ADVERTISEMENT

ಅರ್ಧಶತಕದ ಹಾದಿಯಲ್ಲಿ ಚಿನ್ನಾರಿ ಮುತ್ತ...

ಶರತ್‌ ಹೆಗ್ಡೆ
Published 29 ಅಕ್ಟೋಬರ್ 2020, 19:30 IST
Last Updated 29 ಅಕ್ಟೋಬರ್ 2020, 19:30 IST
Vijay Raghavendra
Vijay Raghavendra   

‘ನಾನು ಕಹಿಯನ್ನಷ್ಟೇ ಮರೆಯುತ್ತೇನೆ. ನನ್ನ ಜೀವನಕ್ಕೆ ಯಾರು ಒಳ್ಳೆಯದನ್ನು ಉಂಟು ಮಾಡಿದ್ದಾರೋ ಅವರನ್ನು ಯಾವತ್ತೂ ಮರೆಯುವುದಿಲ್ಲ’

– ಐವತ್ತನೇ ಚಿತ್ರದ ಹೊಸ್ತಿಲಲ್ಲಿರುವ ವಿಜಯ್‌ ರಾಘವೇಂದ್ರ ತಮ್ಮ ಸಿನಿಪಯಣದ ಕಥನವನ್ನು ‘ಪ್ರಜಾಪ್ಲಸ್’‌ ಜತೆ ಹಂಚಿಕೊಂಡಿದ್ದು ಹೀಗೆ.

ಚಲಿಸುವ ಮೋಡಗಳು (1982) ಚಿತ್ರದ ಮೂಲಕ ಎರಡೂವರೆ ವರ್ಷ ವಯಸ್ಸಿನಲ್ಲೇ ಕ್ಯಾಮೆರಾ ಎದುರಿಸಿದ ವಿಜಯ್‌ ರಾಘವೇಂದ್ರ ಅವರು ಹೆಚ್ಚು ಗುರುತಿಸಿಕೊಂಡದ್ದು ‘ಚಿನ್ನಾರಿ ಮುತ್ತ’ದ ಚಿನ್ನಾರಿ ಮುತ್ತನಾಗಿ. ಚಿನ್ನಾರಿ ಮುತ್ತ ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿ ಕೂಡ ಬಂತು. ನಂತರ ಅವರು ಕೊಟ್ಟ ಸೂಪರ್‌ಹಿಟ್‌ ಚಿತ್ರ ‘ನಿನಗಾಗಿ’. ಆ ಬಳಿಕದ ಸಂಗತಿಗಳನ್ನು ಅವರ ಮಾತುಗಳಲ್ಲೇ ಕೇಳೋಣ.

ADVERTISEMENT

‘ಐವತ್ತು ಚಿತ್ರಗಳವರೆಗೆ ನನ್ನನ್ನು ಬೆಳೆಸಿದ ಚಿತ್ರರಂಗದ ಎಲ್ಲ ಜನರಿಗೆ, ಪ್ರೇಕ್ಷಕರಿಗೆ ಕೃತಜ್ಞತಾ ಪೂರ್ವಕವಾಗಿ ಈ ಸಿನಿ ಬದುಕಿನ ಪಯಣವನ್ನು ಅರ್ಪಿಸುತ್ತೇನೆ. ಮೊದಲ ಬಾರಿಗೆ ನಮ್ಮ ದೊಡ್ಡತ್ತೆ ಪಾರ್ವತಮ್ಮ ರಾಜ್‌ಕುಮಾರ್‌ ಅವರು ಚಲಿಸುವ ಮೋಡಗಳು ಸಿನಿಮಾದ ಮೂಲಕ ನಾನು ಎರಡೂವರೆ ವರ್ಷ ವಯಸ್ಸಿನವನಾಗಿದ್ದಾಗಲೇ ಕ್ಯಾಮೆರಾ ಪರಿಚಯ ಮಾಡಿಸಿದರು’ ಎಂದು ನೆನಪಿಸಿಕೊಳ್ಳುತ್ತಾರೆ ವಿಜಯ್‌ ರಾಘವೇಂದ್ರ.

