ADVERTISEMENT

ಗಾಯನ ಕ್ಷೇತ್ರದ ದಿಗ್ಗಜ ಎಸ್‌. ಪಿ. ಬಾಲಸುಬ್ರಹ್ಮಣ್ಯಂ ನಿಧನ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 10:39 IST
Last Updated 25 ಸೆಪ್ಟೆಂಬರ್ 2020, 10:39 IST
ಎಸ್‌.ಪಿ ಬಾಲಸುಬ್ರಹ್ಮಣ್ಯಂ
ಎಸ್‌.ಪಿ ಬಾಲಸುಬ್ರಹ್ಮಣ್ಯಂ    

ಚೆನ್ನೈ: ಭಾರತೀಯ ಸಂಗೀತ ಕ್ಷೇತ್ರದ ದಿಗ್ಗಜ,ಖ್ಯಾತ ಗಾಯಕ ಎಸ್‌.ಪಿ ಬಾಲಸುಬ್ರಹ್ಮಣ್ಯಂ ಶುಕ್ರವಾರ ವಿಧಿವಶರಾಗಿದ್ದಾರೆ. ಎಸ್‌ಪಿಬಿ ನಿಧನರಾದ ವಿಚಾರವನ್ನು ಸ್ವತಃ ಅವರ ಪುತ್ರ ಎಸ್‌ಪಿ ಚರಣ್‌ ಸ್ಪಷ್ಟಪಡಿಸಿದ್ದಾರೆ.

ಮಧ್ಯಾಹ್ನ 1.04 ಗಂಟೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾಗಿ ಚರಣ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ADVERTISEMENT

ಕೊರೊನಾ ವೈರಸ್‌ ಸೋಂಕಿತರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಇದೇ ಕಾರಣದಿಂದ ಅವರು ಶುಕ್ರವಾರ ಇಹಲೋಕ ತ್ಯಜಿಸಿದ್ದಾರೆ.

ಅವರಆರೋಗ್ಯ ಕ್ಷೀಣಿಸುತ್ತಿದ್ದ ಹಿನ್ನೆಲೆಯಲ್ಲಿ ಹೆಚ್ಚುವರಿ ಆಕ್ಸಿಜನ್ ಪೂರೈಸಲು ಇಸಿಎಂಒ ಸಾಧನ ಅಳವಡಿಸಿ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿಚಿಕಿತ್ಸೆ ನೀಡಲಾಗುತ್ತಿತ್ತು.

ಎಸ್‌ಪಿಬಿ ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿದ ಪ್ರತಿಯೊಬ್ಬರಿಗೂ ಚರಣ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಸ್‌ಪಿಬಿ ಪತ್ನಿ ಸಾವಿತ್ರಿ, ಪುತ್ರ ಚರಣ್‌, ಪುತ್ರಿ ಪಲ್ಲವಿ ಅವರನ್ನು ಅಗಲಿದ್ದಾರೆ.

ಆ. 5ರಂದು ಎಸ್‌ಪಿಬಿ ಅವರಿಗೆ ಕೊರೊನಾ ಸೋಂಕು ಇರುವುದು ತಿಳಿದಿತ್ತು. ಕಡಿಮೆ ಪ್ರಮಾಣದ ಲಕ್ಷಣಗಳು, ಕೆಮ್ಮು ಮತ್ತು ಕೆಮ್ಮು ಇರುವುದಾಗಿ ಅವರು ವಿಡಿಯೊ ಮಾಡಿ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ್ದರು. ಆದರೆ, ನಂತರದ ದಿನಗಳಲ್ಲಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಅವರ ಶ್ವಾಸಕೋಶಕ್ಕೆ ಗಂಭೀರ ಪ್ರಮಾಣದ ಹಾನಿಯುಂಟಾಗಿತ್ತು. ಇದೆಲ್ಲದರ ಮಧ್ಯೆಯೂ ಅವರು ಗುಣಮುಖರಾಗುತ್ತಿರುವ ಸುದ್ದಿ ಹೊರಬಿದ್ದಿತ್ತಾದರೂ, ಕೊನೆಗೆ ಅವರ ಆರೋಗ್ಯ ಮತ್ತಷ್ಟು ವಿಷಮಗೊಂಡಿತ್ತು.

ಎಸ್‌ಪಿಬಿ ಶೀಘ್ರ ಗುಣಮುಖರಾಗಲೆಂದು ಅಸಂಖ್ಯ ಅಭಿಮಾನಿಗಳು ಪೂಜೆ, ಪ್ರಾರ್ಥನೆಗಳಲ್ಲಿ ತೊಡಗಿದ್ದರು. ಆದರೆ, ಅದ್ಯಾವುದೂ ಫಲಿಸದೇ, ಶುಕ್ರವಾರ (ಸೆ.25) ಮಧ್ಯಾಹ್ನ ಅವರು ಎಲ್ಲರಿಂದ ದೂರ ಹೋಗಿದ್ದಾರೆ.

ಗಾಯನ ನಟನೆ ಎರಡರಲ್ಲೂ ಗೆಲುವು

ಹಿರಿಯ ಗಾಯಕ ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂಅವರ ಗಾಯನ ಮೋಡಿಗೆ ಮಾರುಹೋಗದ ಸಂಗೀತ ರಸಿಕರೇ ಇಲ್ಲ. ಹಾಗೆಯೇ ಅವರ ಅಭಿನಯಕ್ಕೂ ಮರುಳಾಗದ ಕಲಾಭಿಮಾನಿಗಳಿಲ್ಲ. ಕನ್ನಡ, ಹಿಂದಿ, ತೆಲುಗು, ತಮಿಳು.. ಹೀಗೆ ಹಲವು ಭಾಷೆಗಳಲ್ಲಿ ಸಾವಿರಾರು ಸಿನಿಮಾ ಹಾಡುಗಳಿಗೆ ಕಂಠವಾಗಿರುವಎಸ್‌ಪಿಬಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಪೋಷಕ ನಟನಾಗಿಯೂ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಧೀರ ಶಂಕರಾಭರಣ 29ನೇ ಮೇಳಕರ್ತ ರಾಗ. ಸಂಪೂರ್ಣ ಸ್ವರಸಮೂಹಗಳನ್ನು ಹೊಂದಿರುವ ಈ ರಾಗ ಹಾಡಲು ಪ್ರೌಢಿಮೆ, ಸ್ವರ, ಲಯ, ತಾಳ, ಸ್ಥಾಯಿ, ನಡೆ ಮುಂತಾದ ಸಂಗೀತದ ಎಲ್ಲ ಜ್ಞಾನವೂ ಬೇಕು. ಈ ರಾಗವನ್ನು ಶಾಸ್ತ್ರೀಯ ಸಂಗೀತ ಕಲಿಯದೇ ಇದ್ದರೂಎಸ್‌.ಪಿ.ಬಾಲಸುಬ್ರಹ್ಮಣ್ಯಂಅವರು 80ರ ದಶಕದಲ್ಲಿ ಹಾಡಿದ್ದರು. ರಾಗದ ಛಾಯೆ ಹಾಗೂ ಲಕ್ಷಣಕ್ಕೆ ಕೊಂಚವೂ ಧಕ್ಕೆಯಾಗದಂತೆ ಹಾಡಿ ಒಬ್ಬ ಅಪ್ರತಿಮ ‘ಶಾಸ್ತ್ರೀಯ ಗಾಯಕ’ ಎಂಬುದನ್ನೂ ಸಾಬೀತುಪಡಿಸಿದರು.

ಇನ್ನಷ್ಟು ಓದು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.