ADVERTISEMENT

ಸಂದರ್ಶನ: ಮಂಸೋರೆಯ ವೇಗ; ಉದ್ವೇಗ

ಕೆ.ಎಚ್.ಓಬಳೇಶ್
Published 27 ಆಗಸ್ಟ್ 2020, 20:00 IST
Last Updated 27 ಆಗಸ್ಟ್ 2020, 20:00 IST
   

ಚಿತ್ರರಂಗಕ್ಕೆ ‘ಹರಿವು’ ಮತ್ತು ‘ನಾತಿಚರಾಮಿ’ಯಂತಹ ಭಿನ್ನ ಬಗೆಯ ಸಿನಿಮಾಗಳನ್ನು ನೀಡಿದ್ದು ನಿರ್ದೇಶಕ ಮಂಸೋರೆ ಅವರ ಹೆಗ್ಗಳಿಕೆ. ಈಗ ಅವರ ನಿರ್ದೇಶನದ ‘ಆ್ಯಕ್ಟ್‌ 1978’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿವೆ.

***

‘ನನ್ನ ಹಿಂದಿನ ‘ಹರಿವು’ ಮತ್ತು ‘ನಾತಿಚರಾಮಿ’ ಸಿನಿಮಾಗಳಿಗೂ ಮತ್ತು ‘ಆ್ಯಕ್ಟ್‌ 1978’ ಸಿನಿಮಾಕ್ಕೂ ಸಂಬಂಧವಿಲ್ಲ. ಆ ಎರಡೂ ಚಿತ್ರಗಳಲ್ಲಿ ಗಾಢ ಮೌನವಿತ್ತು. ಇದರಲ್ಲಿ ಕಥೆ ಹೇಳುವ ಶೈಲಿ ಸಂಪೂರ್ಣ ಬದಲಾಗಿದೆ. ಇಲ್ಲಿ ವೇಗವೂ ಇದೆ; ಉದ್ವೇಗವೂ ಇದೆ’

ADVERTISEMENT

–ಇಷ್ಟನ್ನು ಹೇಳಿ ತುಸು ಮೌನಕ್ಕೆ ಜಾರಿದರು ನಿರ್ದೇಶಕ ಮಂಸೋರೆ. ಅವರ ಉದ್ವೇಗಕ್ಕೆ ಕಾರಣವೂ ಇತ್ತು. ‘ಆ್ಯಕ್ಟ್‌ 1978’ ಸಿನಿಮಾಕ್ಕೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಯಾವುದೇ ಕಟ್‌, ಮ್ಯೂಟ್‌ ಇಲ್ಲದೆ ‘ಯು’ ಪ್ರಮಾಣ ಪತ್ರ ನೀಡಿದೆ. ಸಿನಿಮಾ ಬಿಡುಗಡೆಗೆ ಸಿದ್ಧವಾಗಿದ್ದು, ಚಿತ್ರಮಂದಿರಗಳ ಪುನರಾರಂಭಕ್ಕೆಅವರು ಎದುರು ನೋಡುತ್ತಿದ್ದಾರೆ.

‘ಮೊದಲ ಪ್ರತಿ ಸಿದ್ಧವಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು. ಚಿತ್ರ ಚೆನ್ನಾಗಿಯೇ ಬಂದಿದೆ. ಪ್ರೇಕ್ಷಕರು ಅದನ್ನು ನೋಡಿ ಹೇಳಬೇಕು’ ಎಂದು ಅವರು ಮಾತು ವಿಸ್ತರಿಸಿದರು.

ಈ ಚಿತ್ರದಲ್ಲಿ ಲೀಗಲ್‌ ವಿಷಯಗಳಿವೆ. ಹಾಗಾಗಿ, ವಕೀಲರಿಗೆ ಮಂಸೋರೆ ಈ ಸಿನಿಮಾ ತೋರಿಸಿದ್ದಾರಂತೆ. ಅವರಿಂದಲೂ ಹಸಿರು ನಿಶಾನೆ ಸಿಕ್ಕಿದೆ. ಹಾಗಾಗಿ, ಬಿಡುಗಡೆಗಾಗಿ ಅವರು ತಯಾರಿ ನಡೆಸಿದ್ದಾರೆ. ಈ ಕುರಿತು ಅವರೊಟ್ಟಿಗೆ ನಡೆಸಿದ ಮಾತುಕತೆ ಇಲ್ಲಿದೆ.

