ADVERTISEMENT

ಮೀಟೂ ಹೋರಾಟ ನಿಲ್ಲದಿರಲಿ: ತಾಪ್ಸಿ

ತಾಪ್ಸಿ ಪನ್ನು ಮತ್ತು ಮೀ ಟೂ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 19:30 IST
Last Updated 5 ಜೂನ್ 2019, 19:30 IST
ತಾಪ್ಸಿ ಪನ್ನು
ತಾಪ್ಸಿ ಪನ್ನು   

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಶೋಷಣೆಯ ವಿಷಯ ಅಭಿಯಾನದ ಸ್ವರೂಪದ ಪಡೆದಿದ್ದ ‘ಮೀಟೂ ಅಭಿಯಾನ’ ನಿಲ್ಲಬಾರದು ಎಂದು ನಟಿ ತಾಪ್ಸಿ ಪನ್ನು ಅಭಿಪ್ರಾಯಪಟ್ಟಿದ್ದಾರೆ.

ಮೀಟೂ ಪ್ರಕರಣದಲ್ಲಿ ಆರೋಪಿಯಾಗಿದ್ದ ಬಾಲಿವುಡ್‌ ನಿರ್ದೇಶಕ ವಿಕಾಸ್ ಬಹ್ಲ್‌ಅವರಿಗೆ ಈಚೆಗಷ್ಟೇ ಕ್ಲೀನ್ ಚಿಟ್ ದೊರೆತ ಬೆನ್ನಲ್ಲೇ, ತಾಪ್ಸಿ ಅವರು ಈ ರೀತಿ ಹೇಳಿರುವುದು ಬಾಲಿವುಡ್‌ನಲ್ಲಿ ಚರ್ಚೆಯ ವಿಷಯವಾಗಿದೆ.

‘ಲೈಂಗಿಕ ಶೋಷಣೆ ಅಥವಾ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆಯಾಗದಿದ್ದಲ್ಲಿ ಇಡೀ ಅಭಿಯಾನದ ಆಶಯವೇ ನಿರರ್ಥಕವಾಗುತ್ತದೆ. ಲೈಂಗಿಕವಾಗಿ ಶೋಷಣೆಗೀಡಾದ ಸಂತ್ರಸ್ತೆ ಸಾರ್ವಜನಿಕ ಸ್ಥಳದಲ್ಲಿ ತಳಮಳ ಅನುಭವಿಸಬೇಕಾಗುತ್ತದೆ. ಆಕೆಗೆ ಸೋಲಿನ ಭೀತಿ ಕಾಡುತ್ತದೆ. ಹಾಗೆಂದು ಮೀಟೂ ಅಭಿಯಾನವನ್ನೇ ನಿಲ್ಲಿಸಲಾಗದು. ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ಶೋಷಣೆಯ ವಿರುದ್ಧ ದನಿ ಎತ್ತುವುದನ್ನು ನಿಲ್ಲಿಸಬಾರದು. ಮೀಟೂ ಅಭಿಯಾನ ಆರಂಭವಾದಾಗ ಎಷ್ಟೊಂದು ಜನರು ಇದಕ್ಕೆ ತಮ್ಮ ದನಿಗೂಡಿಸಿದರು ಎಂಬುದನ್ನೂ ನಾವು ಗಮನಿಸಬೇಕು. ರಾತ್ರೋರಾತ್ರಿ ಯಾವುದೂ ಬದಲಾಗದು. ಹಾಗೆಂದು ನಾವು ಹಿಂದೆ ಸರಿಯಬಾರದು. ಶೋಷಣೆಯನ್ನು ಸಹಿಸಿಕೊಳ್ಳಬಾರದು’ ಎಂದು ತಾಪ್ಸಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

‘ಅಡಚಣೆಗಳು ಬಂದೇ ಬರುತ್ತವೆ. ಆದರೆ, ನಾವು ಧೃತಿಗೆಡಬಾರದು. ಇದೊಂದು ರೀತಿಯಲ್ಲಿ ಸಂಕ್ರಮಣದ ಕಾಲ. ಇದು ಕಷ್ಟಕಾಲ. ನಿಜ ಹಾಗೆಂದು ನಾವು ಅಭಿಯಾನವನ್ನು ಕೈಬಿಡಬಾರದು. ಇದನ್ನು ನಾವು ಮುಂದುವರಿಸದಿದ್ದಲ್ಲಿ ಭವಿಷ್ಯದಲ್ಲಿ ನಮಗೆ ಬದಲಾವಣೆ ಕಾಣದು’ ಎಂದೂ ಅವರು ವಿಶ್ಲೇಷಿಸಿದ್ದಾರೆ.

‘ಪಿಂಕ್’ ಸಿನಿಮಾದಲ್ಲಿ ಲೈಂಗಿಕವಾಗಿ ಶೋಷಣೆಗೀಡಾದ ಸಂತ್ರಸ್ತೆ ಪಾತ್ರಕ್ಕೆ ಜೀವತುಂಬಿ ನಟಿಸಿದ್ದ ತಾಪ್ಸಿ, ದೇಶಾದ್ಯಂತ ಪರೋಕ್ಷವಾಗಿ ಲೈಂಗಿಕ ಶೋಷಣೆಯ ವಿರುದ್ಧ ದನಿ ಎತ್ತಲು ಪ್ರೇರಣೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.