ADVERTISEMENT

Tollywood Cinema Offer|ಅಯ್ಯೋ ಶಿವನೇ ಚಿತ್ರದ ನಟಿ ಮಲೈಕಾಗೆ ಟಾಲಿವುಡ್‌ ಆಹ್ವಾನ

ಅಭಿಲಾಷ್ ಪಿ.ಎಸ್‌.
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
   

ನಟ ಚಿಕ್ಕಣ್ಣ ನಟನೆಯ ‘ಉಪಾಧ್ಯಕ್ಷ’ ಸಿನಿಮಾ ಮೂಲಕ ಕಿರುತೆರೆಯಿಂದ ಚಂದನವನದ ಪಯಣ ಆರಂಭಿಸಿದ್ದ ನಟಿ ಮಲೈಕಾ ಟಿ. ವಸುಪಾಲ್ ನಟನೆಯ ‘ಕಲ್ಟ್‌’ ಬಿಡುಗಡೆಗೆ ಸಜ್ಜಾಗುತ್ತಿದೆ. ಸಿನಿಮಾದ ‘ಅಯ್ಯೋ ಶಿವನೇ’ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಸಿನಿಮಾದ ನಿರ್ದೇಶಕ ಅನಿಲ್ ಕುಮಾರ್ ಅವರೇ ಬರೆದಿರುವ ಈ ಹಾಡಿನಲ್ಲಿ ಝೈದ್‌ ಖಾನ್‌ ಹಾಗೂ ಮಲೈಕಾ ಹೆಜ್ಜೆ ಹಾಕಿದ್ದಾರೆ. ಸಿನಿಮಾ ಕುರಿತು ಮಲೈಕಾ ಮಾತಿಗಿಳಿದಾಗ... 

‘ಕಿರುತೆರೆಯಲ್ಲಿ ‘ಹಿಟ್ಲರ್‌ ಕಲ್ಯಾಣ’ ಎಂಬ ಧಾರಾವಹಿ ಬಳಿಕ ‘ಉಪಾಧ್ಯಕ್ಷ’ ಹಾಗೂ ನಟ ನಾಗಭೂಷಣ್‌ ನಟನೆಯ ‘ವಿದ್ಯಾಪತಿ’ ಸಿನಿಮಾದಲ್ಲಿ ನಟಿಸಿದೆ. ಮೊದಲೆರಡು ಪ್ರಾಜೆಕ್ಟ್‌ಗಳ ಅನುಭವ, ಕಲಿಸಿದ ಪಾಠದಲ್ಲೇ ಸಿನಿಪಯಣ ಮುಂದುವರಿದಿದೆ. ಶಿಸ್ತಿನ ವೃತ್ತಿಜೀವನ ನನ್ನದು. ಹೀಗಾಗಿ ಕಿರುತೆರೆಯಿಂದ ಬಂದ ನನಗೆ ಸಿನಿಮಾ ಪಯಣ ಸುಲಭವಾಯ್ತು’ ಎಂದು ಮಾತು ಆರಂಭಿಸಿದ ಮಲೈಕಾ ‘ಕಲ್ಟ್‌’ ಸಿನಿಮಾದತ್ತ ಮಾತು ಹೊರಳಿಸಿದರು.    

‘ಈ ಸಿನಿಮಾದ ಕಥೆ ಕೇಳಲು ನಿರ್ದೇಶಕರಾದ ಅನಿಲ್‌ ಕುಮಾರ್‌ ಅವರು ಕರೆದ ಸಂದರ್ಭದಲ್ಲಿ ಝೈದ್‌ ಖಾನ್‌ ಅವರ ಪಾತ್ರದ ಪೋಸ್ಟರ್‌ ರಿಲೀಸ್‌ ಆಗಿತ್ತು. ಈ ಪೋಸ್ಟರ್‌ ನೋಡಿ ಈ ಸಿನಿಮಾ ಮಾಡಬೇಕೇ ಬೇಡವೇ ಎಂಬ ಗೊಂದಲ ಮೂಡಿತ್ತು. ನಾನು ಈ ಸಿನಿಮಾದಲ್ಲಿ ನಟಿಸಬೇಕೇ ಎನ್ನುವ ಪ್ರಶ್ನೆಯನ್ನು ಪೋಸ್ಟರ್‌ ಹುಟ್ಟುಹಾಕಿತ್ತು. ನನ್ನ ಪಾತ್ರವನ್ನು ಹೇಗೆ ಬರೆದಿರುತ್ತಾರೆ ಎನ್ನುವ ಕುತೂಹಲವೂ ಇತ್ತು. ಸಿನಿಮಾದ ಕಥೆ ಕೇಳಿದ ಬಳಿಕ ಪಾತ್ರವನ್ನು ಮೆಚ್ಚಿಕೊಂಡೆ, ಒಪ್ಪಿಕೊಂಡೆ. ವಾವ್‌ ಎನ್ನುವಂಥ ಕಥೆ ಸಿನಿಮಾದಲ್ಲಿಲ್ಲ. ಸರಳವಾದ ಕಥೆ ಇಲ್ಲಿದ್ದು ಪಾತ್ರಗಳ ಬರವಣಿಗೆ, ಅವುಗಳ ಸಂಭಾಷಣೆ ಹಾಗೂ ಜೋಡಿಸಿರುವ ರೀತಿ, ನಟನೆಯೇ ಸಿನಿಮಾಗೆ ಆಧಾರ’ ಎಂದರು ಮಲೈಕಾ. 

