ಭೋಪಾಲ್: ಗೋಧ್ರಾ ರೈಲು ಹತ್ಯಾಕಾಂಡ ಕಥೆಯನ್ನಾಧರಿಸಿದ ‘ದಿ ಸಾಬರಮತಿ ರಿಪೋರ್ಟ್’ ಸಿನಿಮಾಕ್ಕೆ ಮಧ್ಯಪ್ರದೇಶ ಸರ್ಕಾರ ತೆರಿಗೆ ವಿನಾಯಿತಿ ನೀಡಿದೆ.
ಧೀರಜ್ ಸರ್ನಾ ನಿರ್ದೇಶನದ, ‘12th ಫೇಲ್’ ಖ್ಯಾತಿಯ ವಿಕ್ರಾಂತ್ ಮಾಸ್ಸಿ ನಟನೆಯ ಈ ಸಿನಿಮಾ ನವೆಂಬರ್ 15ರಂದು ದೇಶದಾದ್ಯಂತ ಬಿಡುಗಡೆಗೊಂಡಿತ್ತು.
‘ದಿ ಸಾಬರಮತಿ ರಿಪೋರ್ಟ್ ಒಂದು ಅತ್ಯುತ್ತಮ ಚಿತ್ರವಾಗಿದೆ. ನಾನು ಈ ಸಿನಿಮಾವನ್ನು ನೋಡಲು ಹೋಗುತ್ತಿದ್ದು, ನಮ್ಮ ಸರ್ಕಾರದ ಸಚಿವರು, ಶಾಸಕರು ಮತ್ತು ಸಂಸದರಿಗೂ ಸಿನಿಮಾ ನೋಡುವಂತೆ ಹೇಳಿದ್ದೇನೆ. ಸಿನಿಮಾ ಅತಿ ಹೆಚ್ಚು ಜನರನ್ನು ತಲುಪಲಿ ಎಂಬ ಉದ್ದೇಶದಿಂದ ಈ ಸಿನಿಮಾಕ್ಕೆ ರಾಜ್ಯದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ’ ಎಂದು ಸುದ್ದಿಗಾರರಿಗೆ ಮುಖ್ಯಮಂತ್ರಿ ಮೋಹನ್ ಯಾದವ್ ತಿಳಿಸಿದರು.
‘ಈ ಘಟನೆಯು (ಗೋಧ್ರಾ ರೈಲು ಹತ್ಯಾಕಾಂಡ) ಗತಕಾಲದ ಕರಾಳ ಅಧ್ಯಾಯವಾಗಿದ್ದು, ಈ ಚಿತ್ರದ ಮೂಲಕ ಸತ್ಯ ಹೊರಬೀಳಲಿದೆ’ ಎಂದು ಹೇಳಿದರು.
ಸೋಮವಾರ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಪೋಸ್ಟ್ ಮಾಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಸತ್ಯ ಹೊರಬರುತ್ತಿರುವುದು ಒಳ್ಳೆಯದು. ಅದರಲ್ಲೂ ಜನಸಾಮಾನ್ಯರು ಅದನ್ನು ನೋಡಲು ಸಾಧ್ಯವಾಗುತ್ತಿರುವುದು ಇನ್ನೂ ಒಳ್ಳೆಯದು. ಸುಳ್ಳು ಕತೆಗಳಿಗೆ ಆಯಸ್ಸು ಕಡಿಮೆ. ಕ್ರಮೇಣವಾಗಿ ಸತ್ಯ ಹೊರಬರಲೇಬೇಕು’ ಎಂದು ಹೇಳಿದ್ದರು.
ಗೋಧ್ರಾ ಹತ್ಯಾಕಾಂಡ
ಅಯೋಧ್ಯೆಯಿಂದ ಹಿಂತಿರುಗುತ್ತಿದ್ದ, ಕರಸೇವಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲಿಗೆ ಗುಜರಾತ್‌ನ ಗೋಧ್ರಾದಲ್ಲಿ 2002ರ ಫೆಬ್ರುವರಿ 27ರಂದು ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ 59 ಕರಸೇವಕರು ಮೃತಪಟ್ಟಿದ್ದರು. ಗೋಧ್ರಾದ ಈ ಘಟನೆಯು ರಾಜ್ಯದಲ್ಲಿ ಕೋಮು ಗಲಭೆಗೆ ಕಾರಣವಾಯಿತಲ್ಲದೇ, 1,200ಕ್ಕೂ ಹೆಚ್ಚು ಜನ ಕೊಲ್ಲಲ್ಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.