ADVERTISEMENT

PV Web Exclusive: ಸ್ಥಳೀಯ ಭಾಷೆ, ನಮ್ಮದೇ ವೇದಿಕೆ, ಜಾಗತಿಕ ವ್ಯಾಪ್ತಿ

ಪ್ರಾದೇಶಿಕ, ಸ್ಥಳೀಯ ಭಾಷೆಗಳಲ್ಲಿ ಭಾರತೀಯ ಒಟಿಟಿ ವೇದಿಕೆಗಳು

ಶರತ್‌ ಹೆಗ್ಡೆ
Published 14 ಫೆಬ್ರುವರಿ 2021, 9:08 IST
Last Updated 14 ಫೆಬ್ರುವರಿ 2021, 9:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೋವಿಡ್‌ ಸಂಕಷ್ಟದ ಕಾಲಘಟ್ಟವನ್ನು ಬುದ್ಧಿವಂತಿಕೆಯಿಂದ ಚೆನ್ನಾಗಿ ಬಳಸಿಕೊಂಡವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದವರು, ಆನ್‌ಲೈನ್‌ ಮನೋರಂಜನಾ ವೇದಿಕೆಯವರು. ಅದುವರೆಗೆ ಕೇವಲ ನೆಟ್‌ಫ್ಲಿಕ್ಸ್‌ ಮತ್ತು ಅಮೆಝಾನ್‌ ಪ್ರೈಮ್‌ ವಿಡಿಯೋದಂತಹ ಜಾಗತಿಕ ವಿಡಿಯೋ ಆನ್‌ ಡಿಮಾಂಡ್‌ ಆನ್‌ಲೈನ್‌ ವೇದಿಕೆಗಳಿದ್ದವು. ಕ್ರಮೇಣ ಝೀ5, ಡಿಸ್ನಿ ಹಾಟ್‌ಸ್ಟಾರ್‌ ಕೂಡಾ ಈ ಕ್ಷೇತ್ರಕ್ಕೆ ಕಾಲಿಟ್ಟವು.

ಇದೆಲ್ಲಾ ಸರಿ ಈ ವೇದಿಕೆಗಳು ಜಾಗತಿಕ ಬೇಡಿಕೆಯುಳ್ಳ ಭಾಷೆಗಳ ವಿಷಯ (ಕಂಟೆಂಟ್‌) ಪ್ರಸಾರಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದವು. ಪ್ರಾದೇಶಿಕ ಭಾಷಾ ಸಿನಿಮಾಗಳು, ವೆಬ್‌ ಸರಣಿ, ರಂಗ ಪ್ರದರ್ಶನಗಳನ್ನು ಕಾಣಬೇಕಾದರೆ ಕಾರ್ಯಕ್ರಮ/ ಸಿನಿಮಾ ನಿರ್ಮಾಪಕರು ಕಾಯಬೇಕಿತ್ತು. ಸಿನಿಮಾಗಳಿಗೆ ಈ ಜಾಗತಿಕ ವೇದಿಕೆಗಳು ತೆರೆದಿರುತ್ತಿದ್ದವಾದರೂ ವೆಬ್‌ಸರಣಿ, ಕಿರುಚಿತ್ರ, ನಾಟಕಗಳಿಗೆ ಸರಿಯಾದ ಒಟಿಟಿ ವೇದಿಕೆಗಳೇ ಇರಲಿಲ್ಲ. ಇದನ್ನು ಮನಗಂಡವರು ಬಂಗಾಳಿಗಳು, ಮರಾಠಿ ಮತ್ತು ತೆಲುಗು ಹಿರಿತೆರೆ, ಕಿರುತೆರೆಯ ಜನ. ಈಗ ಕನ್ನಡದವರೂ ಇದ್ದಾರೆ.

