ವೆಟ್ರಿಮಾರನ್
‘ಜೈಲರ್’ ಸಿನಿಮಾ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಗೊತ್ತಲ್ಲ. ಅವರು ಸಿಲಂಬರಸನ್ ಅವರ ಸಂದರ್ಶನ ಮಾಡುವ ದೃಶ್ಯವೊಂದು ಈಗ ಓಡಾಡುತ್ತಿದೆ. ಅದರಲ್ಲಿ ಅವರು ಸಿಂಬು ಅರ್ಥಾತ್ ಸಿಲಂಬರಸನ್ ಅವರನ್ನು, ‘ನಿಮ್ಮ ಬಗ್ಗೆ ಸಿನಿಮಾ ಆದರೆ ಆ ಪಾತ್ರವನ್ನು ಯಾರು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ. ಆಗ ಸಿಂಬು, ‘ಧನುಷ್ ಮಾಡಿದರೆ ಚೆನ್ನಾಗಿರುತ್ತದೆ’ ಎನ್ನುತ್ತಾರೆ. ಇದು ‘ಅರಸನ್’ ತಮಿಳು ಸಿನಿಮಾ ಟ್ರೈಲರ್‌ನಲ್ಲಿನ ತುಣುಕು.
ಪಾತಕಲೋಕದ ವಸ್ತುವನ್ನು ಇಟ್ಟುಕೊಂಡು ನಿರ್ದೇಶಕ ವೆಟ್ರಿಮಾರನ್ ಏಳು ವರ್ಷಗಳ ಹಿಂದೆ ‘ವಡಾ ಚೆನ್ನೈ’ ಸಿನಿಮಾ ನಿರ್ದೇಶಿಸಿದ್ದರು. ಈಗ ಅದೇ ಶೈಲಿಯಲ್ಲಿ ‘ಅರಸನ್’ ಕಟ್ಟುತ್ತಿದ್ದಾರೆ. ಅದನ್ನು ಚಿತ್ರದ ಟ್ರೈಲರ್‌ನ ದೃಶ್ಯಗಳೇ ಸಾರಿವೆ. ‘ವಡಾ ಚೆನ್ನೈ’ನಲ್ಲಿ ಧನುಷ್ ಅಭಿನಯಿಸಿದ್ದರು. ಆ ಸಿನಿಮಾದ ಪಾತ್ರಕ್ಕೆ ಕನೆಕ್ಟ್ ಮಾಡುವ ಉದ್ದೇಶದಿಂದಲೇ ನೆಲ್ಸನ್ ಅವರಿಂದ ಸಿಂಬು ಸಂದರ್ಶನ ಮಾಡಿಸುವ ದೃಶ್ಯವೊಂದನ್ನು ಚಿತ್ರಕ್ಕೆ ಅಳವಡಿಸಿರುವುದು. ‘ವಿಡು ದಲೈ’ ತಮಿಳು ಚಿತ್ರವನ್ನು ಎರಡು ಭಾಗಗಳಲ್ಲಿ ನಿರ್ದೇಶಿಸಿದ್ದ ವೆಟ್ರಿಮಾರನ್, ಅವುಗಳಲ್ಲಿ ಸೋಲುಂಡಿದ್ದರು. ಹಾಕಿದ್ದ ಬಂಡವಾಳ ಸಲೀಸಾಗಿ ಮರಳಲಾರದಂತಹ ಪ್ರತಿಕ್ರಿಯೆ ಆ ಚಿತ್ರಗಳಿಗೆ ಪ್ರೇಕ್ಷಕರಿಂದ ಸಿಕ್ಕಿತ್ತಷ್ಟೆ.
‘ಅಸುರನ್’, ‘ವಡಾ ಚೆನ್ನೈ’ ಸಿನಿಮಾಗಳ ಗೆಲುವು ವೆಟ್ರಿಮಾರನ್ ಅವರಿಗೆ ಕೆಲವು ಪ್ರಯೋಗಗಳಿಗೆ ಕೈಹಾಕುವಷ್ಟು ಆತ್ಮವಿಶ್ವಾಸವನ್ನು ತಂದುಕೊಟ್ಟಿದ್ದವು. ಅದರ ಫಲವಾಗಿಯೇ ಅವರು ‘ವಿಡು ದಲೈ’ ತಯಾರಿಸಿದ್ದು. ಈಗ ಮತ್ತೆ ಅವರು ತಮ್ಮ ಹಳೆಯ ಶೈಲಿಗೆ ‘ಅರಸನ್’ ಮೂಲಕ ಮರಳುತ್ತಿದ್ದಾರೆ. ಸಿಂಬು ದ್ವಿಪಾತ್ರದಲ್ಲಿ ಅಭಿನಯಿಸಿರುವ ಚಿತ್ರವಿದು. ಒಂದು ಪಾತ್ರದಲ್ಲಿ ಅವರು ಯುವಕ. ಇನ್ನೊಂದರಲ್ಲಿ ಕೂದಲು ಕಣ್ಣಾಗಿರುವ ಹಳೆಯ ಡಾನ್.
ಇದೇ ಮೊದಲ ಬಾರಿಗೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರಿಂದ ತಮ್ಮ ಚಿತ್ರದ ಹಾಡುಗಳಿಗೆ ವೆಟ್ರಿಮಾರನ್ ಮಟ್ಟು ಹಾಕಿಸಲಿದ್ದಾರೆ. ಕೆವಿನ್ ಹಾಗೂ ಮಣಿಕಂಠನ್ ಕೂಡ ಚಿತ್ರದ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.