ಸೌರವ್ ದಾಸ್
ಕೃಪೆ: ಇನ್‌ಸ್ಟಾಗ್ರಾಂ / @i_sauravdas
ಕೋಲ್ಕತ್ತ: ಸಿನಿಮಾವನ್ನು ರಾಜಕೀಯ ಅಥವಾ ಸೈದ್ಧಾಂತಿಕ ಪೂರ್ವಾಗ್ರಹವನ್ನು ಬದಿಗಿಟ್ಟು ಕಲೆಯಾಗಿ ನೋಡಬೇಕು ಎಂದು ಬೆಂಗಾಲಿ ನಟ ಸೌರವ್ ದಾಸ್ ಹೇಳಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಅವರ 'ದಿ ಬೆಂಗಾಲ್ ಫೈಲ್ಸ್' ವಿವಾದಕ್ಕೆ ಸಂಬಂಧಿಸಿದಂತೆ ದಾಸ್ ಈ ಹೇಳಿಕೆ ನೀಡಿದ್ದಾರೆ.
ಅಗ್ನಿಹೋತ್ರಿ ಅವರ ಫೈಲ್ಸ್ ಸರಣಿಯ ಮೂರನೇ ಸಿನಿಮಾ ಇದು. ಇದಕ್ಕೂ ಮೊದಲು, 'ದಿ ತಾಷ್ಕೆಂಟ್ ಫೈಲ್ಸ್' (2019), 'ದಿ ಕಾಶ್ಮೀರ ಫೈಲ್ಸ್' (2022) ನಿರ್ಮಿಸಿದ್ದರು.
1946ರ ಆಗಸ್ಟ್ 16ರಂದು ಕೋಲ್ಕತ್ತದಲ್ಲಿ ನಡೆದ ದಂಗೆಯ ಕುರಿತಾದ 'ದಿ ಬೆಂಗಾಲ್ ಫೈಲ್ಸ್'ನಲ್ಲಿ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರಲು ಸಜ್ಜಾಗಿದೆ.
ಹಿಂಸಾಚಾರದ ಸಂದರ್ಭದಲ್ಲಿ ಗಲಭೆಕೋರರನ್ನು ಹಿಮ್ಮೆಟ್ಟಿಸಲು ಜನರನ್ನು ಸಜ್ಜುಗೊಳಿಸಿದ್ದ, ಮಾಂಸ ವ್ಯಾಪಾರಿ ಗೋಪಾಲ್ ಮುಖ್ಯೋಪಾಧ್ಯಾಯ ಅವರ ಪಾತ್ರಕ್ಕೆ ದಾಸ್ ಬಣ್ಣ ಹಚ್ಚಿದ್ದಾರೆ.
ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವನ್ನು ಪೊಲೀಸರು (ಆಗಸ್ಟ್ 16ರಂದು) ತಡೆದಿದ್ದರು. ಹಾಗಾಗಿ, ಕೊನೇ ಕ್ಷಣದಲ್ಲಿ ಕಾರ್ಯಕ್ರಮದ ಸ್ಥಳ ಬದಲಿಸಲಾಗಿತ್ತು.
ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಸಿನಿಮಾ ಕುರಿತು ಮಾತನಾಡಿರುವ ದಾಸ್, 'ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಬೇಕು. ಸಿನಿಮಾ ಬಗ್ಗೆ ಭಿನ್ನಾಭಿಪ್ರಾಯಗಳಿದ್ದರೆ ಅದನ್ನು ಟೀಕಿಸುವಷ್ಟು ಪ್ರಬುದ್ಧತೆ ಪ್ರೇಕ್ಷಕರಿಗಿದೆ. ಕಥೆ ಚೆನ್ನಾಗಿದ್ದರೆ ಮೆಚ್ಚುತ್ತಾರೆ. ಅವರಿಗೆ ಆ ಸ್ವಾತಂತ್ರ್ಯ ನೀಡಬೇಕು' ಎಂದು ಹೇಳಿದ್ದಾರೆ.