ಭಾರತದಲ್ಲಿ ಪ್ರಾದೇಶಿಕ ಭಾಷಾ ವಿಷಯಗಳಿಗೆ ಜನ ಮೊದಲ ಆದ್ಯತೆ ಕೊಡುತ್ತಾರೆ. ಇದರಲ್ಲಿ ಮುಂಚೂಣಿಯಲ್ಲಿರುವವರು ತಮಿಳು ಮತ್ತು ಬಂಗಾಳಿ ಪ್ರೇಕ್ಷಕರು. ಯುಟ್ಯೂಬ್‌ನಲ್ಲಿ ಸಾಕಷ್ಟು ವಿಡಿಯೋಗಳನ್ನು ಹರಿಯಬಿಡಬಹುದಾದರೂ ನಿರ್ಮಾಪಕನಿಗೆ ಅದರಿಂದ ತನ್ನ ವೆಚ್ಚ ಹಿಂದಿರುಗುವ ಖಾತ್ರಿ ಇಲ್ಲ. ಪೂರ್ಣ ಉಚಿತ ವೇದಿಕೆ ಇದು. ಪದೇ ಪದೇ ಕಾಣಿಸುವ ಜಾಹೀರಾತುಗಳಿಂದಾಗಿ ವೀಕ್ಷಕ ಪೂರ್ಣ ವೀಕ್ಷಣೆಯಿಂದ ಹಿಂದಕ್ಕೆ ಸರಿಯುತ್ತಾನೆ. ಇಲ್ಲಿಯೂ ಜಾಹೀರಾತುರಹಿತ ವೀಕ್ಷಣೆಗೆ ಅವಕಾಶ ಇದೆಯಾದರೂ ಅದನ್ನು ಆಯ್ಕೆ ಮಾಡಿಕೊಂಡವರ ಪ್ರಮಾಣ ತೀರಾ ಕಡಿಮೆ.

ADVERTISEMENT

ಅವಶ್ಯಕತೆಯೇ ಆವಿಷ್ಕಾರದ ತಾಯಿ. ಜಾಗತಿಕ ಒಟಿಟಿ ವೇದಿಕೆಗಳಲ್ಲಿರುವ ಈ ಖಾಲಿ ಜಾಗವನ್ನು ತುಂಬಲು ಭಾರತೀಯ ನಿರ್ಮಾಪಕರು ಹಣ ಹೂಡಿದ್ದಾರೆ. ಕೆಲವು ಉದಾಹರಣೆಗಳು ಹೀಗಿವೆ.

ಪ್ಲಾನೆಟ್‌ ಮರಾಠಿ: ಮರಾಠಿ ಚಿತ್ರ ನಿರ್ಮಾಪಕ ಅಕ್ಷಯ್‌ ಬರ್ಡಾಪುರ್‌ಕರ್‌ ಅವರು ಪ್ಲಾನೆಟ್‌ ಮರಾಠಿ ಎಂಬ ಒಟಿಟಿ ವೇದಿಕೆಯನ್ನು ರೂಪಿಸಿದ್ದಾರೆ. ಸುಮಾರು 50 ಸಾವಿರ ಗಂಟೆಗಳಿಗೂ ಅಧಿಕ ಮನೋರಂಜನಾ ವಿಷಯಗಳು ಇದರಲ್ಲಿವೆ. ಮರಾಠಿ ಚಿತ್ರಗಳು, ಕರಾವೋಕೆ ಹಾಡುಗಳು, ನಾಟಕಗಳು, ಹಲವು ಬಗೆಯ ಶೋಗಳು ಈ ವೇದಿಕೆಯಲ್ಲಿ ಇವೆ.

ಹೋಯ್‌ಚೋಯ್‌: ಇದು ದೇಶದ ಪ್ರಾದೇಶಿಕ ಭಾಷೆಯ ಮೊದಲ ಒಟಿಟಿ ತಾಣ. 2017ರಲ್ಲಿ ಆರಂಭಗೊಂಡಿತು. ಇದು ಜಗತ್ತಿನಲ್ಲಿ ಬಂಗಾಳಿ ಭಾಷೆ ಮಾತನಾಡುವ 26 ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ. ಸುಮಾರು 600ಕ್ಕೂ ಅಧಿಕ ಚಿತ್ರಗಳು, 3 ಸಾವಿರ ಗಂಟೆಗಳಷ್ಟು ವಿವಿಧ ಕಾರ್ಯಕ್ರಮಗಳು ಈ ವೇದಿಕೆಯಲ್ಲಿ ಇವೆ. 13 ಕೋಟಿ ಬಳಕೆದಾರರನ್ನು ಈ ವೇದಿಕೆ ಹೊಂದಿದೆ. ಎಸ್‌ವಿಎಫ್‌ ಸ್ಟುಡಿಯೋ ಈ ವೇದಿಕೆಯನ್ನು ರೂಪಿಸಿದೆ. ಪ್ರಾದೇಶಿಕ ಭಾಷಾ ವೇದಿಕೆಗಳ ಪೈಕಿ ಅತಿ ಹೆಚ್ಚು ಬಳಕೆಯಲ್ಲಿರುವ ವೇದಿಕೆ ಇದು.

