ನಟಿ ಸ್ವರಾ ಭಾಸ್ಕರ್
ನವದೆಹಲಿ: ಗಣರಾಜ್ಯೋತ್ಸವದ ದಿನ ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಹಂಚಿಕೊಂಡ ಪೋಸ್ಟ್‌ನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯಾಗಿದೆ ಎಂದು ಅವರ ಎಕ್ಸ್ ಖಾತೆಯನ್ನು ಕಂಪನಿ ಶಾಶ್ವತವಾಗಿ ಅಮಾನತುಗೊಳಿಸಿದೆ.
ಈ ಕುರಿತು ತಮಗೆ ಬಂದ ಇ–ಮೇಲ್‌ನ ಸ್ಕ್ರೀನ್‌ಶಾಟ್‌ಅನ್ನು ಇನ್‌ಸ್ಟಾಗ್ರಾಂನಲ್ಲಿ ನಟಿ ಹಂಚಿಕೊಂಡಿದ್ದು, ‘ಈ ನಿರ್ಧಾರ ಹಾಸ್ಯಾಸ್ಪದ ಮತ್ತು ಅಸಮರ್ಥನೀಯ’ ಎಂದು ಟೀಕಿಸಿದ್ದಾರೆ.
ಸ್ವರಾ ಅವರು ಟ್ವೀಟ್ ಮಾಡಿದ್ದ ಪೋಸ್ಟ್‌ನ ಎರಡು ಚಿತ್ರಗಳನ್ನು ಹಂಚಿಕೊಂಡು ‘ಹಕ್ಕುಸ್ವಾಮ್ಯ ಉಲ್ಲಂಘನೆ’ ಎಂದು ಇ–ಮೇಲ್ ಬಂದಿದೆ. ಇದರ ಆಧಾರದ ಮೇಲೆ ನನ್ನ ಎಕ್ಸ್ ಖಾತೆ ಲಾಕ್ ಆಗಿದೆ. ನನಗೆ ಲಾಗಿನ್ ಆಗಲು ಆಗುತ್ತಿಲ್ಲ. ಎಕ್ಸ್ ತಂಡ ನನ್ನ ಖಾತೆಯ ಶಾಶ್ವತ ಅಮಾನತು ಮಾಡಿದೆ’ ಎಂದು ಬರೆದುಕೊಂಡಿದ್ದಾರೆ.
ಸ್ವರಾ ಅವರು, ಗಣರಾಜ್ಯೋತ್ಸವದ ದಿನ ಹಿಂದಿಯ ಜನಪ್ರಿಯ ಘೋಷಣೆ ‘ಗಾಂಧಿ, ನಮಗೆ ಅವಮಾನವಾಗುತ್ತಿದೆ; ನಿನ್ನ ಕೊಂದವರು ಇನ್ನೂ ಜೀವಂತವಾಗಿದ್ದಾರೆ’ ಎನ್ನುವ ಸಾಲುಗಳನ್ನು ಹಂಚಿಕೊಂಡಿದ್ದರು. ಜತೆಗೆ ತಮ್ಮ ಮಗು ಭಾರತದ ಧ್ವಜವನ್ನು ಹಿಡಿದುಕೊಂಡಿರುವ ಚಿತ್ರವನ್ನು ಶೇರ್ ಮಾಡಿದ್ದರು. ಪೋಸ್ಟ್‌ನಲ್ಲಿ ಮಗುವಿನ ಮುಖವನ್ನು ಮರೆಮಾಚಲಾಗಿತ್ತು.
‘ನನ್ನ ಪೋಸ್ಟ್ ಹೇಗೆ ಹಕ್ಕು ಉಲ್ಲಂಘನೆಯಾಗುತ್ತದೆ? ನನ್ನ ಮಗುವಿನ ಚಹರೆ ಮೇಲೆ ಯಾರು ಹಕ್ಕು ಸಾಧಿಸುವವರಿದ್ದಾರೆ? ಈ ಎರಡು ಅಂಶಗಳ ಮೇಲೆ ನನ್ನ ಖಾತೆ ಸ್ಥಗಿತಗೊಳಿಸಿದ್ದು ನಿಜಕ್ಕೂ ಹಾಸ್ಯಾಸ್ಪದ. ತರ್ಕಬದ್ಧ, ತಾರ್ಕಿಕ ಹಾಗೂ ವಸ್ತುನಿಷ್ಠ ನೆಲಗಟ್ಟಿನಲ್ಲಿ ಇಂಥ ಆರೋಪಗಳು ಕಾನೂನಿನಡಿಯಲ್ಲೂ ಹಕ್ಕು ಸ್ವಾಮ್ಯದ ಉಲ್ಲಂಘನೆಯಾಗುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.
ಖಾತೆಯನ್ನು ಅಮಾನತಿನಲ್ಲಿಡುವ ನಿರ್ಧಾರವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಸ್ವರಾ ಅವರು ಎಕ್ಸ್ ತಂಡಕ್ಕೆ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.