ADVERTISEMENT

ಉಣ್ಣಿ ಮುಕುಂದನ್‌ ಸಂದರ್ಶನ: ಅಪ್ಪು ಜೊತೆ ನಟಿಸುವಾಸೆ ಇತ್ತು ಎಂದ ಬಹುಭಾಷಾ ನಟ

ಸಂದರ್ಶನ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2022, 11:25 IST
Last Updated 9 ಮಾರ್ಚ್ 2022, 11:25 IST
ಉಣ್ಣಿ ಮುಕುಂದನ್‌
ಉಣ್ಣಿ ಮುಕುಂದನ್‌   

ಮಲಯಾಳಂ ಚಿತ್ರರಂಗದ ಬಹುಭಾಷಾ ನಟ ಉಣ್ಣಿ ಮುಕುಂದನ್‌ ನಟನೆಯ ‘ಮೇಪ್ಪಡಿಯಾನ್‌’ ಸದ್ಯ ಒಟಿಟಿ ವೇದಿಕೆಯಲ್ಲಿ ಸದ್ದು ಮಾಡುತ್ತಿದೆ. 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ಈ ಚಿತ್ರವು ಪ್ರದರ್ಶನಗೊಂಡಿದ್ದು, ಪ್ರೇಕ್ಷಕರನ್ನು ಸೆಳೆದಿದೆ. ಮಂಗಳವಾರ ಚಿತ್ರೋತ್ಸವಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ‘ಪ್ರಜಾವಾಣಿ’ ಜೊತೆಗೆ ಉಣ್ಣಿ ಮುಕುಂದನ್‌ ಮಾತಿಗಿಳಿದರು.

* ಸ್ಯಾಂಡಲ್‌ವುಡ್‌ನಲ್ಲಿ ಯಾವಾಗ ಕಾಣಿಸಿಕೊಳ್ಳುತ್ತೀರಿ?

ನನಗೆ ಕನ್ನಡ ಸಿನಿಮಾಗಳಲ್ಲೂ ನಟಿಸಬೇಕು ಎನ್ನುವ ಆಸೆ ಇದೆ. ಪ್ರತಿ ಪ್ರಾದೇಶಿಕ ಭಾಷೆಗಳಲ್ಲಿ ಕನಿಷ್ಠ ಒಂದು ಸಿನಿಮಾವನ್ನಾದರೂ ಮಾಡಬೇಕು ಎಂದುಕೊಂಡಿದ್ದೇನೆ. ಪುನೀತ್‌ ರಾಜ್‌ಕುಮಾರ್‌ ಅವರ ಬಗ್ಗೆ ಕೇಳಿದ್ದೆ ಅಷ್ಟೇ. ಆದರೆ ಅವರ ಮೇಲೆ ಜನರಿಟ್ಟಿರುವ ಪ್ರೀತಿಯನ್ನು ಕರ್ನಾಟಕಕ್ಕೆ ಬಂದ ಮೇಲೆ ನೋಡಿ ತಿಳಿದೆ. ಅವರ ಜೊತೆ ನಟಿಸಬೇಕು ಎನ್ನುವ ಆಸೆ ಇತ್ತು. ಆದರೆ ಅವರು ನಮ್ಮನ್ನು ಅಗಲಿರುವುದು ನನಗಾದ ನಷ್ಟ. ಚಿತ್ರರಂಗಕ್ಕೂ ದೊಡ್ಡ ನಷ್ಟ. ಯಶ್‌ ಅವರೂ ಅವರ ಕೆ.ಜಿ.ಎಫ್‌ ಸಿನಿಮಾವೂ ಇಷ್ಟ. ವೈಯಕ್ತಿಕವಾಗಿ ನಾನು ಅವರನ್ನು ಭೇಟಿಯಾಗಿಲ್ಲ ಆದರೆ ವ್ಯಕ್ತಿಯಾಗಿ ಅವರ ನಡವಳಿಕೆಯನ್ನು ಕಂಡಿದ್ದೇನೆ.

ADVERTISEMENT

* ಸರಳ ಕಥೆಯೇ ಮಲಯಾಳಂ ಸಿನಿಮಾದ ಜೀವವಾಗುತ್ತಿದೆ. ಈ ಬಗ್ಗೆ ಏನು ಹೇಳುತ್ತೀರಿ?