ಕೋವಿಡ್‌ ಲಾಕ್‌ಡೌನ್‌ ಅವಧಿಯಲ್ಲಂತೂ ಇದರ ಬಳಕೆ ಮೂರರಿಂದ ನಾಲ್ಕು ಪಟ್ಟು ಹೆಚ್ಚಿತ್ತು ಎನ್ನುತ್ತವೆ ಒಟಿಟಿ ವೇದಿಕೆಗಳ ವಿಶ್ಲೇಷಣಾ ಸಮೀಕ್ಷೆ.

ಸನ್‌ ನೆಕ್ಸ್ಟ್‌: ದಕ್ಷಿಣಭಾರತದ ಬೃಹತ್‌ ಮಾಧ್ಯಮ ಪ್ರಸಾರ ಸಂಸ್ಥೆ ಸನ್‌ಟಿವಿ ನೆಟ್‌ವರ್ಕ್‌ ಪ್ರಾದೇಶಿಕ ಭಾಷಾ ಒಟಿಟಿ ವೇದಿಕೆಯನ್ನು 2017ರಲ್ಲೇ ಸ್ಥಾಪಿಸಿದೆ. ಇದರ ಭಂಡಾರದಲ್ಲಿ ಸುಮಾರು 4 ಸಾವಿರ ಚಲನಚಿತ್ರಗಳು, 40ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳು ಈ ವೇದಿಕೆ ಮೂಲಕ ಪ್ರಸಾರವಾಗುತ್ತಿವೆ. ಎರಡೂವರೆ ಕೋಟಿಗೂ ಅಧಿಕ ಬಳಕೆದಾರರು ಈ ವೇದಿಕೆಗೆ ಇದ್ದಾರೆ. ತಮಿಳು, ತೆಲುಗು, ಮಲೆಯಾಳಂ ಮತ್ತು ಕನ್ನಡ ಭಾಷಾ ವಿಷಯಗಳನ್ನು ಈ ವೇದಿಕೆ ಪ್ರಸಾರ ಮಾಡುತ್ತದೆ.

ಸನ್‌ನೆಕ್ಸ್ಟ್‌ನ ವಿಷಯಗಳನ್ನು ಜಿಯೋಟಿವಿ, ಏರ್‌ಟೆಲ್‌ ಎಕ್ಸ್‌ಟ್ರೀಮ್‌, ವಿಐ (ವೊಡಾಫೋನ್‌ ಐಡಿಯಾ ಮೂವೀಸ್‌) ಆ್ಯಪ್‌ಗಳ ಮೂಲಕವೂ ನೋಡಬಹುದು.

ಆಹಾ (ತೆಲುಗು): ತೆಲುಗಿನಲ್ಲಿ ಸದ್ಯಕ್ಕಿರುವ ಏಕೈಕ ಒಟಿಟಿ ವೇದಿಕೆ ‘ಆಹಾ’. ಈ ಸೌಲಭ್ಯವನ್ನು ಆರ್ಹ ಮೀಡಿಯಾ ಆ್ಯಂಡ್‌ ಬ್ರಾಡ್‌ಕಾಸ್ಟಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ ಒದಗಿಸಿದೆ. ತೆಲುಗು ನಟ ಅಲ್ಲು ಅರ್ಜುನ್‌ ಇದರ ಪ್ರವರ್ತಕರು. ಸುಮಾರು 1.8 ಕೋಟಿ ಬಳಕೆದಾರರು ಇದ್ದಾರೆ. ತೆಲುಗು ಚಿತ್ರಗಳು, ಜಾಗತಿಕ ಡಿಜಿಟಲ್‌ ಪ್ರೀಮಿಯರ್‌ ಶೋಗಳು, ವೆಬ್‌ ಸರಣಿಗಳು, ಟಾಕ್‌ ಶೋ ಪ್ರಸಾರ ಮಾಡುತ್ತಿದೆ. ಆಯ್ದ ಚಿತ್ರಗಳನ್ನು ಉಚಿತವಾಗಿ ನೀಡುತ್ತಿದೆ.

