ADVERTISEMENT

ಸುಮಂತ್, ‘ಜಾಕಿ’ ಭಾವನಾ, ಕವಿತಾ ಗೌಡ ಅಭಿನಯದ ‘ಗೋವಿಂದ ಗೋವಿಂದ’ 26ಕ್ಕೆ ತೆರೆಗೆ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2021, 7:15 IST
Last Updated 16 ನವೆಂಬರ್ 2021, 7:15 IST
ತುಮಕೂರಿನಲ್ಲಿ ಭಾನುವಾರ ನಟ ಸುಮಂತ್ ಮಾತನಾಡಿದರು. ನಟ ವಿಜಯ್, ಕವಿತಾ ಗೌಡ ಇತರರು ಉಪಸ್ಥಿತರಿದ್ದರು
ತುಮಕೂರಿನಲ್ಲಿ ಭಾನುವಾರ ನಟ ಸುಮಂತ್ ಮಾತನಾಡಿದರು. ನಟ ವಿಜಯ್, ಕವಿತಾ ಗೌಡ ಇತರರು ಉಪಸ್ಥಿತರಿದ್ದರು   

ತುಮಕೂರು: ರವಿ ಆರ್. ಗರಣಿ ಹಾಗೂ ಶೈಲೇಂದ್ರ ಬಾಬು, ಕಿಶೋರ್ ನಿರ್ಮಾಣದ ‘ಗೋವಿಂದ ಗೋವಿಂದ’ ಚಿತ್ರ ನ. 26ರಂದು ತೆರೆ ಕಾಣಲಿದೆ ಎಂದು ಚಿತ್ರದ ನಿರ್ದೇಶಕ ತಿಲಕ್ ಭಾನುವಾರ ತಿಳಿಸಿದರು.

ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿರುವ ಸುಮಂತ್ ಶೈಲೇಂಧ್ರ, ‘ಜಾಕಿ’ ಭಾವನಾ, ಕವಿತಾ ಗೌಡ, ಪವನ್, ಚೆಂಡೂರ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಕುಟುಂಬ ಸಮೇತ ನೋಡಬಹುದಾದ ಕೌಟುಂಬಿಕ ಕಾಮಿಡಿ ಥ್ರಿಲ್ಲರ್ ಚಿತ್ರವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಚಿತ್ರದ ನಾಯಕ ನಟ ಸುಮಂತ್, ‘ಐದು ವರ್ಷದ ನಂತರ ಕನ್ನಡದಲ್ಲಿ ಸಿನಿಮಾ ಮಾಡುತ್ತಿದ್ದು, ಪ್ರೇಕ್ಷಕರಿಗೆ ಉತ್ತಮ ಚಿತ್ರ ನೀಡುತ್ತಿರುವ ಖುಷಿ ಇದೆ.ಹಾಸ್ಯಭರಿತ ಕೌಟುಂಬಿಕ ಚಿತ್ರವನ್ನು ಮನೆ ಮಂದಿ ಕುಳಿತು ನೋಡಬಹುದಾಗಿದೆ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಗೋವಿಂದ ಗೋವಿಂದ’ ಸಿನಿಮಾ ತಮಿಳು, ಮಲಯಾಳಂ, ಕನ್ನಡದಲ್ಲಿ ಬಿಡುಗಡೆ ಆಗುತ್ತಿದೆ. ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ನಂತರ ಇತರ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದರು.

ಚಿತ್ರದ ನಾಯಕಿ ಕವಿತಾ ಗೌಡ, ‘ಸಣ್ಣಪುಟ್ಟ ಸಮಸ್ಯೆಗಳು ನಮ್ಮ ನಡುವೆ ಉಂಟು ಮಾಡುವ ಸಮಸ್ಯೆಗಳು, ತಂದೆ ಮತ್ತು ಮಕ್ಕಳ ನಡುವಿನ ಅಂತರವನ್ನು ಚಿತ್ರ ಕಟ್ಟಿಕೊಡಲಿದೆ. ನನಗೆ ತಂದೆಯಾಗಿ ಅಚ್ಯುತ್ ಕುಮಾರ್ ಕಾಣಿಸಿಕೊಂಡಿದ್ದು, ಅವರೊಂದಿಗೆ ಪಾತ್ರ ಹಂಚಿಕೊಳ್ಳುತ್ತಿರುವುದು ಸಂತಸದ ವಿಚಾರ’ ಎಂದು ತಿಳಿಸಿದರು.

ನಿರ್ಮಾಪಕ ಕಿಶೋರ್, ‘ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದೇನೆ. ಉತ್ತಮ ಚಿತ್ರ ಮೂಡಿಬಂದಿದೆ’ ಎಂದು ಹೇಳಿದರು.

ಹಾಸ್ಯನಟ ವಿಜಯ್ ಚೆಂಡೂರ್, ‘ಚಿತ್ರದಲ್ಲಿ ಗಂಭೀರ ಪಾತ್ರ ಮಾಡಿದ್ದರೂ ಸಹ ನಗು ಮೂಡಿಸುವಂತಹ ಸನ್ನಿವೇಶಗಳಿವೆ. ಭರಪೂರ ಮನರಂಜನೆ ದೊರಕಲಿದೆ’ ಎಂದರು.

ಮಜಾ ಟಾಕೀಸ್ ಖ್ಯಾತಿಯ ಪವನ್, ‘ಮಕ್ಕಳ ಮೇಲೆ ಪೋಷಕರು ಹೇರುತ್ತಿರುವ ಒತ್ತಡ, ತಂದೆ ಮಕ್ಕಳ ನಡುವಿನ ವಿರೋಧಾಭಾಸದಲ್ಲಿನ ಹಾಸ್ಯ ಸನ್ನಿವೇಶಗಳೇ ಚಿತ್ರದ ಜೀವಾಳ’ ಎಂದು ತಿಳಿಸಿದರು.

ಗಾಯಿತ್ರಿ ಚಿತ್ರಮಂದಿರದ ಮಾಲೀಕ ರುದ್ರಪ್ಪ ಉಪಸ್ಥಿತರಿದ್ದರು.

ದೇವ್ ರಂಗಭೂಮಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ರವಿಚಂದ್ರನ್ ಸಂಕಲನ, ಪ್ರಕಾಶ್ ಪುಟ್ಟಸ್ವಾಮಿ ಕಲಾ ನಿರ್ದೇಶನ ಹಾಗೂ ಥ್ರಿಲ್ಲರ್ ಮಂಜು ಅವರ ಸಾಹಸ ನಿರ್ದೇಶನವಿದೆ.

ಕವಿತಾ ಗೌಡ, ಭಾವನ ಮೆನನ್, ರೂಪೇಶ್ ಶೆಟ್ಟಿ, ಪವನ್ ಕುಮಾರ್, ವಿಜಯ್ ಚೆಂಡೂರ್, ಅಚ್ಯುತ ಕುಮಾರ್, ವಿ.ಮನೋಹರ್, ಕೆ.ಮಂಜು, ಕಡ್ಡಿಪುಡಿ ಚಂದ್ರು, ಪದ್ಮಾ ವಾಸಂತಿ, ಶ್ರೀನಿವಾಸಪ್ರಭು, ಗೋವಿಂದೇ ಗೌಡ, ಯಮುನ ಶ್ರೀನಿಧಿ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.