ADVERTISEMENT

ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ನಿಧನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜುಲೈ 2020, 2:33 IST
Last Updated 3 ಜುಲೈ 2020, 2:33 IST
ಸರೋಜ್ ಖಾನ್
ಸರೋಜ್ ಖಾನ್   

ಮುಂಬೈ: ಬಾಲಿವುಡ್‌ನ ಖ್ಯಾತ ನೃತ್ಯ ಸಂಯೋಜಕಿ ಸರೋಜ್ ಖಾನ್ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 72 ವರ್ಷ ವಯಸ್ಸಾಗಿತ್ತು.

ಹಲವಾರು ಕಾಯಿಲೆಗಳಿಂದ ಬಳಲುತ್ತಿದ್ದ ಅವರಿಗೆಉಸಿರಾಟ ತೊಂದರೆ ಕಾಣಿಸಿದ ಕಾರಣಜೂನ್ 20ರಂದು ಗುರುನಾನಕ್ಆಸ್ಪತ್ರೆಗೆ ದಾಖಲಿಸಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರುಹೃದಯ ಸ್ತಂಬನದಿಂದಮೃತಪಟ್ಟಿದ್ದಾರೆ. ಅವರಿಗೆ ಕೋವಿಡ್-19 ಸೋಂಕು ಇರಲಿಲ್ಲ.

ಮಲಾಡ್‌ ಮಾಲ್ವಾನಿಯಲ್ಲಿ ಇಂದು ಸಂಜೆ ಅಂತ್ಯ ಸಂಸ್ಕಾರ ನಡೆಯಲಿದೆ.

ADVERTISEMENT

ಬಾಲಿವುಡ್ ಸಿನಿಮಾ ರಂಗದಲ್ಲಿ ಮಾಸ್ಟರ್ ಜೀ ಎಂದೇ ಕರೆಯಲ್ಪಡುತ್ತಿದ್ದ ಸರೋಜ್ ಖಾನ್, 'ನಜರಾನಾ' ಸಿನಿಮಾದಲ್ಲಿ ಬಾಲನಟಿಯಾಗಿ ಸಿನಿಮಾ ರಂಗ ಪ್ರವೇಶಿಸಿದ್ದರು. ಆಗ ಅವರಿಗೆ 3 ವರ್ಷ. 1950ರಲ್ಲಿ ಅವರು ಸಿನಿಮಾಗಳಲ್ಲಿನ ನೃತ್ಯ ತಂಡಗಳಲ್ಲಿ ಸಹ ನರ್ತಕಿಯಾಗಿ ಕಾಣಿಸಿಕೊಂಡರು.

ನೃತ್ಯ ಸಂಯೋಜಕ ಬಿ.ಸೋಹನ್‌ಲಾಲ್ ಅವರೊಂದಿಗೆ ಕೆಲಸ ನಿರ್ವಹಿಸುತ್ತಾ ನೃತ್ಯ ಕಲಿತ ಖಾನ್ ಆಮೇಲೆ ನೃತ್ಯ ಸಂಯೋಜನೆಯಲ್ಲಿ ತೊಡಗಿಸಿಕೊಂಡರು. ಬಾಲಿವುಡ್‌ ನೃತ್ಯ ಸಂಯೋಜನೆಯಲ್ಲಿ ಗಂಡಸರೇ ಅಧಿಪತ್ಯ ಸ್ಥಾಪಿಸಿದ್ದ ಕಾಲದಲ್ಲಿಸಹ ನೃತ್ಯ ಸಂಯೋಜಕಿಯಾಗಿ ಕೆಲಸ ಮಾಡಿದ್ದ ಖಾನ್,ಆಮೇಲೆ ಗೀತಾ ಮೇರಾ ನಾಮ್ (1974) ಸಿನಿಮಾದಲ್ಲಿ ನೃತ್ಯ ಸಂಯೋಜನೆ ಮಾಡುವ ಮೂಲಕನೃತ್ಯ ಸಂಯೋಜಕಿ ಆದರು.

ನಟಿ ಶ್ರೀದೇವಿ ಅವರ ಸಿನಿಮಾಗಳಿಗೆ ನೃತ್ಯ ಸಂಯೋಜನೆ ಮಾಡಿದ ನಂತರವೇ ಖಾನ್ ಪ್ರತಿಭೆ ಪ್ರಸಿದ್ಧಿ ಪಡೆದದ್ದು. ಮಿಸ್ಟರ್ ಇಂಡಿಯಾ ಸಿನಿಮಾದ ಹವಾ ಹವಾಯೀ (1987), ನಗೀನಾ (1986), ಚಾಂದ್ನೀ (1989) ಸಿನಿಮಾದಲ್ಲಿ ಸರೋಜ್ ಖಾನ್ ನೃತ್ಯ ಸಂಯೋಜನೆ ಇದೆ. ಮಾಧುರಿ ದೀಕ್ಷಿತ್ ಅವರ ತೇಜಾಬ್ (1988) ಚಿತ್ರದಲ್ಲಿನ ಏಕ್ ದೋ ತೀನ್, ಥಾಣೇದಾರ್ (1990) ಸಿನಿಮಾದ ಟಮ್ಮಾ ಟಮ್ಮಾ ಲೋಗೇ, ಬೇಟಾ (1992) ಸಿನಿಮಾದ ಧಕ್ ಧಕ್ ಕರ್‌ನೇ ಲಗಾ ಹಾಡಿಗೆ ನೃತ್ಯ ಸಂಯೋಜಿಸಿದ್ದು ಇದೇ ಸರೋಜ್ ಖಾನ್.

2014ರಲ್ಲಿ ಖಾನ್ ಅವರು ಮಾಧುರಿ ದೀಕ್ಷಿತ್ ನಟನೆಯ ಗುಲಾಬ್ ಗ್ಯಾಂಗ್ ಸಿನಿಮಾಗೆ ನೃತ್ಯ ಸಂಯೋಜನೆ ಮಾಡಿದ್ದರು. ರಿಯಾಲಿಟಿ ಶೋಗಳಲ್ಲಿಯೂ ಇವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.

ಸುಮಾರು 2,000ಕ್ಕಿಂತಲೂ ಹೆಚ್ಚು ಹಾಡುಗಳಿಗೆ ನೃತ್ಯ ಸಂಯೋಜನೆ ಮಾಡಿದ್ದ ಸರೋಜ್ ಖಾನ್ ಅವರಿಗೆ ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.