ಕೂಡೆ: ಇದು ಮಲೆಯಾಳಂ ವಿಷಯಗಳ ಪ್ರಸಾರದ ಆನ್‌ಲೈನ್‌ ವೇದಿಕೆ. ಕಳೆದ ಡಿಸೆಂಬರ್‌ನಲ್ಲಿ ಆರಂಭವಾಗಿದೆ. ಯುಟ್ಯೂಬ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುವ ವಿಷಯಗಳನ್ನೂ ಹಾಗೂ ಅಲ್ಲಿ ಕಾರ್ಯಕ್ರಮ ರೂಪಿಸುತ್ತಿರುವವರನ್ನೂ ಈ ವೇದಿಕೆ ಒಳಗೊಂಡಿದೆ. ಮುಂದೆ ಪ್ರತಿ ವಿಡಿಯೋಗೆ ಇಂತಿಷ್ಟು (Pay Per Video) ಎಂದು ಹಣ ಪಾವತಿಸಿ ವೀಕ್ಷಿಸುವ ಸೌಲಭ್ಯವನ್ನೂ ಈ ವೇದಿಕೆ ಒದಗಿಸಲಿದೆ. ಜಾಗತಿಕವಾಗಿ ಹರಡಿರುವ ಮಲೆಯಾಳಿ ಭಾಷಿಗರನ್ನು ತಲುಪುವ ಗುರಿ ಹೊಂದಿದೆ. ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಕೂಡೆ ಆ್ಯಪ್‌ಗೆ 5ರಲ್ಲಿ 4.9 ಸ್ಟಾರ್‌ ರೇಟಿಂಗ್‌ ಇದೆ.

ಅಡ್ಡಾಟೈಮ್ಸ್‌: ಬಂಗಾಳಿ ವಿಷಯಗಳಿಗಾಗಿ 2016ರಲ್ಲಿ ಆರಂಭವಾಗಿದ್ದೇ ಅಡ್ಡಾಟೈಮ್ಸ್‌. ಇಲ್ಲಿಯೂ ವೆಬ್‌ ಸರಣಿಗಳು, ಕಿರುಚಿತ್ರಗಳು, ಸಂಗೀತ ವಿಡಿಯೋಗಳು, ಪತ್ತೆದಾರಿ ಥ್ರಿಲ್ಲರ್‌ಗಳು, ಅಡುಗೆ ಶೋಗಳು, ಕ್ರೀಡಾ ಪ್ರಸಾರ ಇದೆ. ಸದ್ಯ ಬಂಗಾಳದಲ್ಲಿ ಮಾತ್ರ ಲಭ್ಯ ಇದೆ. ಈ ವರ್ಷಾಂತ್ಯಕ್ಕೆ ಎರಡೂವರೆ ಕೋಟಿ ಜನರನ್ನು ತಲುಪುವ ಗುರಿ ಹೊಂದಿದೆ.

ಸಿಟಿಶೋರ್‌.ಟವಿ: ಗುಜರಾತಿ ಭಾಷೆಯ ಒಟಿಟಿ ವೇದಿಕೆ ಸಿಟಿ ಶೋರ್‌.ಟಿವಿ. 2020ರ ಅಕ್ಟೋಬರ್‌ನಲ್ಲಿ ಆರಂಭವಾಯಿತು. ಅಹಮದಾಬಾದ್‌ನ ‘ಸಿಟಿಶೋರ್‌ ಡಾಟ್‌ ಕಾಂ’ ಲೈಫ್‌ಸ್ಟೈಲ್‌ ಮೀಡಿಯಾ ಕಂಪನಿ ಈ ವೇದಿಕೆಯ ಪ್ರವರ್ತಕರು. ಗುಜರಾತಿ ಚಿತ್ರಗಳು, ಕಿರುಚಿತ್ರಗಳು ಪ್ರಸಾರವಾಗುತ್ತಿವೆ. ಸದ್ಯ ಇದು ಉಚಿತವಾಗಿ ಲಭ್ಯವಿದೆ.

