
ಜನ ನಾಯಗನ್ ಸಿನಿಮಾ
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸಂಸ್ಥಾಪಕ ಮತ್ತು ತಾರಾ ನಟ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ‘ಜನ ನಾಯಗನ್’ ಸಿನಿಮಾ ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಆದರೆ, ಅಂದುಕೊಂಡಂತೆ ಜ.9ರಂದು (ಶುಕ್ರವಾರ) ಸಿನಿಮಾ ಬಿಡುಗಡೆಯಾಗುತ್ತಿಲ್ಲ.
ಈ ಬಗ್ಗೆ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ. ‘ಜನವರಿ 9ರಂದು ಬಿಡುಗಡೆಯಾಗಬೇಕಿದ್ದ ಜನ ನಾಯಗನ್ ಸಿನಿಮಾವನ್ನು ಮುಂದೂಡಲಾಗಿದೆ. ಸಿನಿಮಾ ಬಿಡುಗಡೆಯ ಹೊಸ ದಿನಾಂಕವನ್ನು ಆದಷ್ಟು ಬೇಗ ಪ್ರಕಟಿಸಲಾಗುವುದು’ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್, ಸಿನಿಮಾ ಬಿಡುಗಡೆ ಮುಂದೂಡಿಕೆ ಬಗ್ಗೆ ಮಾಹಿತಿ ನೀಡಿದ ಬೆನ್ನಲ್ಲೇ ಯುಎಸ್, ಯುಕೆ ಮತ್ತು ಮಲೇಷ್ಯಾದಾದ್ಯಂತ ವಿತರಕರು, ಸಿನಿಮಾ ಪ್ರದರ್ಶನಗಳನ್ನು ರದ್ದುಗೊಳಿಸಿದ್ದು ಈಗಾಗಲೇ ಟಿಕೆಟ್ ಪಡೆದವರಿಗೆ ಹಣ ಹಿಂದಿರುಗಿಸಲು ನಿರ್ಧರಿಸಿದ್ದಾರೆ.
‘ಸಿನಿಮಾ ಬಿಡುಗಡೆ ಮುಂದೂಡಿಕೆಯಾಗಿರುವುದರಿಂದ ಈಗಾಗಲೇ ಟಿಕೆಟ್ ಪಡೆದವರಿಗೆ ಹಣವನ್ನು ಹಿಂದಿರುಗಿಸಲಾಗುವುದು’ ಎಂದು ಕೆವಿಎನ್ ಪ್ರೊಡಕ್ಷನ್ ಮಾಲೀಕ ಸುಪ್ರೀತ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ಗಳ ಮೊತ್ತವನ್ನು ಜನವರಿ 8ರಿಂದ 26ರೊಳಗೆ ಚಿತ್ರಮಂದಿರಗಳು ಮರುಪಾವತಿಸಲಿವೆ.
ವರದಿಗಳ ಪ್ರಕಾರ, ವಿದೇಶಗಳಲ್ಲಿ ಮುಂಗಡ ಬುಕಿಂಗ್ ಮೂಲಕ ಜನ ನಾಯಗನ್ ಸಿನಿಮಾ ಸುಮಾರು ₹50 ಕೋಟಿ ಗಳಿಸಿದೆ.
ವೆಂಕಟ್ ಕೆ.ನಾರಾಯಣ ನಿರ್ಮಾಣದ ಈ ದೊಡ್ಡ ಬಜೆಟ್ ಚಿತ್ರವನ್ನು ಎಚ್. ವಿನೋತ್ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ, ಸತ್ಯನ್ ಸೂರ್ಯನ್ ಛಾಯಾಚಿತ್ರಗ್ರಹಣ, ಆನ್ಲ್ ಅರಸು ಸಾಹಸ, ಪ್ರದೀಪ್ ಇ. ರಾಘವ ಸಂಕಲನ, ಶೇಖರ್ ವಿ.ಜಿ., ಸುಧನ್ ನೃತ್ಯ ನಿರ್ದೇಶನವಿದೆ. ದಳಪತಿ ವಿಜಯ್ ನಟನೆಯ 69ನೇ ಚಿತ್ರ ಇದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.