
ಸತೀಶ್ ನೀನಾಸಂ, ಸಪ್ತಮಿ ಗೌಡ ಮುಖ್ಯಭೂಮಿಕೆಯಲ್ಲಿರುವ ‘ದಿ ರೈಸ್ ಆಫ್ ಅಶೋಕ’ ಚಿತ್ರದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದೆ. ಕಳೆದ ಕೆಲ ತಿಂಗಳಿನಿಂದ ಚಿತ್ರದ ಪ್ರಚಾರ ಕಾರ್ಯ ಆರಂಭಿಸಿದ್ದ ತಂಡ, ಚಿತ್ರ ಬಿಡುಗಡೆ ದಿನಾಂಕವನ್ನು ತಿಳಿಸಿರಲಿಲ್ಲ. ಈ ಚಿತ್ರ 2022ರಲ್ಲಿ ಸೆಟ್ಟೇರಿತ್ತು. ಕೆಲವು ಅಡೆತಡೆಗಳನ್ನು ದಾಟಿ ಫೆಬ್ರುವರಿ 27ರಂದು ತೆರೆಗೆ ಬರುತ್ತಿದೆ.
ನಿರ್ದೇಶಕ ವಿನೋದ್ ದೋಂಡಾಳೆ ಅವರ ಅಕಾಲಿಕ ಸಾವಿನಿಂದ ಮನು ಶೆಡ್ಗಾರ್ ಚಿತ್ರವನ್ನು ಪೂರ್ಣಗೊಳಿಸಿದ್ದಾರೆ. ವೃದ್ಧಿ ಕ್ರಿಯೇಷನ್ ಹಾಗೂ ಸತೀಶ್ ಪಿಕ್ಚರ್ಸ್ ಹೌಸ್ ಪ್ರೊಡಕ್ಷನ್ ಅಡಿ ವರ್ಧನ್ ನರಹರಿ, ಜೈಷ್ಣವಿ ಜೊತೆ ಸೇರಿ ಸತೀಶ್ ನೀನಾಸಂ ಕೂಡಾ ಸಿನಿಮಾ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ.
70ರ ದಶಕದಲ್ಲಿ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ನಡೆಯುವ ಸಿನಿಮಾವಿದು. ಚಿತ್ರದಲ್ಲಿ ಸತೀಶ್ ನೀನಾಸಂ ಕ್ರಾಂತಿಕಾರಿ ಯುವಕನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುವ ಯುವಕನ ಬದುಕು ಹಾಗೂ ಸಂಘರ್ಷದ ಸುತ್ತಾ ಸಾಗುವ ಕಥೆ ಇದಾಗಿದೆ.
ದಯಾನಂದ್ ಟಿ.ಕೆ ಕಥೆ ಬರೆದಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಲವಿತ್ ಛಾಯಾಚಿತ್ರಗ್ರಹಣ, ಮನು ಶೆಡ್ಗಾರ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.