ಟಾಕೀಸ್‌: ಒಟಿಟಿ ವೇದಿಕೆಯಲ್ಲಿ ಕನ್ನಡ ಹಾಗೂ ಕನ್ನಡ ನಾಡಿನ ಪ್ರಾದೇಶಿಕ ಭಾಷೆಗಳ ಪ್ರಸಾರಕ್ಕೆ ಕನ್ನಡಿಗರೇ ಸೇರಿಕೊಂಡು ರೂಪಿಸಿದ ವೇದಿಕೆ ಇದು. ಸ್ವಯಂ ಪ್ರಭಾ ಎಂಟರ್‌ಟೈನ್‌ಮೆಂಟ್‌ ಆ್ಯಂಡ್‌ ಪ್ರೊಡಕ್ಷನ್ಸ್‌ ‘ಟಾಕೀಸ್‌’ ಆ್ಯಪ್‌ನ ಪ್ರವರ್ತಕ ಸಂಸ್ಥೆ. 2020ರ ವರ್ಷಾಂತ್ಯದಲ್ಲಿ ಬಂದ ಈ ಆ್ಯಪ್‌ ಕನ್ನಡ ಹಾಗೂ ಕನ್ನಡದ ಉಪಭಾಷೆಗಳಾದ ತುಳು, ಕೊಂಕಣಿ, ಬ್ಯಾರಿ ಭಾಷೆಗಳ ವಿಷಯ ಪ್ರಸಾರ ಮಾಡುತ್ತಿದೆ.

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿರ್ಮಾಣವಾಗುವ ನಾಟಕ, ಯಕ್ಷಗಾನ, ತುಳು– ಕೊಂಕಣಿ ಚಿತ್ರಗಳು ಇದರಲ್ಲಿ ಪ್ರಸಾರವಾಗುತ್ತಿವೆ. ಈಗ ಖ್ಯಾತ ತುಳು ನಾಟಕಗಳು ಯುಟ್ಯೂಬ್‌ನಲ್ಲಿ ಪ್ರಸಾರವಾಗುತ್ತಿಲ್ಲ. ಕೇವಲ ಟೀಸರ್‌, ಟ್ರೈಲರ್‌ಗಳಷ್ಟೆ ಪ್ರಸಾರವಾಗುತ್ತಿವೆ. ಪೂರ್ಣ ನಾಟಕ ವೀಕ್ಷಿಸಲು ಟಾಕೀಸ್‌ ಆ್ಯಪ್‌ಗೆ ಭೇಟಿ ನೀಡಬೇಕು. ತುಳು ವೆಬ್‌ ಸಿರೀಸ್‌ ‘ಗುಲಾಬ್‌ ಜಾಮೂನ್‌’ ಪ್ರಾದೇಶಿಕ ಭಾಷಾ ವರ್ಗದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟಿತ್ತು. ₹199ರಿಂದ ಟಾಕೀಸ್‌ ಆ್ಯಪ್‌ನ ಚಂದಾದಾರಿಕೆ ಆರಂಭವಾಗುತ್ತಿದೆ. ಸಂಕಷ್ಟದ ಕಾಲವನ್ನು ಒಳ್ಳೆಯ ಅವಕಾಶವನ್ನಾಗಿ ಮಾರ್ಪಡಿಸಿಕೊಳ್ಳುವುದು ಬುದ್ಧಿವಂತಿಕೆ. ಅದನ್ನು ಡಿಜಿಟಲ್‌ ಜಗತ್ತು ಅದ್ಭುತವಾಗಿ ಬಳಸಿಕೊಂಡಿದೆ.