*‘ಆ್ಯಕ್ಟ್ 1978’ ಚಿತ್ರದ ಕಥೆ ಎಳೆ ಎಂತಹದ್ದು?
ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ದಿನದಲ್ಲಿ ನಡೆಯುವ ಕಥೆ ಇದು. ರಾಜಕೀಯ, ಅಧಿಕಾರಶಾಹಿ, ಸಾಮಾಜಿಕ ಸಮಸ್ಯೆ, ಅನ್ನದಾತರ ಸಮಸ್ಯೆ ಇದೆ. ಈ ಎಲ್ಲವೂ ಹದವಾಗಿ ಬೆರೆತಿವೆ. ಸಾಮಾನ್ಯ ವ್ಯಕ್ತಿಯ ಹೋರಾಟದ ಕಥಾನಕ ಇದಾಗಿದೆ. ಅದು ಯಾರ ವಿರುದ್ಧ ಹಾಗೂ ಏಕೆ ಎನ್ನುವುದೇ ಈ ಕಥೆಯ ಹೂರಣ. ಅದನ್ನು ಚಿತ್ರಮಂದಿರದಲ್ಲಿಯೇ ನೋಡಬೇಕು.

*ಪೋಸ್ಟರ್‌ನಲ್ಲಿ ನಟಿ ಯಜ್ಞಾ ಶೆಟ್ಟಿ ಅವರ ಕೈಗೆ ಗನ್‌ ಕೊಟ್ಟಿರುವ ಉದ್ದೇಶವಾದರೂ ಏನು?
ಚಿತ್ರದ ಪೋಸ್ಟರ್‌ನಲ್ಲಿ ‌ಹುಟ್ಟು ಇದೆ; ಮತ್ತೊಂದು ಕಡೆಯಲ್ಲಿ ಸಾವೂ ಇದೆ. ಆಕೆಯ ಗರ್ಭದಲ್ಲಿರುವ ಮಗು ಒಂದು ಹೊಸ ಹುಟ್ಟು. ಕೈಯಲ್ಲಿರುವ ಗನ್‌ ಮತ್ತು ಸೊಂಟಕ್ಕೆ ಕಟ್ಟಿರುವ ಬಾಂಬ್‌ ಹಿಂಸೆ, ಸಾವಿನ ದ್ಯೋತಕ. ಯಜ್ಞಾ ಸಾಮಾನ್ಯ ವ್ಯಕ್ತಿಯ ಪ್ರತಿನಿಧಿಯಾಗಿದ್ದಾರೆ. ಈ ಮೂರಕ್ಕೂ ಲಿಂಕ್‌ ಆಗಿರುವುದೇ ಚಿತ್ರದ ಕಥೆ. ಪೋಸ್ಟರ್‌ನಲ್ಲಿಯೇ ಒಂಚೂರು ಕಥೆ ಹೇಳಿದ್ದೇವೆ. ಗರ್ಭಿಣಿಯೊಬ್ಬಳು ಬಾಂಬ್‌ ಕಟ್ಟಿಕೊಂಡು ಹೋರಾಟಕ್ಕೆ ಬಂದಿದ್ದಾಳೆ ಎಂದರೆ ಅದು ಏತಕ್ಕೆ ಎಂಬುದೇ ಈ ಚಿತ್ರದ ಹೂರಣ.

*ಸಿನಿಮಾ ಬಿಡುಗಡೆ ಯಾವಾಗ?
ಸಿನಿಮಾದ ಮೊದಲ ಪ್ರತಿ ಸಿದ್ಧವಾಗಿದೆ. ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ. ಸೆಪ್ಟೆಂಬರ್‌ ಎರಡನೇ ವಾರದಲ್ಲಿ ಕರ್ನಾಟಕದಾದ್ಯಂತ ಚಿತ್ರಮಂದಿರಗಳು ಪುನರಾರಂಭವಾಗುತ್ತವೆ ಎಂಬ ಸುದ್ದಿಯಿದೆ. ಆದರೆ, ಅಧಿಕೃತವಾಗಿ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಥಿಯೇಟರ್‌ಗಳಲ್ಲಿ ಪ್ರದರ್ಶನ ಶುರುವಾದರೆ ಚಿತ್ರಮಂದಿರದಲ್ಲಿಯೇ ಸಿನಿಮಾ ಬಿಡುಗಡೆಗೆ ನಿರ್ಧರಿಸಿದ್ದೇವೆ. ಇಲ್ಲವಾದರೆ ಒಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಯತ್ನ ಮಾಡುತ್ತೇವೆ.

