ADVERTISEMENT

ಅ.23ರಿಂದ ‘ಎಸ್‌ವಿಆರ್‌50’ ಅದ್ದೂರಿ ಸಮಾರಂಭ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 23:30 IST
Last Updated 8 ಅಕ್ಟೋಬರ್ 2025, 23:30 IST
ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು 
ಎಸ್‌.ವಿ.ರಾಜೇಂದ್ರಸಿಂಗ್‌ ಬಾಬು    

ನಿರ್ದೇಶಕ ಎಸ್.ವಿ.ರಾಜೇಂದ್ರಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷಗಳು ಆಗಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗದಿಂದ ‘ಎಸ್‌ವಿಆರ್ 50’ ಎಂಬ ಅದ್ದೂರಿ ಸಮಾರಂಭ ಆಯೋಜಿಸಲು ತೀರ್ಮಾನಿಸಲಾಗಿದೆ. ‌

ಸಮಾರಂಭದ ಆಯೋಜಕರಾದ ನಿರ್ದೇಶಕ ಕೃಷ್ಣೇಗೌಡ ಮಾತನಾಡಿ, ‘ಕರ್ನಾಟಕ ಮಾತ್ರವಲ್ಲ, ಇಡೀ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಈವರೆಗೂ 50 ವರ್ಷ ಸಕ್ರಿಯವಾಗಿ ನಿರ್ದೇಶಕರಾಗಿರುವವರು ಯಾರು ಇಲ್ಲ. ಅದು ರಾಜೇಂದ್ರ ಸಿಂಗ್ ಬಾಬು ಅವರೊಬ್ಬರೇ. ಈಗಲೂ ಅವರ ನಿರ್ದೇಶನದ ಎರಡು ಚಿತ್ರಗಳು ತೆರೆಗೆ ಬರಲು ಸಿದ್ಧವಾಗಿವೆ. ಈ ಸುವರ್ಣ ಗಳಿಗೆಯನ್ನು ಸಂಭ್ರಮಿಸಲು ಅ.23 ರಿಂದ ಐದು ದಿನ ಸಮಾರಂಭ ನಡೆಸಲಾಗುತ್ತಿದೆ. ಅ.23 ರಂದು ಚಾಮರಾಜಪೇಟೆಯ ಕಲಾವಿದರ ಸಂಘದಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಅಲ್ಲಿಂದ ನಾಲ್ಕು ದಿನ ಕಲಾವಿದರ ಸಂಘದಲ್ಲೇ ರಾಜೇಂದ್ರಸಿಂಗ್ ಬಾಬು ಅವರ ನಿರ್ದೇಶನದ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳ ಚಿತ್ರೋತ್ಸವ ನಡೆಯಲಿದೆ. ದಿನಕ್ಕೆ ಎರಡು ಚಿತ್ರಗಳ ಪ್ರದರ್ಶನವಿರಲಿದೆ. ಅ.27ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಮಾರೋಪ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತರಿರಲಿದ್ದಾರೆ. ಅಂದು ರಾಜೇಂದ್ರ ಸಿಂಗ್‌ ಬಾಬು ಅವರಿಗೆ ಚಿತ್ರರಂಗದ ಪರವಾಗಿ ಸನ್ಮಾನ‌ ಸಮಾರಂಭ ನಡೆಯಲಿದೆ. ಇದೇ ಸಂದರ್ಭದಲ್ಲಿ ಗಂಗಾಧರ್‌ ಮೊದಲಿಯಾರ್ ಬರೆದಿರುವ ಪುಸ್ತಕ ಸೇರಿದಂತೆ ಎರಡು ಪುಸ್ತಕಗಳ ಬಿಡುಗಡೆ ಹಾಗೂ ಬಿ.ಎಸ್‌.ಲಿಂಗದೇವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರದ ಪ್ರದರ್ಶನವಿರಲಿದೆ’ ಎಂದು ತಿಳಿಸಿದರು. 

‘ರಾಜೇಂದ್ರಸಿಂಗ್ ಬಾಬು ಅವರು ನಿರ್ದೇಶನವನ್ನಷ್ಟೇ ಅಲ್ಲದೆ ಚಿತ್ರರಂಗಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಕನ್ನಡ ಚಲನಚಿತ್ರ ನಿರ್ದೇಶಕರ ಸಂಘದ ಸ್ಥಾಪನೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿದ್ದಾಗ ‘ಬೆಳ್ಳಿ ಹೆಜ್ಜೆ’ಯಂಥ ಕಾರ್ಯಕ್ರಮ ಮಾಡಿದ್ದರು. ಅವರು ತಮ್ಮ ಚಿತ್ರಗಳ ಮೂಲಕವೇ ಮನೆ ಮಾತಾಗಿದ್ದಾರೆ’ ಎಂದರು ನಿರ್ದೇಶಕ ಗಿರೀಶ್ ಕಾಸರವಳ್ಳಿ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.