ADVERTISEMENT

ಸುಶಾಂತ್‌ ಸಿಂಗ್ ಸಾವಿಗೆ ಪ್ರೇಯಸಿಯರೇ ಕಾರಣ ಎಂದವರಿಗೆ ಸೋನಂ ಕಪೂರ್‌ ಛೀಮಾರಿ

​ಪ್ರಜಾವಾಣಿ ವಾರ್ತೆ
Published 16 ಜೂನ್ 2020, 11:31 IST
Last Updated 16 ಜೂನ್ 2020, 11:31 IST
ಸೋನಂ ಕಪೂರ್‌
ಸೋನಂ ಕಪೂರ್‌   

ಕಳೆದ ಭಾನುವಾರ ನಟ ಸುಶಾಂತ್‌ ಸಿಂಗ್‌ ರಜಪೂತ್‌ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದರು. ಅವರು ಖಿನ್ನತೆಯಿಂದ ಬಳಲುತ್ತಿದ್ದು ಕಳೆದ ಕೆಲ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದಿತ್ತು.

ಆದರೆ ಅವರ ಸಾವಿನೊಂದಿಗೆ ಅವರ ಪ್ರೇಯಸಿಯರ ಹೆಸರುಗಳೂ ತಳಕು ಹಾಕಿಕೊಂಡಿವೆ. ಅನೇಕರು ಸುಶಾಂತ್‌ ಸಾವಿಗೂ ಅವರ ಪ್ರೇಯಸಿಯರಿಗೂ ಸಂಬಂಧ ಕಲ್ಪಿಸಿ ಮಾತನಾಡುತ್ತಿದ್ದಾರೆ.

ಈ ವಿಷಯದ ಬಗ್ಗೆ ಕ್ರೋಧ ವ್ಯಕ್ತಪಡಿಸುವ ನಟಿ ಸೋನಂ ಕಪೂರ್‌ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ADVERTISEMENT

‘ಸುಶಾಂತ್‌ ಸಾವಿಗೆ ಅವರ ಪ್ರೇಯಸಿಯರನ್ನು ದೂಷಿಸುವುದು ಅಸಂಬದ್ಧ ಸಂಗತಿ ಹಾಗೂ ಅಜ್ಞಾನಿಗಳಷ್ಟೇ ಹೀಗೆಲ್ಲಾ ಹೇಳಲು ಸಾಧ್ಯ’ ಎಂದಿದ್ದಾರೆ.

ಸೋನಂ ಟ್ವೀಟ್‌ನ ಹಿಂದಿನ ಕತೆ

ನಟ ಸುಶಾಂತ್ ಆತ್ಮಹತ್ಯೆಗೆ ಇಡೀ ಭಾರತೀಯ ಸಿನಿಮಾರಂಗ ದಂಗಾಗಿತ್ತು. ಇವರ ಸಾವಿಗೆ ಸಿನಿಮಾ ಇಂಡಸ್ಟ್ರಿ ಸೇರಿದಂತೆ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದರು. ಆದರೆ ಕೆಲವರು ಸುಶಾಂತ್ ಸಾವಿಗೆ ಅವರ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಪ್ರೇಯಸಿ ರಿಯಾ ಚಕ್ರಬೋರ್ತಿ ಹಾಗೂ ಮಾಜಿ ಪ್ರೇಯಸಿ ಅಂಕಿತಾ ಲೊಖಾಂಡೆ ಅವರೇ ಕಾರಣ ಎಂದು ದೂರಿದ್ದಾರೆ. ಅಷ್ಟೇ ಅಲ್ಲದೆ ಇವರ‌ ಜೊತೆ ನಟಿಸಿರುವ ಕೃತಿ ಸನೋನ್ ಹಾಗೂ ಶೃದ್ಧಾ ಕಪೂರ್‌ ಸುಶಾಂತ್‌ಗೆ ಸಂತಾಪ ಸೂಚಿಸಿ ಯಾವುದೇ ಪೋಸ್ಟ್ ಹಾಕಿಲ್ಲದಿರುವುದಕ್ಕೂ ಕೂಡ ಅವರು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‌ಈ ವಿಷಯದ ಬಗ್ಗೆ ಕೋಪಗೊಂಡ ಸೋನಂ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ‘ಒಬ್ಬರ ಸಾವಿಗೆ ಮತ್ತೊಬ್ಬರನ್ನು (ಸ್ನೇಹಿತರು, ಕುಟುಂಬ, ಪ್ರೇಮಿ, ಮಾಜಿ ಪ್ರೇಮಿ) ಕಾರಣ ಎಂದು ದೂಷಿಸುವುದನ್ನು ನಿಲ್ಲಿಸಿ. ಒಬ್ಬರ ಸಾವಿನೊಂದಿಗೆ ಇನ್ನೊಬ್ಬರ ಹೆಸರು ತಳುಕು ಹಾಕುವವರು ಅಜ್ಞಾನಿಗಳು’ ಎಂದು ಕೆಟ್ಟದಾಗಿ ಬೈದಿದ್ದಾರೆ.ಇವರ ಈ ಟ್ವೀಟ್‌ಗೆ 28ಸಾವಿರಕ್ಕೂ ಅಧಿಕ ರೀಟ್ವೀಟ್‌ಗಳು ಬಂದಿದ್ದು, 9ಸಾವಿರಕ್ಕೂ ಅಧಿಕ ಮಂದಿ ಕಮೆಂಟ್‌ ಮಾಡಿದ್ದಾರೆ. 65ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್‌ ಅನ್ನು ಲೈಕ್ ಮಾಡಿದ್ದಾರೆ.

