ADVERTISEMENT

ಸ್ವಜನಪಕ್ಷಪಾತ ಎಲ್ಲಿಲ್ಲ ಹೇಳಿ: ತಮನ್ನಾ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2020, 11:08 IST
Last Updated 5 ಜುಲೈ 2020, 11:08 IST
ತಮನ್ನಾ ಭಾಟಿಯಾ
ತಮನ್ನಾ ಭಾಟಿಯಾ    

ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆಯ ನಂತರ ಶುರುವಾದ ಬಾಲಿವುಡ್‌ನಲ್ಲಿಯ ಸ್ವಜನಪಕ್ಷಪಾತ ಮತ್ತು ಪರಿವಾರವಾದದ ವಿರುದ್ಧದ ಚರ್ಚೆಗೆ ನಟಿ ತಮನ್ನಾ ಭಾಟಿಯಾ ಹೊಸ ಆಯಾಮ ನೀಡಿದ್ದಾರೆ.

‘ಸಿನಿಮಾ ಕ್ಷೇತ್ರ ಮಾತ್ರವಲ್ಲ, ಯಾವ ಕ್ಷೇತ್ರಗಳೂ ಸ್ವಜನಪಕ್ಷಪಾತ, ಪರಿವಾರವಾದ ಮತ್ತು ರಾಜಕೀಯ ದಿಂದ ಮುಕ್ತವಾಗಿಲ್ಲ’ ಎಂದು ‘ಬಾಹುಬಲಿ’ ಖ್ಯಾತಿಯ ನಟಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಸಿನಿಮಾ ಕುಟುಂಬದಿಂದ ಬಂದವರು ಮತ್ತು ಗಾಡ್‌ಫಾದರ್‌ ಇದ್ದವರಿಗೆ ಮಾತ್ರ ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತವೆ ಎಂಬ ಆರೋಪಗಳನ್ನು ಅವರು ನಯವಾಗಿ ತಳ್ಳಿ ಹಾಕಿದ್ದಾರೆ.

ADVERTISEMENT

‘ಮುಂಬೈನಿಂದ ಹೋದ ನನಗೆ ತಮಿಳು, ತೆಲುಗು ಚಿತ್ರರಂಗದಲ್ಲಿ ಯಾರ ಪರಿಚಯವೂ ಇರಲಿಲ್ಲ. ಸಿನಿಮಾ ಕುಟುಂಬದ ಹಿನ್ನೆಲೆ ಮತ್ತು ಯಾವ ಗಾಡ್‌ಫಾದರ್ ಇರಲಿಲ್ಲ. ಮೇಲಾಗಿ ದಕ್ಷಿಣ ಭಾರತದ ಭಾಷೆಗಳೂ ಗೊತ್ತಿರಲಿಲ್ಲ. ಉತ್ತರ ಭಾರತದವಳು ಎಂಬ ಕಾರಣಕ್ಕೆ ದಕ್ಷಿಣ ಭಾರತದ ಚಿತ್ರರಂಗ ನನ್ನನ್ನು ದೂರ ಇಡಲಿಲ್ಲ. ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ಮಾಡಿದೆ. ತಾವಾಗಿಯೇಅವಕಾಶ ಹುಡುಕಿಕೊಂಡು ಬಂದವು. ಕುಟುಂಬದ ಹಿನ್ನೆಲೆ ಮತ್ತು ಪ್ರಭಾವಗಳು ಖಂಡಿತನಮ್ಮ ಯಶಸ್ಸು ಮತ್ತು ಸೋಲುಗಳನ್ನುನಿರ್ಧರಿಸಲಾರವು’ ಎನ್ನುವುದು ಸಹಜ ಸುಂದರಿ ತಮನ್ನಾ ವಾದ.

‘ನಮ್ಮದು ವೈದ್ಯರ ಕುಟುಂಬ. ನಾನು ವೈದ್ಯಳಾಗಿದ್ದರೆ ಸಹಜವಾಗಿ ನನ್ನ ಕುಟುಂಬದವರು ಬೆನ್ನಿಗೆ ನಿಲ್ಲುತ್ತಿದ್ದರು.ಒಂದು ವೇಳೆ ನಾಳೆ ನನ್ನ ಮಕ್ಕಳು ಸಿನಿಮಾ ಕ್ಷೇತ್ರ ಆಯ್ದುಕೊಂಡರೆ ನಾನು ಕೂಡ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. ಅದರಲ್ಲಿ ತಪ್ಪೇನಿದೆ’ ಎಂದ ಹಾಲುಬಣ್ಣದ ಚೆಲುವೆ ಪ್ರಶ್ನಿಸಿದ್ದಾರೆ.

‘ಶಾರುಕ್‌ ಖಾನ್‌, ಆಯುಷ್ಮಾನ್‌ ಖುರಾನಾ, ಕಾರ್ತಿಕ್‌ ಆರ್ಯನ್‌ ಅವರಿಗೆ ಬಾಲಿವುಡ್ ಕುಟುಂಬದ ಹಿನ್ನೆಲೆ ಇದೆಯಾ. ಅವರೇನು ಈ ಇಂಡಸ್ಟ್ರಿಯವರೆ? ಹೊರಗಿನಿಂದ ಬಂದು ಕಠಿಣ ಪರಿಶ್ರಮದಿಂದ ಭವಿಷ್ಯ ರೂಪಿಸಿಕೊಳ್ಳಲಿಲ್ಲವೆ. ಅಷ್ಟೇ ಏಕೆ ನಾನೂ ಹೊರಗಿನವಳೇ ಅಲ್ಲವೆ’ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.

‘ತಮಿಳು, ತೆಲುಗು ಚಿತ್ರರಂಗ ನನ್ನನ್ನು ಹೊರಗಿನವಳು ಎಂದು ಭಾವಿಸಿದ್ದರೆ,‘ಬಾಹುಬಲಿ’ಯಂತಹ ಬಿಗ್‌ ಬಜೆಟ್‌ ಚಿತ್ರದಲ್ಲಿ ನಟಿಸಲು ಸಾಧ್ಯವಾಗುತ್ತಿತ್ತೆ’ ಎಂದು ತಮನ್ನಾ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.