ADVERTISEMENT

ಕಾಲ್ತುಳಿತ ಪ್ರಕರಣ: ಪೊಲೀಸರ ಮುಂದೆ ಹಾಜರಾಗುವಂತೆ ನಟ ಅಲ್ಲು ಅರ್ಜುನ್‌ಗೆ ನೋಟಿಸ್‌

ಪಿಟಿಐ
Published 24 ಡಿಸೆಂಬರ್ 2024, 4:27 IST
Last Updated 24 ಡಿಸೆಂಬರ್ 2024, 4:27 IST
<div class="paragraphs"><p>ಅಲ್ಲು ಅರ್ಜುನ್</p></div>

ಅಲ್ಲು ಅರ್ಜುನ್

   

– ಪಿಟಿಐ ಚಿತ್ರ

ಹೈದರಾಬಾದ್: ಡಿಸೆಂಬರ್ 4 ರಂದು 'ಪುಷ್ಪ-2' ಚಿತ್ರದ ಪ್ರದರ್ಶನದ ವೇಳೆ ಸಂಭವಿಸಿದ್ದ ಕಾಲ್ತುಳಿತ ಪ್ರಕರಣದ ತನಿಖೆಯ ಭಾಗವಾಗಿ ನಟ ಅಲ್ಲು ಅರ್ಜುನ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ADVERTISEMENT

ಇಂದು (ಮಂಗಳವಾರ) ಬೆಳಿಗ್ಗೆ 11 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ತಿಳಿಸಲಾಗಿದೆ ಎಂದು ಚಿಕ್ಕಡಪಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ರಾಜು ನಾಯ್ಕ್ ತಿಳಿಸಿದ್ದಾರೆ.

‌ ‘ಪುಷ್ಟ–2’ ಸಿನಿಮಾದ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟಿರುವ ವಿಷಯವನ್ನು ನಟ ಅಲ್ಲು ಅರ್ಜುನ್ ಅವರಿಗೆ ಹೇಳಿದ್ದರೂ ಚಿತ್ರಮಂದಿರ ಬಿಟ್ಟು ಅವರು ತೆರಳಿರಲಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಭಾನುವಾರ ಹೇಳಿದ್ದಾರೆ.

2024ರ ವಾರ್ಷಿಕ ಸಮಗ್ರ ವರದಿ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಸಿ.ವಿ.ಆನಂದ್, ಕಾಲ್ತುಳಿತ ಸಂಭವಿಸಿದಾಗ ಉಂಟಾದ ಪರಿಸ್ಥಿತಿಯ ಕುರಿತು ಪೊಲೀಸರು ಮಾಡಿದ ವಿಡಿಯೊವನ್ನು ತೋರಿಸಿದ್ದಾರೆ.

ಸುದ್ದಿ ವಾಹಿನಿ ಮತ್ತು ಮೊಬೈಲ್‌ ಫೋನ್‌ಗಳ ‌ದೃಶ್ಯಗಳನ್ನು ಒಟ್ಟುಗೂಡಿಸಿ ಮಾಡಿದ ವಿಡಿಯೊ ಇದಾಗಿದ್ದು, ಅಲ್ಲು ಅರ್ಜುನ್ ಅವರು ಮಧ್ಯರಾತ್ರಿಯವರೆಗೂ ಚಿತ್ರಮಂದಿರದಲ್ಲಿಯೇ ಇರುವುದು ವಿಡಿಯೊದಲ್ಲಿ ಕಾಣಬಹುದು. ವಿಡಿಯೊವನ್ನು ಬಿಡುಗಡೆ ಮಾಡಿದ ಒಂದು ದಿನದ ನಂತರ ಅಲ್ಲು ಅರ್ಜುನ್‌ಗೆ ನೋಟಿಸ್‌ ನೀಡಲಾಗಿದೆ.

ಪ್ರಕರಣದ ಹಿನ್ನೆಲೆ:

ಡಿ.4ರಂದು ಪುಷ್ಪ–2 ಪ್ರೀಮಿಯರ್‌ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆಕೆಯ ಪುತ್ರ ಗಾಯಗೊಂಡಿದ್ದರು. ಹೈದರಾಬಾದ್‌ನಲ್ಲಿರುವ ಸಂಧ್ಯಾ ಚಿತ್ರಮಂದಿರದಲ್ಲಿ ಘಟನೆ ನಡೆದಿತ್ತು. ಈ ಸಂಬಂಧ ಮೃತ ಮಹಿಳೆಯ ಕುಟುಂಬ ಸದಸ್ಯರು ಡಿ.5 ರಂದು ಚಿತ್ರಮಂದಿರದ ಆಡಳಿತ ಮಂಡಳಿ, ಅಲ್ಲು ಅರ್ಜುನ್‌ ಹಾಗೂ ಅವರ ಭದ್ರತಾ ತಂಡದ ವಿರುದ್ಧ ಚಿಕ್ಕಡಪಲ್ಲಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

‌ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಂ 11 ಎಂದು ಹೆಸರಿಸಲಾದ ನಟ ಅಲ್ಲು ಅರ್ಜುನ್ ಅವರನ್ನು ಡಿಸೆಂಬರ್ 13 ರಂದು ಪೊಲೀಸರು ಬಂಧಿಸಿದ್ದರು. ಬಳಿಕ ತೆಲಂಗಾಣ ಹೈಕೋರ್ಟ್ ಅದೇ ದಿನ ಸಂಜೆಯ ಹೊತ್ತಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಡಿಸೆಂಬರ್ 14ರ ಬೆಳಿಗ್ಗೆ ಅವರು ಜೈಲಿನಿಂದ ಬಿಡುಗಡೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.