ನೈಜ ಘಟನೆಯಾಧಾರಿತ ಸಿನಿಮಾ ಇದಾಗಿರುವುದರಿಂದ ಮುಗಿದು ಹೋದದ್ದನ್ನೆಲ್ಲ ಮತ್ತೆ ಮುನ್ನಲೆಗೆ ತರುವ ಅಪಾಯವಿದೆಯೇ ಎಂಬ ಪ್ರಶ್ನೆಯನ್ನು ಅಲ್ಲಗಳೆದಿದ್ದಾರೆ.
'ಸ್ವಾತಂತ್ರ್ಯ ಮತ್ತು ದೇಶ ವಿಭಜನೆಯ ಬಗ್ಗೆ ನಮಗೆ ಗೊತ್ತಿಲ್ಲವೇ? ಅದಕ್ಕೇನು ಕಾರಣ ಎಂಬುದು ನಮಗೆ ತಿಳಿಯಬೇಕಲ್ಲವೇ? ಸಿನಿಮಾದಿಂದ ಅಂತಹ ಘಟನೆಗಳು (ಹಿಂಸಾಚಾರ) ಪುನರಾವರ್ತನೆಯಾಗುತ್ತವೆ ಎನ್ನಲಾಗದು. ಅಂತಹ ಪ್ರಕರಣಗಳನ್ನು ನಾವು ರಣಹದ್ದುಗಳಂತೆ ನೋಡುತ್ತೇವೆ ಎನಿಸುವುದಿಲ್ಲ. ಸತ್ಯಗಳನ್ನು ಅವು ಹೇಗಿವೆಯೇ ಹಾಗೆಯೇ ಒಪ್ಪಿಕೊಳ್ಳಬೇಕಿದೆ' ಎಂದು ಪ್ರತಿಪಾದಿಸಿದ್ದಾರೆ.
ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಕ್ಕೆ ಎದುರಾಗಿರುವ ಟೀಕೆಗಳಿಗೆ, 'ಯಾವುದೇ ನಟನನ್ನು ಆತ ತೆರೆ ಮೇಲೆ ನಿರ್ವಹಿಸಿದ ಪಾತ್ರಗಳಿಂದ ಅಳೆಯಬಾರದು' ಎಂದು ತಿರುಗೇಟು ನೀಡಿದ್ದಾರೆ.
'ನಾನು ಹಿಂದಿನ ಸಿನಿಮಾವೊಂದರಲ್ಲಿ ಸಣ್ಣ ಹುಡುಗಿಯನ್ನು ಕೊಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಹಾಗೆಂದ ಮಾತ್ರಕ್ಕೆ, ಜನರು ನನ್ನ ಸಿನಿಮಾಗಳನ್ನು ನೋಡುವುದನ್ನೇ ನಿಲ್ಲಿಸಬೇಕೇ? ಸಿನಿಮಾ ಸಮಾಜದ ಕನ್ನಡಿ. ನಕಾರಾತ್ಮಕ ಪಾತ್ರಗಳು ಇದ್ದೇ ಇರುತ್ತವೆ' ಎಂದು ಸಮರ್ಥಿಸಿಕೊಂಡಿದ್ದಾರೆ.
ಗೋಪಾಲ್ ಮುಖ್ಯೋಪಾಧ್ಯಾಯರ ಪಾತ್ರ ನಿಭಾಯಿಸಿರುವುದು 'ದೊಡ್ಡ ಜವಾಬ್ದಾರಿಯೇ ಸರಿ' ಎಂದೂ ಉಲ್ಲೇಖಿಸಿದ್ದಾರೆ.
ಈ ಸಿನಿಮಾದಲ್ಲಿ ಮಿಥುನ್ ಚಕ್ರವರ್ತಿ, ಅನುಪಮ್ ಖೇರ್, ದರ್ಶನ್ ಕುಮಾರ್, ಪಲ್ಲವಿ ಜೋಶಿ ಸೇರಿದಂತೆ ಹಲವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.