ನನ್ನ ಚಿತ್ರ ‘ಮೇಪ್ಪಡಿಯಾನ್‌’ ಚಿತ್ರವೂ ಬಹಳ ಸರಳ ಕಥೆಯ ಎಳೆ ಹೊಂದಿದೆ. ಸರಳ ಕಥೆಯೂ ಭರಪೂರ ಮನರಂಜನೆಯನ್ನು ಹೊಂದಿದೆ ಎನ್ನುವುದನ್ನು ಮಲಯಾಳಂ ಚಿತ್ರರಂಗ ಹಾಗೂ ಅಲ್ಲಿನ ತಂತ್ರಜ್ಞರು ಕಳೆದ ಕೆಲ ವರ್ಷಗಳಿಂದ ತೋರಿಸುತ್ತಿದ್ದಾರೆ. ‘ಮೇಪ್ಪಡಿಯಾನ್‌’ ಚಿತ್ರ ಥ್ರಿಲ್ಲರ್‌ ಕಥೆಯನ್ನು ಹೊಂದಿದೆ. ಆದರೆ ಇಲ್ಲಿ ಅಪರಾಧ, ಆ್ಯಕ್ಷನ್‌ ಇಲ್ಲ. ಈ ಅಂಶಗಳಿಲ್ಲದೇ ಸಿನಿಮಾ ಮಾಡುವುದು ಸಾಮರ್ಥ್ಯವನ್ನು ತೋರಿಸುತ್ತದೆ. ಮಲಯಾಳಂ ಚಿತ್ರರಂಗವು ತಮ್ಮ ಕಲಾವಿದರ, ತಂತ್ರಜ್ಞರ ಸಾಮರ್ಥ್ಯ, ಕೌಶಲವನ್ನೂ ಪೂರ್ಣವಾಗಿ ಬಳಸಿಕೊಳ್ಳುತ್ತಿದೆ. ನನ್ನ ಮುಂದಿನ ಸಿನಿಮಾ ‘ಶಫೀಕಿಂಡೆ ಸಂತೋಷಮ್‌’ ಕೂಡಾ ಇಂಥ ಸರಳ ಕಥೆಯನ್ನೇ ಹೊಂದಿದ್ದು, ಸಾಮಾನ್ಯ ವ್ಯಕ್ತಿಯೋರ್ವನ ಜೀವನ ಇಲ್ಲಿದೆ.

ಪ್ರತಿಯೊಬ್ಬರೂ ತಮ್ಮ ಸಿನಿಮಾಗಳಲ್ಲಿನ ವಿಷಯದ ಬಗ್ಗೆಯೇ ಹೆಚ್ಚು ಗಮನಹರಿಸುತ್ತಾರೆ. ಆದರೆ ಕೆಲವೊಮ್ಮೆ ಅದನ್ನು ಜನರೆದುರಿಗೆ ಪ್ರಸ್ತುತ ಪಡಿಸುವ ಸಂದರ್ಭದಲ್ಲಿ ಸೋಲುತ್ತಾರೆ. ಮಲಯಾಳಂ ಚಿತ್ರರಂಗವಷ್ಟೇ ಉತ್ತಮ ಚಿತ್ರಗಳನ್ನು ನೀಡುತ್ತಿದೆ ಎನ್ನುವುದಿಲ್ಲ. ಎಲ್ಲ ಚಿತ್ರರಂಗದವರೂ ತಮ್ಮೆಲ್ಲ ಸಾಮರ್ಥ್ಯವನ್ನು ಸಿನಿಮಾ ಮೇಲೆ ಹಾಕುತ್ತಾರೆ. ಆದರೆ ಮಲಯಾಳಂನಲ್ಲಿ ಸಾಲು ಸಾಲು ಉತ್ತಮ ಚಿತ್ರಗಳು ತೆರೆ ಕಾಣುತ್ತಿವೆ. ಇದು ಮಲಯಾಳಂ ಚಿತ್ರರಂಗಕ್ಕೆ ಸಿಕ್ಕಿದ ವರ ಎನ್ನಬಹುದಷ್ಟೇ. ತಮಿಳು, ತೆಲುಗು, ಅಸ್ಸಾಮಿ ಸೇರಿದಂತೆ ಹಲವು ಭಾಷೆಗಳಲ್ಲಿ ಅತ್ಯುತ್ತಮ ಸಿನಿಮಾಗಳು ಬರುತ್ತಿವೆ.

* ಒಟಿಟಿ ವೇದಿಕೆ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಸಿನಿಮಾವನ್ನು ಆನಂದಿಸಬೇಕು ಎಂದರೆ ಚಿತ್ರಮಂದಿರಗಳೇ ಬೇಕು. ಆದರೆ ಒಟಿಟಿ ಉತ್ತಮ ವೇದಿಕೆ. ಒಟಿಟಿಯಿಂದಾಗಿ ಮಲಯಾಳಂ ಸಿನಿಮಾಗಳು ಇದೀಗ ವಿಶ್ವಕ್ಕೆ ತಲುಪಿದೆ. ಹೆಚ್ಚಿನ ಪ್ರೇಕ್ಷಕರನ್ನು ತಲುಪಿದೆ. ‘ಮೇಪ್ಪಡಿಯಾನ್‌’ ಸಿನಿಮಾದ ಉದಾಹರಣೆಯನ್ನೇ ತೆಗೆದುಕೊಂಡರೆ, ಅಮೆಜಾನ್‌ನಲ್ಲಿ ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರಕ್ಕೆ ಸಿಕ್ಕಿದ ಮೆಚ್ಚುಗೆ ಕಂಡು ನನಗೇ ಆಶ್ಚರ್ಯವಾಯಿತು. ಒಟಿಟಿಯಿಂದಾಗಿ ಭಾಷೆಯ ಗಡಿಯನ್ನು ಮೀರಿ ಸಿನಿಮಾಗಳು ಪ್ರೇಕ್ಷಕರ ಎದುರಿಗೆ ನಿಂತಿವೆ. ಒಟಿಟಿಯಿಂದಾಗಿ ತಾವು ಕಾಣದೇ ಇರುವ ಪಾತ್ರಗಳನ್ನು ಜನರು ನೋಡಿದ್ದಾರೆ, ಅನುಭವಿಸಿದ್ದಾರೆ, ಜೀವಿಸಿದ್ದಾರೆ. ಒಟಿಟಿ ಜೊತೆಗೆ ಚಿತ್ರಮಂದಿರಗಳೂ ಬೇಡಿಕೆ ಉಳಿಸಿಕೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.