‘ದೊರೆ ಭಗವಾನ್‌ ಅಂಕಲ್‌, ಚಿನ್ನಾರಿ ಮುತ್ತದಲ್ಲಿ ಅವಕಾಶ ಕೊಟ್ಟ ನಾಗಾಭರಣ ಅಂಕಲ್‌, ಕೊಲ್ಲೂರು ಶ್ರೀ ಮೂಕಾಂಬಿಕಾದಲ್ಲಿ ಅವಕಾಶ ಕೊಟ್ಟ ರೇಣುಕಾ ಶರ್ಮಾ, ನಾಗತಿಹಳ್ಳಿ ಚಂದ್ರಶೇಖರ್‌, ಜಿ.ವಿ. ಅಯ್ಯರ್‌, ಚಿಂದೋಡಿ ಬಂಗಾರೇಶ್, ನಿನಗಾಗಿ ಸಿನಿಮಾದಲ್ಲಿ ಅವಕಾಶ ಕೊಟ್ಟ ಎಸ್‌. ಮಹೇಂದರ್‌ ಹೀಗೆ ನನ್ನ ಸಾಧನೆಯ ಹಿಂದ ಅನೇಕರಿದ್ದಾರೆ’

‘ನನ್ನನ್ನು ಜನರು ಚಿನ್ನಾರಿ ಮುತ್ತ ಆಗಿ ಗುರುತಿಸಲು ನಾಗಾಭರಣ ಅವರು ಕಾರಣ. ಬಳಿಕ ನಾನು ಚೆನ್ನೈಗೆ ಹೋಗಿ ಅಭಿನಯ ಕೋರ್ಸ್‌ ಮುಗಿಸಿದ ಬಳಿಕ ನನಗೆ ದೊಡ್ಡ ಅವಕಾಶಗಳನ್ನು ಕೊಟ್ಟವರು ದೊರೆ ಭಗವಾನ್‌.ನನ್ನ ತಂದೆಯವರು ಮೌಲ್ಯಗಳನ್ನು ಹೇಳಿಕೊಟ್ಟು ಬೆಳೆಸಿದರು. ರಾಮೋಜಿರಾವ್, ಅಣ್ಣ ಪ್ರಕಾಶ್...‌ ಹೀಗೆ ಯಾರನ್ನೂ ಮರೆಯುವ ಹಾಗಿಲ್ಲ’

‘ನನಗೆ ಬ್ರೇಕ್‌ ಕೊಟ್ಟ ಸಿನಿಮಾ ‘ನಿನಗಾಗಿ’. ಏನೂ ಅಲ್ಲದವನನ್ನು ಸಿನಿಮಾ ಕ್ಷೇತ್ರಕ್ಕೆ ಪರಿಚಯಿಸಿದ ಸಿನಿಮಾ ಅದು. ಆದರೆ ಐವತ್ತು ಸಿನಿಮಾ ಆದರೂ ಕೂಡಾ ಇವತ್ತಿಗೂ ‘ನಿನಗಾಗಿ’ ಸಿನಿಮಾವನ್ನೇ ನೆನಪು ಮಾಡಿಕೊಂಡು ಗುರುತಿಸಿ ಮಾತನಾಡುತ್ತಾರೆ’.

‘ನಿನಗಾಗಿ’ ನೆನಪು

‘ನಿನಗಾಗಿ ಸಿನಿಮಾವನ್ನು ದಿನೇಶ್‌ ಬಾಬು ಅವರುರಾಮೋಜಿ ರಾವ್ ಅವರ ಉಷಾಕಿರಣ್‌‌ ಫಿಲ್ಮ್ಸ್ ಗಾಗಿ ನಿರ್ದೇಶನ ಮಾಡಬೇಕಿತ್ತು. ಮುಂದೆ ನಿನಗಾಗಿ ಸಿನಿಮಾ ಎಸ್‌.ಮಹೇಂದರ್‌ ಅವರ ಕೈಗೆ ಬಂದಿತು. ಅವರು ನಟರಿಗಾಗಿ ಹುಡುಕುತ್ತಿದ್ದಾಗ ನಿರ್ದೇಶಕ ಎಂ.ಎಸ್‌.ರಾಜಶೇಖರ್‌ ಅವರು ಈ ಚಿತ್ರಕ್ಕಾಗಿ ನನ್ನ ಹೆಸರನ್ನು ಶಿಫಾರಸು ಮಾಡಿದರು’ ಎಂದು ನೆನಪು ಮೆಲುಕು ಹಾಕಿದರು.

