ತಮನ್ನಾ ಭಾಟಿಯಾ
ಚಿತ್ರಕೃಪೆ: ಇನ್‌ಸ್ಟಾಗ್ರಾಮ್
ಬೆಂಗಳೂರು: ನಟಿ ತಮನ್ನಾ ಭಾಟಿಯಾ ಅವರಿಗೆ ಎರಡು ವರ್ಷ ಎರಡು ದಿನಕ್ಕೆ ₹6.20 ಕೋಟಿ ಸಂಭಾವನೆ ನೀಡಲು ನಿರ್ಧರಿಸಿರುವ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮವು (ಕೆಎಸ್‌ಡಿಎಲ್) ತನ್ನ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಂಡಿದೆ.
ಈ ಕುರಿತು ಮಾತನಾಡಿದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಮೈಸೂರು ಸ್ಯಾಂಡಲ್ ಸೋಪ್ ಸೇರಿದಂತೆ ಕರ್ನಾಟಕ ಸಾಬೂನು ಮತ್ತು ಮಾರ್ಜಕಗಳ ನಿಗಮದ ಉತ್ಪನ್ನಗಳು ಕರ್ನಾಟಕದ ಮನೆಮಾತಾಗಿವೆ. ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲು ತಮನ್ನಾ ಭಾಟಿಯಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಅವರ ವರ್ಚಸ್ಸು, ಡಿಜಿಟಲ್ ಪ್ರಸ್ತುತಿ ಮತ್ತು ಯುವಜನರ ಜತೆಗಿನ ಸಂಪರ್ಕ ಪರಿಗಣಿಸಿ ಆಯ್ಕೆ ಮಾಡಲಾಗಿದೆ’ ಎಂದಿದ್ದಾರೆ.
‘ತಮನ್ನಾ ಆಯ್ಕೆಗೆ ಕೆಲವರು ಅಪಸ್ವರ ಎತ್ತಿದ್ದಾರೆ. 2024–25ನೇ ಸಾಲಿನಲ್ಲಿ ಕೆಎಸ್‌ಡಿಎಲ್ ₹1,785 ಕೋಟಿ ವಹಿವಾಟು ನಡೆಸಿದೆ. ಈ ವ್ಯವಹಾರದಲ್ಲಿ ಕರ್ನಾಟಕದ ಪಾಲು ಶೇ 18. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿನ ಮಾರಾಟದಿಂದ ಬಂದಿದೆ. 2030ರ ವೇಳೆಗೆ ವಹಿವಾಟು ₹5,000 ಕೋಟಿ ತಲುಪುವ ಗುರಿ ಇದೆ. ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಮಾರುಕಟ್ಟೆ ವಿಸ್ತರಣೆ ಮಾಡಲಾಗುತ್ತಿದೆ. ದೇಶ ಹಾಗೂ ಜಾಗತಿಕ ಮಾರುಕಟ್ಟೆಯ ತಂತ್ರಗಾರಿಕೆ ಭಾಗವಾಗಿ ಮಾರುಕಟ್ಟೆ ಪರಿಣತರ ಸಮಿತಿಯು ರಾಯಭಾರಿ ಆಯ್ಕೆ ಮಾಡಿಕೊಂಡಿದೆ’ ಎಂದು ಹೇಳಿದ್ದಾರೆ.
ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರೂ ಆಯ್ಕೆಪಟ್ಟಿಯಲ್ಲಿ ಇದ್ದರು. ಸಾಮಾಜಿಕ ಜಾಲತಾಣದಲ್ಲಿ ತಮನ್ನಾ ಅವರು 2.8 ಕೋಟಿ ಅನುಯಾಯಿಗಳನ್ನು ಹೊಂದಿದ್ದಾರೆ. ಭಾರತದ ಎಲ್ಲೆಡೆ ವರ್ಚಸ್ಸು ಇದೆ. ಈ ಎಲ್ಲ ಅಂಶಗಳ ಆಧಾರದಲ್ಲಿ ಅವರ ಆಯ್ಕೆ ಮಾಡಲಾಗಿದೆ ಎಂದು ಪಾಟೀಲರು ವಿವರ ನೀಡಿದ್ದಾರೆ.
ಅಧಿಕೃತ ಆದೇಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.