ನೆಟ್ಟಿಗರ ರೋಷದ ಪ್ರತಿಕ್ರಿಯೆ

ಸೋನಂ ಟ್ವೀಟ್‌ಗೆ ರೊಚ್ಚಿಗೆದ್ದಿರುವ ನೆಟ್ಟಿಗರು ಅವರ ಟ್ವೀಟ್‌ಗೆ ರೀಟ್ವೀಟ್‌ ಮಾಡುವ ಮೂಲಕ ರೋಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಅವರ ಪ್ರತಿಭೆಯ ಬಗ್ಗೆಯೇ ಪ್ರಶ್ನಿಸಿದ ನೆಟ್ಟಿಗನೊಬ್ಬ ‘ಮೇಡಂ ಜೀ, ನಾನು ನಿಮ್ಮ ಗಮನಕ್ಕೆ ತರುವುದು ಏನೆಂದರೆ ನೀವು ಮಾಡಿರುವುದು ಕೇವಲ 12 ಸಿನಿಮಾಗಳು, ಅದರಲ್ಲಿ ನೀವು ಹತ್ತು ಸಿನಿಮಾಗಳಿಗೆ ಪ್ರಶಸ್ತಿ ಪಡೆದಿದ್ದೀರಿ. ಆದರೆ ನೀರ್ಜಾ ಸಿನಿಮಾ ಹೊರತು ಪಡಿಸಿದರೆ ಬೇರೆ ಯಾವುದು ಪ್ರಶಸ್ತಿಗೆ ಅರ್ಹವಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

‘ನಟನೆ ಗೊತ್ತಿಲ್ಲದ ಸೋನಂ ಒಬ್ಬ ಪ್ರತಿಭಾವಂತ ನಟನಿಗೆ ರೇಟಿಂಗ್ ನೀಡಲು ಹೊರಟಿದ್ದಾರೆ. ಇದು ಅವರಿಗೆ ಪರೋಕ್ಷವಾಗಿ ಮಾಡಿದ ಅವಮಾನ. ಇಂತಹವರನ್ನ ನಿಷೇಧ ಮಾಡಬೇಕು’ ಎಂದು ಇನ್ನೊಬ್ಬರು ರೀಟ್ವೀಟ್‌ ಮಾಡಿದ್ದಾರೆ.

ನೆಟ್ಟಿಗರ ಟ್ರೋಲ್‌ ಬಗ್ಗೆ ಸೋನಂ ಮಾತ್ರವಲ್ಲದೇ ಕೃತಿ ಸನೋನ್‌ ಸಹೋದರಿ ನೂಪುರ್ ಕೂಡ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ‘ಸುಶಾಂತ್‌ ಸಾವಿನ ದಿನದಿಂದ ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಬರೆದುಕೊಳ್ಳಲು ಆರಂಭಿಸಿದ್ದಾರೆ. ಜೊತೆಗೆ ಬಾಯಿಗೆ ಬಂದ ಹಾಗೆ ಕಮೆಂಟ್‌, ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಈ ರೀತಿ ಅಸಂಬದ್ಧ ಟ್ವೀಟ್, ಮೆಸೇಜ್‌ ಹಾಗೂ ಕಮೆಂಟ್‌ಗಳಿಂದ ಮೊದಲೇ ಆಘಾತದಲ್ಲಿರುವವರಿಗೆ ಇನ್ನಷ್ಟು ಆಘಾತ ನೀಡಿದಂತಾಗುತ್ತದೆ. ‘ನೀವು ಹೃದಯಹೀನರು’, ‘ಒಂದೇ ಒಂದು ಸಂತಾಪದ ಪೋಸ್ಟ್‌ ಕೂಡ ಮಾಡಿಲ್ಲ’, ‘ನೀವುಗಳು ಒಂದೇ ಒಂದು ಪ್ರತಿಕ್ರಿಯೆ ಕೂಡ ನೀಡಿಲ್ಲ. ಎಷ್ಟು ಕಠಿಣ ಹೃದಯ ನಿಮ್ಮದು’ ಇಂತಹ ಸಂದೇಶ ಹಾಗೂ ಕಮೆಂಟ್‌ಗಳು ಪದೇ ಪದೇ ಬರುತ್ತಿವೆ. ಇದರಿಂದ ಶಾಂತಿ ಇಲ್ಲದಂತಾಗಿದೆ’ ಎಂದು ಬೇಸರ ವ್ಯಕ್ತಪ‍ಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.