‘ಸ್ಕ್ರೀನ್‌ ಟೆಸ್ಟ್‌ಗೆ ಹೋದಾಗ ‘‘ಹೀರೋ ಮಾಡ್ತೀಯಾ ಅಥವಾಬೇರೆ ಪಾತ್ರ ಮಾಡುತ್ತೀಯಾ?’’ ಎಂದು ಕೇಳಿದರು. ನಾನು ಯಾವ ಪಾತ್ರಕ್ಕೂ ಸಿದ್ಧ ಎಂದೆ. ಕೊನೆಗೆ ‘ನಿನಗಾಗಿ’ಯ ನಾಯಕ ಪಾತ್ರ ನನಗೆ ಸಿಕ್ಕಿತು’ ಎಂದು ನೆನಪು ತೆರೆದಿಟ್ಟರು.

‘ನಿನಗಾಗಿ ಸಿನಿಮಾದಿಂದರೋಮಿಯೋ ಜೂಲಿಯಟ್‌ ಮಾಡುವವರೆಗೂ ಮೂರು ಚಿತ್ರಗಳಲ್ಲಿ ರಾಧಿಕಾ ಜತೆ ಸತತವಾಗಿ ನಟಿಸುವ ಅವಕಾಶ ಸಿಕ್ಕಿತು. ಹಾಗೆಯೇ ಶಿವಣ್ಣ (ಶಿವರಾಜ್‌ಕುಮಾರ್‌) ಅವರ ಜೊತೆ ಕೆಲಸ ಮಾಡುವುದೇ ಖುಷಿ’.

50ನೇ ಚಿತ್ರ

‘ಸೀತಾರಾಂ ಬಿನೋಯ್‌ ಕೇಸ್‌ ನಂಬರ್‌ 18’ ನನ್ನ ವೃತ್ತಿ ಬದುಕಿನ 50ನೇ ಚಿತ್ರ. ಇದು ಅಪರಾಧ ತನಿಖೆಯ ಕಥೆ. ಹೊಸ ತಂಡ ಅದು. ಹೊಸ ಕಥೆ ಇಷ್ಟವಾಯಿತು. ಅದರಲ್ಲಿ ಪೊಲೀಸ್‌ ಅಧಿಕಾರಿಯ ಪಾತ್ರ ನನ್ನದು. ಅಷ್ಟನ್ನೇ ಹೇಳಬಲ್ಲೆ’ ಎಂದರು.

ಮುಂದಿನ ಕನಸುಗಳು

‘ಒಳ್ಳೆಯನಿರ್ದೇಶನ ಮಾಡಬೇಕು. ಒಂದು ನಿರ್ಮಾಣ ಸಂಸ್ಥೆಯನ್ನು ಕಟ್ಟಬೇಕು ಎಂಬ ಆಸೆ ಇದೆ. ಹೊಸ ಪ್ರತಿಭೆಗಳಿಗಾಗಿ ಒಂದು ಸಿನಿಮಾ ತರಬೇತಿಯ ಸಂಸ್ಥೆ ಕಟ್ಟುವ ಕನಸೂ ಇದೆ’ ಎಂದು ಮಾತು ಮುಗಿಸಿದರು.

ಪೂರ್ಣ ಸಂದರ್ಶನ ಕೇಳಿ: ಕನ್ನಡ ಧ್ವನಿ ಪ್ರಜಾವಾಣಿ ಪಾಡ್‌ಕಾಸ್ಟ್‌ನಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.