ಪ್ರಿಯಾಂಕಾ ಆಚಾರ್
‘ಏಕ್ ಲವ್ ಯಾ’ ಸಿನಿಮಾ ಮೂಲಕ ಚಂದನವನ ಪ್ರವೇಶಿಸಿದ್ದ ನಟ ರಾಣಾ ಇದೀಗ ಏಳುಮಲೆ ಏರಿದ್ದಾರೆ. ಅವರಿಗೆ ಜೋಡಿಯಾಗಿ ‘ಮಹಾನಟಿ’ ವಿಜೇತೆ ಪ್ರಿಯಾಂಕಾ ಆಚಾರ್ ನಟಿಸಲಿದ್ದಾರೆ.
ನಟಿ ರಕ್ಷಿತಾ ತಮ್ಮನಾದ ರಾಣಾ ನಟಿಸುತ್ತಿರುವ ಹೊಸ ಸಿನಿಮಾವನ್ನು ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಹಾಗೂ ಅಟ್ಲಾಂಟಾ ನಾಗೇಂದ್ರ ನಿರ್ಮಾಣ ಮಾಡುತ್ತಿದ್ದಾರೆ. ‘ಗುರುಶಿಷ್ಯರು’ ಸಿನಿಮಾ ಯಶಸ್ಸಿನ ಬಳಿಕ ತರುಣ್ ನಿರ್ಮಾಣ ಮಾಡುತ್ತಿರುವ ಎರಡನೇ ಸಿನಿಮಾ ಇದಾಗಿದೆ. ‘ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ’ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಸಿನಿಮಾವನ್ನು ಪುನೀತ್ ರಂಗಸ್ವಾಮಿ ನಿರ್ದೇಶಿಸುತ್ತಿದ್ದಾರೆ.
ನೈಜ ಘಟನೆಯ ಪ್ರೇಮಕಥೆ ಹೊಂದಿರುವ ಈ ಚಿತ್ರಕ್ಕೆ ಮೈಸೂರಿನ ಪ್ರಿಯಾಂಕಾ ಆಚಾರ್ ಸೇರ್ಪಡೆಯಾಗಿದ್ದು, ಪುನೀತ್ ಅವರ ಚೊಚ್ಚಲ ನಿರ್ದೇಶನದ ಸಿನಿಮಾ ಇದಾಗಿದೆ. ‘ರಾಬರ್ಟ್’ ಸಿನಿಮಾ ಮೂಲಕ ಆಶಾ ಭಟ್, ‘ಕಾಟೇರ’ ಸಿನಿಮಾ ಮೂಲಕ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅನ್ನು ನಾಯಕಿಯಾಗಿ ಪರಿಚಯಿಸಿದ್ದ ತರುಣ್, ಇದೀಗ ಮತ್ತೋರ್ವ ಹೊಸ ನಟಿಯನ್ನು ಚಂದನವನಕ್ಕೆ ಕರೆತಂದಿದ್ದಾರೆ. ‘ಮಹಾನಟಿ’ ರಿಯಾಲಿಟಿ ಶೋನ ತೀರ್ಪುಗಾರರಾಗಿದ್ದಾಗಲೇ ಪ್ರಿಯಾಂಕಾ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದ ತರುಣ್, ತಮ್ಮದೇ ನಿರ್ಮಾಣದ ಹೊಸ ಸಿನಿಮಾದಲ್ಲಿ ಅವರಿಗೆ ಅವಕಾಶ ನೀಡಿದ್ದಾರೆ. ಅದ್ವೈತ್ ಗುರುಮೂರ್ತಿ ಈ ಚಿತ್ರದ ಛಾಯಾಚಿತ್ರಗ್ರಹಣ ಮಾಡುತ್ತಿದ್ದು, ಸದ್ಯ ಚಿತ್ರದ ಶೂಟಿಂಗ್ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.