ADVERTISEMENT

ಲಾಕ್‌ಡೌನ್‌ ವೇಳೆ ಯಾಮಿ ಗೌತಮ್‌ಗೆ ‘ವೀರ್ಯಾಣು ದಾನ’ ಸಿನಿಮಾ ನೆನಪಾಗಿದ್ದು ಯಾಕೆ?

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2020, 11:01 IST
Last Updated 21 ಏಪ್ರಿಲ್ 2020, 11:01 IST
ಯಾಮಿ ಗೌತಮ್‌
ಯಾಮಿ ಗೌತಮ್‌   
""
""

ಲಾಕ್‌ಡೌನ್‌ ವೇಳೆ ಯಾಮಿ ಗೌತಮ್‌ಗೆ ‘ವೀರ್ಯಾಣು ದಾನ’ ಸಿನಿಮಾ ಮತ್ತೆ ನೆನಪಾಗಿದ್ದು ಯಾಕೆ?

ಗಣೇಶ್‌ ನಾಯಕರಾಗಿದ್ದ ‘ಉಲ್ಲಾಸ ಉತ್ಸಾಹ’ ಚಿತ್ರದ ಮೂಲಕವೇ ನಟಿ ಯಾಮಿ ಗೌತಮ್ ಬೆಳ್ಳಿತೆರೆ ಪ್ರವೇಶಿಸಿದ್ದು. ಅದಾದ ಬಳಿಕ ಆಕೆ ಪಂಜಾಬಿ, ಹಿಂದಿ, ತೆಲುಗು, ತಮಿಳು, ಮರಾಠಿ ಚಿತ್ರಗಳಲ್ಲೂ ನಟಿಸಿ ಪ್ರೇಕ್ಷಕರಿಂದ ಸೈ ಎನಿಸಿಕೊಂಡರು. ಕಳೆದ ವರ್ಷ ತೆರೆಕಂಡ ‘ಉರಿ: ದಿ ಸರ್ಜಿಕಲ್‌ ಸ್ಟ್ರೈಕ್‌’ ಚಿತ್ರದಲ್ಲಿನ ಆಕೆ ನಟನೆ ಸಿನಿಪ್ರಿಯರ ಮೆಚ್ಚುಗೆಗಳಿಸಿತ್ತು.

ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ ನಟಿಸಿದ ಮೊದಲ ಚಿತ್ರ ‘ವಿಕ್ಕಿ ಡೊನರ್’ ಚಿತ್ರಕ್ಕೂ ಯಾಮಿ ಗೌತಮ್‌ ಅವರೇ ನಾಯಕಿಯಾಗಿದ್ದರು. ಶೂಜಿತ್ ಸಿರ್ಕಾರ್ ನಿರ್ದೇಶಿಸಿದ್ದ ಈ ಚಿತ್ರ ತೆರೆಕಂಡು ಎಂಟು ವರ್ಷ ಸಂದಿವೆ. ಬಾಕ್ಸ್‌ಆಫೀಸ್‌ನಲ್ಲಿ ಒಳ್ಳೆಯ ಕಲೆಕ್ಷನ್‌ ಕಂಡಿದ್ದ ಈ ಚಿತ್ರ ಆಯುಷ್ಮಾನ್‌ ಖುರಾನಾ ಮತ್ತು ಆಕೆಯ ವೃತ್ತಿಬದುಕಿಗೆ ಹೊರ ತಿರುವು ನೀಡಿತ್ತು. ಇಬ್ಬರಿಗೂ ಬಾಲಿವುಡ್‌ನಲ್ಲಿ ಭದ್ರನೆಲೆ ಒದಗಿಸಿತು.

ADVERTISEMENT

ತನ್ನ ಮೊದಲ ಹಿಂದಿ ಸಿನಿಮಾ ಬಗ್ಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ನಿರ್ದೇಶಕ ಶೂಜಿತ್ ಮತ್ತು ಕಥೆ ಬರೆದಿದ್ದ ಜೂಹಿ ಚತುರ್ವೇದಿ, ಚಿತ್ರತಂಡದ ಛಾಯಾಚಿತ್ರಗಳೊಟ್ಟಿಗೆ ಅನುಭವ ಹಂಚಿಕೊಂಡಿದ್ದಾರೆ.

ಆಕೆಯ ಪಾತ್ರದ ಇಂಟ್ರಡಕ್ಷನ್‌ ಶೂಟ್‌ ವೇಳೆ ಫಿಷ್‌ ಪ್ರೈ ಮಾಡುವುದನ್ನು ಕಲಿತ ಬಗ್ಗೆಯೂ ಬರೆದುಕೊಂಡಿದ್ದಾರೆ. ‘ನನಗೆ ಆಗ ಫಿಷ್‌ ಪ್ರೈ ಮಾಡುವುದು ಬರುತ್ತಿರಲಿಲ್ಲ. ನಿರ್ದೇಶಕರೇ ಬೆಂಗಾಲಿ ಶೈಲಿಯಲ್ಲಿ ಪ್ರೈ ಮಾಡುವುದನ್ನು ಮೊದಲ ಬಾರಿಗೆ ನನಗೆ ಕಲಿತುಕೊಟ್ಟರು’ ಎಂದು ನೆನಪಿಗೆ ಜಾರಿದ್ದಾರೆ.

ಶೂಟಿಂಗ್‌ ನಡೆಸಿದ ಗೆಸ್ಟ್‌ಹೌಸ್‌ ಚಿತ್ರವನ್ನೂ ಯಾಮಿ ಪೋಸ್ಟ್‌ ಮಾಡಿದ್ದಾರೆ. ಇಡೀ ಚಿತ್ರತಂಡ ಅಲ್ಲಿಯೇ ಕುಟುಂಬದಂತೆ ನೆಲೆಸಿತ್ತಂತೆ. ವೀರ್ಯಾಣು ದಾನ ಮತ್ತು ಬಂಜೆತನದ ಸುತ್ತ ಈ ಸಿನಿಮಾದ ಕಥೆ ಹೆಣೆಯಲಾಗಿತ್ತು. ಇದಕ್ಕೆ ಜಾನ್‌ ಅಬ್ರಹಾಂ ಮತ್ತು ರೊನ್ನಿ ಲಾಹಿತಿ ಬಂಡವಾಳ ಹೂಡಿದ್ದರು.

ಪ್ರಸ್ತುತ ಯಾಮಿ ಹಿಂದಿಯ ’ಗಿನ್ನಿ ವೆಡ್ಸ್‌ ಸುನ್ನಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಕ್ಕೆ ಪುನೀತ್‌ ಖನ್ನಾ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.