
ಹುಲಿ ಕಾರ್ತಿಕ್, ನಟ ದರ್ಶನ್
ಮಿಲನಾ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ಡೆವಿಲ್’ ಸಿನಿಮಾ ಇದೇ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಹೀಗಾಗಿ ಡೆವಿಲ್ ಚಿತ್ರದ ಪ್ರಮೋಷನ್ ಕೆಲಸಗಳು ಭರ್ಜರಿಯಾಗಿ ನಡೆಯುತ್ತಿವೆ. ಇತ್ತೀಚೆಗೆ ನಡೆದ ಡೆವಿಲ್ ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ನಟ ಹುಲಿ ಕಾರ್ತಿಕ್ ಅವರು ದರ್ಶನ್ ಅವರನ್ನು ನೆನೆದು ಕಣ್ಣೀರು ಹಾಕಿದ್ದಾರೆ.
‘ಡೆವಿಲ್ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿದರೂ ನನಗೆ ಅವರ ಜೊತೆಗೆ ಕುಳಿತುಕೊಂಡು ಸಿನಿಮಾ ನೋಡುವ ಅದೃಷ್ಟ ಇಲ್ಲ’ ಎಂದು ವೇದಿಕೆ ಮೇಲೆ ಹಾಸ್ಯ ಕಲಾವಿದ ಹುಲಿ ಕಾರ್ತಿಕ್ ಕಣ್ಣೀರಿಟ್ಟಿದ್ದಾರೆ.
‘ದರ್ಶನ್ ಸರ್ ಸಿನಿಮಾ ನೋಡೋದಕ್ಕೆ ಕಷ್ಟ ಪಡುತ್ತಿದ್ದೆ. ಆದರೆ ಈಗ ದರ್ಶನ್ ಸರ್ ಅವರ ಇಷ್ಟು ದೊಡ್ಡ ಸಿನಿಮಾದಲ್ಲಿ ನಟಿಸಿದ್ದೇನೆ ಅಂದರೆ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡಿಕೊಂಡು ಬಂದಿದ್ದೇನೆ ಎಂದರ್ಥ. ಇಷ್ಟು ದೊಡ್ಡ ಅವಕಾಶ ಮತ್ತೆ ನನ್ನ ಜೀವನದಲ್ಲಿ ಯಾವಾಗ ಬರುತ್ತದೆ ಎಂದು ಗೊತ್ತಿಲ್ಲ. ಅಷ್ಟು ದೊಡ್ಡ ಅವಕಾಶ ನನಗೆ ಸಿಕ್ಕಿದೆ. ಕರ್ನಾಟಕದಲ್ಲಿ ಕನ್ನಡದ ಫಲಕ ಹಾಕಿಲ್ಲ ಅಂದರೆ ನಮ್ಮ ರಕ್ತ ಕುದಿಯುತ್ತದೆ. ಆದರೆ ದರ್ಶನ್ ಸರ್ ಕನ್ನಡಕ್ಕಾಗಿ ಬದುಕುತ್ತಿದ್ದಾರೆ. ಅವರ ಸಿನಿಮಾ ಜಾಸ್ತಿ ಗಳಿಸಬೇಕು’.
‘ನಾನು ನತದೃಷ್ಟ ಕಲಾವಿದ ಅನಿಸುತ್ತದೆ, ಅವರ ಜೊತೆಗೆ ನಟಿಸಿದ ಎಲ್ಲರಿಗೂ ದರ್ಶನ್ ಸರ್ ಜತೆ ಕುಳಿತು ಸಿನಿಮಾ ನೋಡುವ ಅವಕಾಶ ಸಿಗುತ್ತದೆ. ಆದರೆ ನನಗೆ ಆ ಅದೃಷ್ಟ ಇಲ್ಲ. ಸಿನಿಮಾದಲ್ಲಿ ಅವಕಾಶ ಸಿಕ್ಕಿದರೂ ನನಗೆ ಅವರ ಜೊತೆಗೆ ಕುಳಿತುಕೊಂಡು ಸಿನಿಮಾ ನೋಡುವ ಅದೃಷ್ಟವಂತೂ ಇಲ್ಲ. ಎಲ್ಲರೂ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹೋಗಿ ನೋಡಿ’ ಎಂದು ಕಣ್ಣೀರಿಟ್ಟಿದ್ದಾರೆ.
‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’, ‘ಭರ್ಜರಿ ಬ್ಯಾಚುಲರ್ಸ್’ ಖ್ಯಾತಿಯ ಹುಲಿ ಕಾರ್ತಿಕ್ ‘ಡೆವಿಲ್’ ಸಿನಿಮಾದಲ್ಲಿ ಪ್ರಮುಖ ಪೋಷಕ ಪಾತ್ರದಲ್ಲಿ ನಟಿಸಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿಯ ಹುಡುಗ ಕಾರ್ತಿಕ್ ಮಜಾ ಭಾರತ, ಗಿಚ್ಚಿ ಗಿಲಿಗಿಲಿ ಕಾರ್ಯಕ್ರಮಗಳಲ್ಲಿ ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದರು. ಈಗ ಹುಲಿ ಕಾರ್ತಿಕ್ ಅವರಿಗೆ ಡೆವಿಲ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.