ADVERTISEMENT

ಸುಶಾಂತ್‌ ಸಿಂಗ್ ಆತ್ಮಹತ್ಯೆ: ಬನ್ಸಾಲಿ, ಶಾನೂ ಶರ್ಮಾಗೆ ಸಮನ್ಸ್‌ ?

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 10:54 IST
Last Updated 2 ಜುಲೈ 2020, 10:54 IST
   

ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಿರ್ದೇಶಕ ಸಂಜಯ್‌ ಲೀಲಾ ಬನ್ಸಾಲಿ ಮತ್ತು ಯಶ್‌ರಾಜ್‌ ಫಿಲ್ಮಂ ಸಂಸ್ಥೆಯ ಕಾಸ್ಟಿಂಗ್ ಡೈರೆಕ್ಟರ್‌ ಶಾನೂ ಶರ್ಮಾ ಅವರನ್ನು ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸರು ಸಮನ್ಸ್‌ ಜಾರಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸುಶಾಂತ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಬನ್ಸಾಲಿ ಅವರನ್ನು ಪ್ರಶ್ನಿಸಲು ನೋಟಿಸ್‌ ಜಾರಿ ಮಾಡಿರುವುದು ಇದೇ ಮೊದಲು. ಆದರೆ, ಶರ್ಮಾ ಅವರನ್ನು ಈ ಮೊದಲು ವಿಚಾರಣೆಗೆ ಒಳಪಡಿಸಿದ್ದರು.

ಈ ಪ್ರಕರಣಕ್ಕೆ ನೇರವಾಗಿ ಸಂಬಂಧಪಡದಿದ್ದರೂ, ಹೇಳಿಕೆ ದಾಖಲಿಸಿಕೊಳ್ಳುವುದಕ್ಕಾಗಿ ನಟಿ ಕಂಗನಾ ರನೌಟ್ ಮತ್ತು ನಿರ್ದೇಶಕ ಶೇಖರ್ ಕಪೂರ್ ಅವರನ್ನೂ ಪೊಲೀಸರು ಕರೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಇದೇ ಜೂನ್ 14ರಂದು ಸುಶಾಂತ್‌ ಸಿಂಗ್ ಮುಂಬೈನ ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಸುಶಾಂತ್ ಸಾವಿನ ನಂತರ, ಅನೇಕ ಬಾಲಿವುಡ್‌ ನಟ–ನಟಿಯರು, ನಿರ್ದೇಶಕರು, ನಿರ್ಮಾಪಕರು ಬಾಲಿವುಡ್‌ನಲ್ಲಿರುವ ಸ್ವಜನಪಕ್ಷಪಾತದಿಂದಾಗಿಯೇ ಇಂಥ ನಟರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದ್ದರು.

ಸಿನಿಮಾ ಕುಟುಂಬದ ಹಿನ್ನೆಲೆ ಇರದವರಿಗೆ, ಬಾಲಿವುಡ್‌ನಲ್ಲಿ ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ. ಇಂಥ ಅವಮಾನ ತಾಳಲಾರದೇ ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಸುಶಾಂತ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ನಡುವೆ ಸುಶಾಂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ‌ಬೇಚಾರ’ ಸಿನಿಮಾವನ್ನು ಡಿಸ್ನಿ+ ಹಾಟ್‌ಸ್ಟಾರ್‌-ಒಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡುವುದಾಗಿ ಫಾಕ್ಸ್‌ ಸ್ಟಾರ್‌ ಸ್ಟುಡಿಯೋಸ್ ಸಂಸ್ಥೆಯವರು ಪ್ರಕಟಿಸಿದರು. ಈ ಮೂಲಕ ಸುಶಾಂತ್ ಸಿಂಗ್‌ ಅವರ ಸಿನಿಮಾ ರಂಗದ ಸೇವೆಗೆ ಗೌರವ ಸಲ್ಲಿಸುತ್ತಿರುವುದಾಗಿ ತಿಳಿಸಿದ್ದರು. ಈ ಸಿನಿಮಾವನ್ನು ಹಾಟ್‌ಸ್ಟಾರ್ ನೆಟ್‌ವರ್ಕ್‌‌ ಚಂದಾದಾರಲ್ಲದವರ ಕೂಡ ನೋಡುವಂತೆ ಈ ಸಂಸ್ಥೆ ಅವಕಾಶ ಕಲ್ಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.