ADVERTISEMENT

‘ನನ್ನ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಪಾತ್ರದ ಬರವಣಿಗೆ ಬಹಳ ಭಿನ್ನವಾಗಿದೆ. ‘ವಿದ್ಯಾಪತಿ’ಯಲ್ಲಿ ಓರ್ವ ಸೂಪರ್‌ಸ್ಟಾರ್‌ ಆಗಿ ಕಾಣಿಸಿಕೊಂಡಿದ್ದೆ. ಇದು ಗ್ಲ್ಯಾಮರಸ್‌ ಪಾತ್ರವಾಗಿತ್ತು. ‘ಉಪಾಧ್ಯಕ್ಷ’ ಸಿನಿಮಾದಲ್ಲಿ 18 ವರ್ಷದ ಯುವತಿಯ ಪಾತ್ರ ಮಾಡಿದ್ದೆ. ಈ ಪಾತ್ರದ ನಟನೆಗೆ ಹೆಚ್ಚಿನ ಶ್ರಮ ಹಾಕಿರಲಿಲ್ಲ. ಆದರೆ ‘ಕಲ್ಟ್‌’ನಲ್ಲಿ ನನ್ನ ನಟನೆಯ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ದೊರೆಯಿತು. ಎರಡು ಶೇಡ್‌ಗಳಲ್ಲಿ ನನ್ನ ಪಾತ್ರವಿದೆ. ಇದರಲ್ಲಿ ಒಂದು ಶೇಡ್‌ ನನ್ನ ವ್ಯಕ್ತಿತ್ವಕ್ಕೆ ತದ್ವಿರುದ್ಧವಾಗಿದ್ದು, ಇದನ್ನು ನಿಭಾಯಿಸುವುದು ಸವಾಲೇ ಆಗಿತ್ತು’ ಎನ್ನುತ್ತಾರೆ. 

‘ಅಯ್ಯೋ ಶಿವನೇ’ ಬಿಡುಗಡೆ ಬಳಿಕ ನನ್ನ ಹಾಗೂ ಝೈದ್‌ ಖಾನ್‌ ಜೋಡಿಯನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದಾರೆ. ಸಚಿವರ ಮಗನಾದರೂ ಝೈದ್‌ ಬಹಳ ಸರಳ. ನಟನೆಯಲ್ಲಿ ಪಳಗಿದ್ದಾರೆ. ರಚಿತಾ ರಾಮ್‌ ಅವರು ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡರೆ ಝೈದ್‌ ಅವರ ಪಾತ್ರಕ್ಕೆ ಮೂರು ಶೇಡ್‌ಗಳಿವೆ’ ಎಂದರು ಮಲೈಕಾ. 

ಎಸ್.ಕೆ. ಬಾಹುಬಲಿ ನಿರ್ದೇಶನದ ಕೃಷ್ಣ ಅಜಯ್ ರಾವ್ ನಟನೆಯ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಇದರ ಜೊತೆಗೆ ಮತ್ತೊಂದು ಕನ್ನಡ ಸಿನಿಮಾದ ಮಾತುಕತೆ ನಡೆಯುತ್ತಿದೆ.
ಮಲೈಕಾ ಟಿ.ವಸುಪಾಲ್‌

ಜಸ್ಕರಣ್‌ ದನಿಯಲ್ಲಿ ಹಾಡು

‘ಕಲ್ಟ್‌’ ಸಿನಿಮಾದ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ‘ದ್ವಾಪರ..’ ಖ್ಯಾತಿಯ ಜಸ್ಕರಣ್ ಸಿಂಗ್ ಹಾಗೂ ಪೃಥ್ವಿ ಭಟ್ ಹಾಡಿದ್ದಾರೆ.
 ಕೆ.ವಿ.ಎನ್ ಪ್ರೊಡಕ್ಷನ್ಸ್ ಅರ್ಪಿಸಿರುವ ಈ ಸಿನಿಮಾವನ್ನು ಲೋಕಿ ಸಿನಿಮಾಸ್ ನಿರ್ಮಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.