆದರೆ, ಅದು ರಿಮೇಕ್‌ ಚಿತ್ರವಲ್ಲ. ಸ್ವಮೇಕ್‌ ಚಿತ್ರಕ್ಕೆ ಆ್ಯಕ್ಷನ್ ಕಟ್‌ ಹೇಳುತ್ತಿದ್ದೇನೆ’ ಎಂದು ಕಿಚ್ಚ ಸುದೀಪ್‌ ಸ್ಪಷ್ಟಪಡಿಸಿದ್ದಾರೆ.

ಐದು ವರ್ಷದ ಬಳಿಕ ಮತ್ತೆ ಸುದೀಪ್‌ ನಿರ್ದೇಶಕನ ಕ್ಯಾಪ್‌ ಧರಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಅವರು ಟಾಲಿವುಡ್‌ ನಟ ಮಹೇಶ್ ಬಾಬು ನಟಿಸಿರುವ ತೆಲುಗಿನ ಚಿತ್ರವೊಂದನ್ನು ರಿಮೇಕ್‌ ಮಾಡಲಿದ್ದಾರೆ ಎನ್ನಲಾಗಿತ್ತು. ಇದಕ್ಕೆ ಖುದ್ದಾಗಿ ಸುದೀಪ್ ಅವರೇ ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದ್ದು, ಎಲ್ಲಾ ಊಹಾಪೋಹಗಳಿ‌ಗೆ ತೆರೆ ಎಳೆದಿದ್ದಾರೆ.

‘ಮುದ್ರಣ ಮತ್ತು ದೃಶ್ಯ ಮಾಧ್ಯಮದಲ್ಲಿ ನಾನು ಮತ್ತೆ ಸಿನಿಮಾ ನಿರ್ದೇಶನ ಮಾಡುತ್ತಿರುವ ಬಗ್ಗೆ ಸುದ್ದಿ ಪ್ರಕಟವಾಗಿರುವುದು ಖುಷಿಯ ಸಂಗತಿ. ಆದರೆ, ನಾನು ರಿಮೇಕ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿಲ್ಲ. ನಾನು ಮತ್ತು ನನ್ನ ತಂಡ ಸೇರಿಕೊಂಡು ಹೊಸೆದಿರುವ ಕಥೆಯನ್ನು ನಿರ್ದೇಶನ ಮಾಡುತ್ತಿದ್ದೇನೆ. ಈಗಾಗಲೇ, ಸ್ಕ್ರಿಪ್ಟ್‌ ಕೆಲಸ ಭರದಿಂದ ನಡೆಯುತ್ತಿದೆ. ನನ್ನ ತಂಡ ಕೂಡ ಎಕ್ಸೈಟ್‌ ಆಗಿದೆ. ಶೀಘ್ರವೇ, ಇದರ ಅಂತಿಮ ರೂಪದ ಬಗ್ಗೆ ಮಾಹಿತಿ ನೀಡಲಾಗುವುದು’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

ಸುದೀಪ್‌ ನಿರ್ದೇಶಿಸಿದ ಮೊದಲ ಚಿತ್ರ ‘ಮೈ ಆಟೋಗ್ರಾಫ್’. ನಂತರ ಅವರು ‘ಶಾಂತಿ ನಿವಾಸ’, ‘ಜಸ್ಟ್ ಮಾತ್ ಮಾತಲ್ಲಿ’, ‘ವೀರ ಮದಕರಿ’, ‘ಕೆಂಪೇಗೌಡ’ ಚಿತ್ರ ನಿರ್ದೇಶಿಸಿದ್ದರು. ಅವರು ಕೊನೆಯಾಗಿ ನಿರ್ದೇಶಿಸಿದ ಚಿತ್ರ ‘ಮಾಣಿಕ್ಯ’.

ಸುದೀಪ್‌ ನಿರ್ದೇಶನದ ಬಹುತೇಕ ಸಿನಿಮಾಗಳು ಅವರ ಬ್ಯಾನರ್‌ನಡಿಯೇ ನಿರ್ಮಾಣಗೊಂಡಿವೆ. ಹೊಸ ಚಿತ್ರ ಕೂಡ ಅವರದೇ ಬ್ಯಾನರ್‌ನಡಿ ನಿರ್ಮಾಣವಾಗುವ ಸಾಧ್ಯತೆಯಿದೆ.

ಪ್ರಸ್ತುತ ಸೂರಪ್ಪಬಾಬು ನಿರ್ಮಾಣದ ‘ಕೋಟಿಗೊಬ್ಬ 3’ ಚಿತ್ರದಲ್ಲಿ ಸುದೀಪ್ ಬ್ಯುಸಿಯಾಗಿದ್ದಾರೆ. ಡಿಸೆಂಬರ್‌ 20ರಂದು ಪ್ರಭುದೇವ ನಿರ್ದೇಶನದ ಬಾಲಿವುಡ್‌ ನಟ ಸಲ್ಮಾನ್‌ಖಾನ್‌ ನಟನೆಯ ‘ದಬಾಂಗ್‌ 3’ ಚಿತ್ರ ತೆರೆ ಕಾಣುತ್ತಿದೆ. ಕಿಚ್ಚನದು ಇದರಲ್ಲಿ ಕಿಚ್ಚ ವಿಲನ್‌ ಪಾತ್ರ.

ಶೀಘ್ರವೇ, ಅನೂಪ್‌ ಭಂಡಾರಿ ನಿರ್ದೇಶನದ ಸುದೀಪ್‌ ನಟನೆಯ ‘ಫ್ಯಾಂಟಮ್‌’ ಸಿನಿಮಾದ ಮುಹೂರ್ತ ನೆರವೇರಲಿದೆ. ಈ ಚಿತ್ರದ ಬಳಿಕ ಸುದೀಪ್‌ ನಿರ್ದೇಶನದ ಹೊಸ ಸಿನಿಮಾ ಸೆಟ್ಟೇರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.