ADVERTISEMENT

ಕೋವಿಡ್‌ ಹೋರಾಟಗಾರರಿಗೆ ಬಾಲಿವುಡ್‌ ನಟಿ ವಿದ್ಯಾ ಬಾಲನ್‌ ನೆರವು

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2020, 19:30 IST
Last Updated 28 ಏಪ್ರಿಲ್ 2020, 19:30 IST
ವಿದ್ಯಾ ಬಾಲನ್
ವಿದ್ಯಾ ಬಾಲನ್   

ದೇಶದಾದ್ಯಂತ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುವವರಿಗೆ ನಟ, ನಟಿಯರು ತಮ್ಮ ಕೈಲಾದ ಸೇವೆ ಮಾಡುತ್ತಿದ್ದಾರೆ. ಈ ನಡುವೆಯೇ ವಿಭಿನ್ನವಾಗಿ ಸಹಾಯದ ಹಸ್ತ ಚಾಚಿದ್ದಾರೆ ಬಾಲಿವುಡ್‌ ನಟಿ ವಿದ್ಯಾ ಬಾಲನ್‌. ಕೊರೊನಾ ವಿರುದ್ಧ ಹೋರಾಡುವ ವೈದ್ಯರಿಗೆ 2,500 ಪಿಪಿಇ ಕಿಟ್‌ಗಳ ವಿತರಣೆಯ ಜೊತೆಗೆ ಮುಖ್ಯಭೂಮಿಕೆಯಲ್ಲಿ ದುಡಿಯುತ್ತಿರುವವರಿಗೆ ₹ 16 ಲಕ್ಷ ನೀಡುವ ಭರವಸೆ ನೀಡಿದ್ದಾರೆ.

ಸೆಲೆಬ್ರಿಟಿ ಶೌಟ್‌–ಔಟ್ ವೇದಿಕೆಯ ಸಹಯೋಗದಡಿ ‘ದೃಶ್ಯಂ ಫಿಲಂಸ್‌’ ಸಂಸ್ಥೆಯ ನಿರ್ಮಾತೃ ಮನೀಶ್ ಮಂದ್ರಾ ಹಾಗೂ ನಿರ್ಮಾಪಕ ಅತುಲ್ ಕಸ್ಬೇಕರ್ ಅವರು ವಿದ್ಯಾ ಅವರ ಜೊತೆಗೆ ಕೈಜೋಡಿಸಿದ್ದಾರೆ.

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ವಿದ್ಯಾ ವಿಡಿಯೊದಲ್ಲಿ ಹೇಳಿರುವುದು ಹೀಗೆ: ‘ಇವತ್ತು ಬೆಳಿಗ್ಗೆ ನಾನು ಎದ್ದಾಗ ನನಗೊಂದು ಖುಷಿಯ ಸಂಗತಿ ಎದುರಾಗಿತ್ತು. ನಮ್ಮ ಬಳಿ 2,500ಕ್ಕೂ ಹೆಚ್ಚು ಪಿಪಿಇ ಕಿಟ್‌ಗಳ ಸಂಗ್ರಹವಿತ್ತು. ಕೆಲವೇ ಗಂಟೆಗಳಲ್ಲಿ ನಾವು ₹ 16 ಲಕ್ಷ ಸಂಗ್ರಹಿಸಿದ್ದೆವು. ಇದಕ್ಕೆ ಕಾರಣೀಕರ್ತರಾದ ಹಾಗೂ ನನ್ನ ಗುರಿಯನ್ನು ಈಡೇರಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಹಾಗೂ ಕೃತಜ್ಞತೆ ಸಲ್ಲಿಸುತ್ತೇನೆ. ಇದು ನಿಜಕ್ಕೂ ಭಾರತದ ಒಗ್ಗಟ್ಟು ಹಾಗೂ ನಮ್ಮೆಲ್ಲರ ಮನೋಭಾವಕ್ಕೆ ಹಿಡಿದ ಕನ್ನಡಿ’ ಎಂದಿದ್ದಾರೆ.

ADVERTISEMENT

‘ಪ್ರಪಂಚದ ಮೂಲೆ ಮೂಲೆಯಿಂದಲೂ ನೀವು ನೀಡಿದ ದೇಣಿಗೆಗೆ ತುಂಬಾ ಸಂತೋಷವಾಗಿದೆ. ಕೆಲವೇ ಗಂಟೆಗಳಲ್ಲಿ ಗುರಿ ಸಾಧನೆಗಾಗಿ ಇಷ್ಟು ಹಾದಿ ಕ್ರಮಿಸಿರುವುದಕ್ಕೆ ಖುಷಿಯಾಗುತ್ತಿದೆ. ನಮ್ಮ ಆರಂಭಿಕ ಗುರಿಯನ್ನು ದುಪ್ಪಟ್ಟುಗೊಳಿಸಿದ್ದು ಖುಷಿ ಕೊಟ್ಟಿದೆ’ ಎಂದು ಹೇಳಿದ್ದಾರೆ.

ವಿದ್ಯಾ ನೇತೃತ್ವದ ತಂಡದ ಕಾರ್ಯವು ಕೊರೊನಾ ಭೀತಿ ಕಡಿಮೆಯಾಗುವವರೆಗೂ ಹೀಗೆಯೇ ಮುಂದುವರಿಯುತ್ತದೆಯಂತೆ. ಹಾಗಾಗಿ, ಸಹಾಯ ಮಾಡುವ ಉದ್ದೇಶ ಹೊಂದಿದವರು www.tring.co.inಗೆ ಹೋಗಿ ಕೈಲಾದಷ್ಟು ಸಹಾಯ ಮಾಡಬಹುದು. ‘ಪ್ರತಿಯೊಂದು ಕಿಟ್‌ ಕೂಡ ಒಂದು ಜೀವವನ್ನು ರಕ್ಷಿಸುವ ಕೆಲಸ ಮಾಡುತ್ತದೆ’ ಎಂದು ಹೇಳಿದ್ದಾರೆ ವಿದ್ಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.