ADVERTISEMENT

ಫೆ.27ಕ್ಕೆ ‘ಸೂಪರ್ ಹಿಟ್’ ಚಿತ್ರ ತೆರೆಗೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2026, 1:38 IST
Last Updated 11 ಫೆಬ್ರುವರಿ 2026, 1:38 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   

ಸಿನಿಮಾಗಳು ಯಶಸ್ವಿಯಾದರೆ ‘ಸೂಪರ್‌ ಹಿಟ್‌’ ಎನ್ನುತ್ತಾರೆ. ಆದರೆ ಆ ಪದವನ್ನೇ ಶೀರ್ಷಿಕೆಯಾಗಿಸಿಕೊಂಡಿರುವ ಚಿತ್ರವೊಂದು ತೆರೆಗೆ ಬರಲು ಸಜ್ಜಾಗಿದೆ. ಬಿಗ್‌ಬಾಸ್‌ ಖ್ಯಾತಿಯ ಗಿಲ್ಲಿ ನಾಯಕನಾಗಿ ನಟಿಸಿರುವ ಚಿತ್ರ ಫೆಬ್ರುವರಿ 27ರಂದು ತೆರೆಗೆ ಬರಲಿದೆ. ವಿಜಯಾನಂದ್‌ ಆ್ಯಕ್ಷನ್‌ ಕಟ್‌ ಹೇಳಿರುವ ಚಿತ್ರದ ಬಿಡುಗಡೆ ದಿನಾಂಕ ಘೋಷಿಸುವ ವಿಶೇಷ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. 

‘ಕಾಮಿಡಿ, ಥ್ರಿಲ್ಲರ್‌ ಜಾನರ್‌ನ ಸಿನಿಮಾ. ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗುವುದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಇದೆ. ಏಕೆ ಈ ಶೀರ್ಷಿಕೆ ಇಡಲಾಗಿದೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಬೇಕು. ಇಡೀ ಸಿನಿಮಾ ಆರಂಭದಿಂದ ಕೊನೆಯವರೆಗೂ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಪ್ರೇಕ್ಷಕರನ್ನು ಬೆರಗಾಗಿಸುವಂಥ ಅಂಶಗಳು, ತಿರುವುಗಳನ್ನು ಹೊಂದಿದೆ. ಕನ್ನಡ ಚಿತ್ರರಂಗದಲ್ಲೇ ಮೊದಲ ಬಾರಿ ಥ್ರಿಲ್ಲರ್, ಕಾಮಿಡಿ ಜಾನರ್‌ನ ಸಿನಿಮಾ ಯತ್ನಿಸಿದ್ದೇವೆ’ ಎಂದರು ನಿರ್ದೇಶಕ. 

ಜಿ.ಉಮೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗೌರವ್ ಶೆಟ್ಟಿ ಮತ್ತು ಗಿಲ್ಲಿ ನಟ ನಾಯಕರಾಗಿ ನಟಿಸಿದ್ದಾರೆ. ಶ್ವೇತಾ ನಾಯಕಿಯಾಗಿ ಜೊತೆಯಾಗಿದ್ದಾರೆ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆರ್.ಡಿ ನಾಗಾರ್ಜುನ ಛಾಯಾಚಿತ್ರಗ್ರಹಣ, ಶ್ರೀಕಾಂತ್ ಸಂಕಲನ, ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ಮತ್ತು ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಡ್ರ್ಯಾಗನ್ ಮಂಜು, ಸಾಧು ಕೋಕಿಲ, ಸೀನು ಭಾಯ್, ನಾಗವರ್ಧನ್, ಪ್ರಮೋದ್ ಶೆಟ್ಟಿ, ಜೀಜಿ, ಗಿರಿ, ಟೆನಿಸ್ ಕೃಷ್ಣ, ಕರಿಸುಬ್ಬು ಮುಂತಾದವರು ಚಿತ್ರದಲ್ಲಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.