ADVERTISEMENT

‘ಠಾಕ್ರೆ’ ಅಂದರೆ ‘ಹೃದಯ ಸಾಮ್ರಾಟ’

ವಿಜಯ್ ಜೋಷಿ
Published 25 ಜನವರಿ 2019, 12:34 IST
Last Updated 25 ಜನವರಿ 2019, 12:34 IST
‘ಠಾಕ್ರೆ’ ಚಿತ್ರದ ದೃಶ್ಯ
‘ಠಾಕ್ರೆ’ ಚಿತ್ರದ ದೃಶ್ಯ   

ಮುಂಬೈನ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆಯಲ್ಲಿ ವ್ಯಂಗ್ಯಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಬಾಳ ಕೇಶವ ಠಾಕ್ರೆ ಎನ್ನುವ ಕಲಾವಿದನೊಬ್ಬ ಶಿವಸೇನೆ ಎಂಬ ಸಂಘಟನೆಯನ್ನು ಕಟ್ಟಿ, ಬಾಳಾಸಾಹೇಬ್ ಠಾಕ್ರೆ ಆಗಿ ಬೆಳೆದಿದ್ದು... ನಂತರ ಆ ಸಂಘಟನೆಯನ್ನು ರಾಜಕೀಯದ ಅಖಾಡಕ್ಕೆ ನುಗ್ಗಿಸಿ, ಬಿಜೆಪಿ ಜೊತೆ ಸೇರಿ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿದ್ದು ‘ಠಾಕ್ರೆ’ ಚಿತ್ರದ ಕಥೆ.

ಈ ಸಿನಿಮಾ ಕಥೆ ಸಾರ್ವಜನಿಕರಿಗೆ ಗೊತ್ತಿರುವಂಥದ್ದು. ಕಥೆಯನ್ನು ಸಿನಿಮಾ ಮಾಡುವ ಕಾರಣಕ್ಕಾಗಿ ಒಂದಿಷ್ಟು ಸಿನಿಮೀಯ ಅಂಶಗಳನ್ನೂ ಸೇರಿಸಿಕೊಳ್ಳಲಾಗಿದೆ. ಪ್ರಸಿದ್ಧ ವ್ಯಕ್ತಿಗಳ ಕುರಿತ ಚಿತ್ರಗಳು ವೀಕ್ಷಕರಲ್ಲಿ ಆಸಕ್ತಿ ಕೆರಳಿಸುವುದು ಆ ವ್ಯಕ್ತಿಯನ್ನು ಹೇಗೆ ಚಿತ್ರಿಸಿರಬಹುದು ಎಂಬ ಪ್ರಶ್ನೆ. ಈ ಪ್ರಶ್ನೆಯನ್ನು ಇಟ್ಟುಕೊಂಡು ಸಿನಿಮಾ ವೀಕ್ಷಿಸಿದಾಗ, ಠಾಕ್ರೆಯಂತಹ ವರ್ಣರಂಜಿತ ಹಾಗೂ ವಿವಾದಾತ್ಮಕ ವ್ಯಕ್ತಿಯನ್ನು ನಿರ್ದೇಶಕ ಅಭಿಜಿತ್ ಪಾನ್ಸೆ ಚಿತ್ರಿಸಿದ ಬಗೆ ಇಷ್ಟವಾಗುತ್ತದೆ. ಠಾಕ್ರೆಯ ಪಾತ್ರಕ್ಕೆ ನವಾಜುದ್ದಿನ್ ಸಿದ್ಧಿಕಿ ಜೀವತುಂಬಿದ ಬಗೆ ಕೂಡ ನೆನಪಿನಲ್ಲಿ ಉಳಿದುಕೊಳ್ಳುತ್ತದೆ. ‘ಠಾಕ್ರೆ’ ಚಿತ್ರಕ್ಕೆ ಸೊಗಸು ತಂದುಕೊಟ್ಟಿದ್ದರಲ್ಲಿ ಬಹುದೊಡ್ಡ ಪಾಲು ನವಾಜುದ್ದಿನ್ ಅವರದ್ದು.

‘ಫ್ರೀ ಪ್ರೆಸ್ ಜರ್ನಲ್‌’ನ ಮುಂಬೈ ಕಚೇರಿಯಲ್ಲಿ ಆರಂಭವಾಗುವ ಸಿನಿಮಾ ಕಥೆ, ಮುಂಬೈ ನಗರ ಮತ್ತು ಮರಾಠಿ ಭಾಷೆಗೆ ‘ಹೊರಗಿನವರ’ ಬಗ್ಗೆ ಠಾಕ್ರೆಯ ಮನಸ್ಸಿನಲ್ಲಿ ಮೂಡಿಸಿದ ಭಾವಗಳ ಬಗ್ಗೆ ಚಿತ್ರಣ ನೀಡುತ್ತದೆ. ಮುಂಬೈನ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ಜನರ ವಿಶ್ವಾಸವನ್ನು ಠಾಕ್ರೆ ತಮ್ಮ ಕಡೆ ತಿರುಗಿಸಿದ ಬಗೆಯನ್ನು ವಿವರಿಸುತ್ತದೆ. ಠಾಕ್ರೆ ಜೀವನದ ವಿವಿಧ ಘಟ್ಟಗಳಲ್ಲಿ ಮುಂಬೈ ನಗರದ ಚಿತ್ರಣ ಹೇಗಿತ್ತು ಎಂಬುದನ್ನೂ ಸುಂದರವಾಗಿ ತೋರಿಸುತ್ತದೆ.

