ADVERTISEMENT

ತಮಿಳುನಾಡು ಚಿತ್ರಮಂದಿರಗಳಲ್ಲಿ ‘ದಿ ಕೇರಳ ಸ್ಟೋರಿ‘ ಸಿನಿಮಾ ಪ್ರದರ್ಶನ ಸ್ಥಗಿತ!

ಪಿಟಿಐ
Published 8 ಮೇ 2023, 2:27 IST
Last Updated 8 ಮೇ 2023, 2:27 IST
‘ದಿ ಕೇರಳ ಸ್ಟೋರಿ’ ಚಿತ್ರದ ಪೋಸ್ಟರ್
‘ದಿ ಕೇರಳ ಸ್ಟೋರಿ’ ಚಿತ್ರದ ಪೋಸ್ಟರ್   

ತನ್ನ ಚಿತ್ರಕಥೆ ಮೂಲಕವೇ ಭಾರಿ ವಿವಾದಕ್ಕೊಳಗಾದ ‘ದಿ ಕೇರಳ ಸ್ಟೋರಿ‘ ಸಿನಿಮಾದ ಪ್ರದರ್ಶನವನ್ನು ತಮಿಳುನಾಡಿನಲ್ಲಿ ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ. ನೀರಸ ಪ್ರತಿಕ್ರಿಯೆ, ಪ್ರತಿಭಟನೆ ಮುಂತಾದ ಕಾರಣಗಳು ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

ಚಿತ್ರ ಪ್ರದರ್ಶನ ರದ್ದಾಗಿರುವುದರ ಬಗ್ಗೆ ಪತ್ರಕರ್ತ ಶ್ರೀಧರ್‌ ಪಿಳೈ ಎನ್ನುವವರು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ‘ಭಾನುವಾರದಂದು ‘ದಿ ಕೇರಳ ಸ್ಟೋರಿ ಸಿನಿಮಾ‘ದ ಟಿಕೆಟ್‌ ಬುಕ್‌ ಮಾಡಲು ಹೋದಾಗ ಮಲ್ಟಿಫೆಕ್ಸ್‌ಗಳಲ್ಲಿ ಚಿತ್ರ ಪ್ರದರ್ಶನ ರದ್ದಾಗಿರುವುದು ತಿಳಿದುಬಂದಿದೆ. ಕಾನೂನು ತೊಡಕು ಮತ್ತು ಸಿನಿಮಾ ಪ್ರದರ್ಶನದ ಬಗ್ಗೆ ನಿರಾಸಕ್ತಿ ಪ್ರದರ್ಶನ ರದ್ದತಿಗೆ ಕಾರಣವಾಗಿದೆ ಎಂದು ಮಲ್ಟಿಫ್ಲೆಕ್ಸ್‌ ಮಾಲೀಕರು ಹೇಳುತ್ತಿದ್ದಾರೆ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ತಮಿಳುನಾಡು ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಮಾಲೀಕರ ಸಂಘದ ಅಧ್ಯಕ್ಷ ತಿರುಪ್ಪೂರ್ ಸುಬ್ರಮಣ್ಯಂ, ‘ಪಿವಿಆರ್‌ನಂತಹ ಪ್ಯಾನ್‌ ಇಂಡಿಯಾ ಸಿನಿಮಾಗಳನ್ನು ಪ್ರದರ್ಶಿಸುವ ಚಿತ್ರಮಂದಿರಗಳು ಮಾತ್ರ ಸಿನಿಮಾ ಪ್ರದರ್ಶನಕ್ಕೆ ಮುಂದಾಗಿದ್ದವು. ಉಳಿದಂತೆ ಸ್ಥಳೀಯ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನಕ್ಕೆ ಒಲವು ತೋರಿಸಿರಲಿಲ್ಲ. ಜನಪ್ರಿಯ ತಾರೆ ಸಿನಿಮಾದಲ್ಲಿ ಇಲ್ಲದಿರುವುದೇ ಸ್ಥಳೀಯ ಚಿತ್ರಮಂದಿರಗಳ ನಿರಾಸಕ್ತಿಗೆ ಕಾರಣವಾಗಿದೆ‘ ಎಂದರು.

ADVERTISEMENT

‘ಕೊಯಮತ್ತೂರಿನ ಚಿತ್ರಮಂದಿರವೊಂದರಲ್ಲಿ ಈ ಸಿನಿಮಾ ಎರಡು ದಿನ ಪ್ರದರ್ಶನಗೊಂಡಿದ್ದು, ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿರಲಿಲ್ಲ. ಪ್ರತಿಭಟನೆ, ವಿವಾದ ಮತ್ತು ಪ್ರೇಕ್ಷಕರ ನೀರಸ ಪ್ರತಿಕ್ರಿಯೆ ನಡುವೆ ಚಿತ್ರಪ್ರದರ್ಶನ ರದ್ದತಿಗೆ ಮಾಲೀಕರು ಮುಂದಾಗಿದ್ದಾರೆ‘ ಎಂದು ಸುಬ್ರಮಣ್ಯಂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.