‘ಆ್ಯಕ್ಟ್‌ 1978’ ಸಿನಿಮಾದ ಪೋಸ್ಟರ್‌

*ಯಾವುದಾದರೂ ಒಟಿಟಿ ವೇದಿಕೆಯನ್ನು ಸಂಪರ್ಕಿಸಿದ್ದೀರಾ?
ಇನ್ನೂ ಅಂತಹ ಪ್ರಯತ್ನ ಮಾಡಿಲ್ಲ.ನನ್ನ ಸಿನಿಮಾದಲ್ಲಿ ಸ್ಟಾರ್ ನಟರು ಇಲ್ಲ. ಒಟಿಟಿಯಲ್ಲಿ ಬಿಡುಗಡೆಗೆ ಇದೇ ನಮಗೆ ದೊಡ್ಡ ಸಮಸ್ಯೆ. ಮತ್ತೊಂದೆಡೆಟಿ.ವಿಯವರು ನಮ್ಮ ಸಿನಿಮಾ ಖರೀದಿಸಲು ಮುಂದೆ ಬರುತ್ತಿಲ್ಲ. ಮೊದಲು ಬಿಡುಗಡೆ ಮಾಡಿ; ಅದರ ಯಶಸ್ಸಿನ ನಂತರ ಖರೀದಿಸುತ್ತೇವೆ ಎನ್ನುತ್ತಾರೆ. ಹಾಗಾಗಿ, ನಮ್ಮ ಮಿತಿಯಲ್ಲಿಯೇ ಹೋರಾಡಬೇಕಿದೆ. ಈ ಬಗ್ಗೆ ನಾನು ಯಾರನ್ನೂ ದೂಷಿಸಲು ಹೋಗುವುದಿಲ್ಲ. ಕನ್ನಡ ಸಿನಿಮಾಗಳ ಖರೀದಿಗೆ ಒಟಿಟಿಯವರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕೆ ಕಾರಣ ಏನೆಂಬುದು ನನಗೂ ಗೊತ್ತಿಲ್ಲ.ಸಿನಿಮಾವನ್ನು ಅವರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ. ಅವರು ಒಪ್ಪಿದರೆ ಒಟಿಟಿಯಲ್ಲಿ ಬಿಡುಗಡೆಗೆ ನಿರ್ಧರಿಸುತ್ತೇವೆ.

*ನಿಮ್ಮ ಹೊಸ ಪ್ರಾಜೆಕ್ಟ್‌ಗಳ ಬಗ್ಗೆ ಹೇಳಿ?
ಲಾಕ್‌ಡೌನ್‌ ಅವಧಿಯಲ್ಲಿ ಐದು ಕಥೆಗಳನ್ನು ಸಿದ್ಧಪಡಿಸಿಕೊಂಡು ನಿರ್ಮಾಪಕರಿಗೆ ಹೇಳುತ್ತಿದ್ದೇನೆ. ‘ಆ್ಯಕ್ಟ್‌ 1978’ ಬಿಡುಗಡೆಯಾದ ಬಳಿಕ ನಿರ್ಮಾಪಕರು ಸಿಗಬಹುದು ಎಂಬ ನಂಬಿಕೆಯಿದೆ. ಒಟ್ಟಾರೆ ಕಥೆಯ ಹಂದರ ಸಿದ್ಧವಾಗಿದೆ. ನಿರ್ಮಾಪಕರು ಮತ್ತು ಕಲಾವಿದರನ್ನು ನೋಡಿಕೊಂಡು ಸಂಭಾಷಣೆ ಬರೆಯಬೇಕು. ಹೀರೊಗೆ ಅಂತಾ ಕಥೆ ಬರೆಯೋದು ನನಗೆ ಕಷ್ಟ. ಸಾಮಾಜಿಕ ಸಮಸ್ಯೆ ಇಟ್ಟುಕೊಂಡು ಪೊಲಿಟಿಕಲ್‌ ಥ್ರಿಲ್ಲರ್ ಕಥೆ ಹೆಣೆದಿದ್ದೇನೆ. ನಿರ್ಮಾಪಕರು ಸಿಕ್ಕಿದ ತಕ್ಷಣ ಇದರ ಶೂಟಿಂಗ್‌ ಆರಂಭಿಸಲು ನಿರ್ಧರಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.