ADVERTISEMENT

ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಶಿವಸೇನೆಯನ್ನು ಕೂಡ ನಿಷೇಧಿಸಬೇಕು ಎಂದು ಪ್ರಸ್ತಾವ ಕೇಂದ್ರ ಸರ್ಕಾರದ ಮುಂದೆ ಇತ್ತು. ಆ ಸಂದರ್ಭದಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡುವ ಠಾಕ್ರೆ, ‘ಒಳ್ಳೆಯದಾಗುತ್ತದೆ ಎಂದಾದರೆ ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಆಗದು’ ಎಂದು ಹೇಳುತ್ತಾರೆ. ನಂತರ, ಶಿವಸೇನೆಯನ್ನು ನಿಷೇಧಿಸುವ ಪ್ರಸ್ತಾವವನ್ನು ಕೇಂದ್ರ ಕೈಬಿಡುತ್ತದೆ. ಇಂತಹ ಹಲವು ಮಹತ್ವದ ಸಂದರ್ಭಗಳನ್ನು ಈ ಸಿನಿಮಾ ದಾಖಲಿಸುತ್ತದೆ. ಹಾಗೆಯೇ, ಕೆಲವು ದೃಶ್ಯಗಳು ಸಣ್ಣ ನಿದ್ರೆ ತರಿಸುತ್ತವೆ.

ಆದರೆ, ಠಾಕ್ರೆ ಎಂಬ ನಾಯಕನನ್ನು ವಿಮರ್ಶಾತ್ಮಕವಾಗಿ ನೋಡುವ ಆಶಯ ಈ ಸಿನಿಮಾಕ್ಕೆ ಇಲ್ಲ. ನಾಯಕನಾಗಿ ಕೈಗೊಂಡ ಯಾವುದೇ ತೀರ್ಮಾನದ ಬಗ್ಗೆ – ಆ ತೀರ್ಮಾನದಿಂದ ಜನರಿಗೆ ತೊಂದರೆ ಆದಾಗ – ಠಾಕ್ರೆ ಅವರಲ್ಲಿ ವಿಷಾದ ಭಾವ ಮೂಡಿತ್ತೇ? ಠಾಕ್ರೆ ಬಗ್ಗೆ ರಾಜಕೀಯ ಹಾಗೂ ವೈಚಾರಿಕ ವಿರೋಧಿಗಳ ದೃಷ್ಟಿಕೋನ ಏನಿತ್ತು? ಠಾಕ್ರೆ ನಾಯತ್ವದ ಶೈಲಿಗೆ ಶಿವಸೇನೆಯ ಕಾರ್ಯಕರ್ತರಿಂದ ದೊಡ್ಡ ಮಟ್ಟದ ಪ್ರತಿರೋಧ (ಈ ಕುರಿತು ಒಂದು ದೃಶ್ಯದಲ್ಲಿ ಮಾತ್ರ ಉಲ್ಲೇಖ ಇದೆ) ವ್ಯಕ್ತವಾಗಿರಲಿಲ್ಲವೇ?... ಇಂತಹ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ ಈ ಸಿನಿಮಾ.

ಠಾಕ್ರೆ ಅವರು ತಮ್ಮ ಪತ್ನಿಯ ಜೊತೆ ಹೇಗಿರುತ್ತಿದ್ದರು, ಒಬ್ಬ ಪತಿಯಾಗಿ ತನ್ನಾಕೆಯನ್ನು ಹೇಗೆ ಪ್ರೀತಿಸುತ್ತಿದ್ದರು ಎಂಬುದನ್ನು ನವಿರಾಗಿ ಹೇಳುವ ಪ್ರಯತ್ನ ಇದೆ. ಆದರೆ, ಠಾಕ್ರೆ ಒಬ್ಬ ಅಪ್ಪನಾಗಿ ಹೇಗಿದ್ದರು, ಕುಟುಂಬದ ಇತರ ಸದಸ್ಯರನ್ನು ಹೇಗೆ ಕಾಣುತ್ತಿದ್ದರು ಎಂಬುದನ್ನೆಲ್ಲ ಈ ಸಿನಿಮಾದಲ್ಲಿ ಹುಡುಕಲು ಹೋಗಬಾರದು. ಏಕೆಂದರೆ, ಇದು ‘ಹೃದಯ ಸಾಮ್ರಾಟ’ನ ಕಥೆಯೇ ವಿನಾ ಠಾಕ್ರೆ ಎಂಬ ಮನುಷ್ಯನ ಕಥೆ ಅಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.