ಡಿಜಿಟಲ್‌ ಮಾರುಕಟ್ಟೆ ಸಂಸ್ಥೆ ಡಬ್ಲ್ಯುಎಟಿ ಕನ್ಸಲ್ಟ್‌ನ ಮಾಹಿತಿ ಪ್ರಕಾರ ಕಳೆದ ವರ್ಷಾಂತ್ಯದ ವೇಳೆಗೆ ಶೇ 70ಕ್ಕೂ ಅಧಿಕ ಭಾರತೀಯರು ಆಯಾ ಪ್ರಾದೇಶಿಕ ಭಾಷೆಯಲ್ಲೇ ಇಂಟರ್‌ನೆಟ್‌ ವೇದಿಕೆಗಳ ಸೌಲಭ್ಯ ಪಡೆದಿದ್ದಾರೆ ಎಂದು ಅಂದಾಜಿಸಿತ್ತು. ಮನೋರಂಜನೆ, ಶಿಕ್ಷಣ, ಆಹಾರ (ಅಡುಗೆ ಶೋ) ತಯಾರಿ ಇತ್ಯಾದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲೇ ನೀಡಿದರೆ ಅದು ಹೆಚ್ಚು ಜನರನ್ನು ತಲುಪುತ್ತದೆ ಎಂಬುದೂ ಅಧ್ಯಯನಗಳಿಂದ ಗೊತ್ತಾಗಿತ್ತು. ಜಾಗತಿಕ ಟಿವಿ ವಾಹಿನಿಗಳು ಪ್ರಾದೇಶಿಕ ಭಾಷೆಯಲ್ಲೂ ತಮ್ಮ ವಾಹಿನಿ ತೆರೆದ ಹಾಗೆಯೇ ಆನ್‌ಲೈನ್‌ ಒಟಿಟಿ ಕ್ಷೇತ್ರದಲ್ಲೂ ಪ್ರಾದೇಶಿಕ ವೇದಿಕೆಗಳ, ಸ್ಥಳೀಯ ಕಂಪನಿಗಳ ಪ್ರಾತಿನಿಧ್ಯ ಹೆಚ್ಚುತ್ತಿದೆ. ವೀಕ್ಷಕರ ಬೇಡಿಕೆಯೂ ಏರುತ್ತಿದೆ.

ವೀಕ್ಷಕನ ದೃಷ್ಟಿಯಿಂದ ಹೇಳುವುದಾದರೆ ಅಗ್ಗದ ಇಂಟರ್‌ನೆಟ್‌ ಇರುವಷ್ಟು ಕಾಲ ಒಂದೆರಡು ಸಿನಿಮಾಗಳನ್ನು ಥಿಯೇಟರ್‌ನಲ್ಲಿ ನೋಡುವ ವೆಚ್ಚದಲ್ಲಿ ಹತ್ತಾರು ವೈವಿಧ್ಯಮಯ ವಿಷಯಗಳನ್ನು ಕೆಲವೇ ನೂರು ರೂಪಾಯಿಗಳನ್ನು ವ್ಯಯಿಸಿದರೆ ಆರು ತಿಂಗಳು ಅಥವಾ ವರ್ಷಪೂರ್ತಿ, ತಮಗೆ ಬೇಕಾದ ಸಾಧನದಲ್ಲಿ (ಮೊಬೈಲ್‌, ಸ್ಮಾರ್ಟ್‌ಟಿವಿ/ ಹೋಂ ಥಿಯೇಟರ್, ಕಂಪ್ಯೂಟರ್‌) ಬೇಕಾದಷ್ಟು ಬಾರಿ ವೀಕ್ಷಿಸಬಹುದು. ಅಗ್ಗ ಮತ್ತು ಸುಲಭ ಲಭ್ಯತೆಯನ್ನೇ ಆಯ್ಕೆಯನ್ನಾಗಿಸುವ ಭಾರತೀಯ ಮನೋಸ್ಥಿತಿಗಳನ್ನೇ ಅರಿತು ಒಟಿಟಿ ವೇದಿಕೆಗಳು ಪ್ರಾದೇಶಿಕ ಮಟ್ಟಕ್ಕೆ ಬಂದು ಪೈಪೋಟಿಗೂ ನಿಂತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.